ರಮೇಶ ದೊಡ್ಡಪುರ, ಬೆಂಗಳೂರು
ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರಳ ಬಹುಮತದಿಂದ ದೂರವುಳಿದ ಬಿಜೆಪಿ ಈ ಬಾರಿ ಹೊಸ ಪ್ರಯತ್ನ ನಡೆಸುತ್ತಿದೆ. ಪ್ರತಿ ಬಾರಿ ಸರ್ಕಾರ ರಚನೆಗೆ ಇತರೆ ಪಕ್ಷದ ಶಾಸಕರನ್ನು ಸೆಳೆಯುವುದು, ಆಪರೇಷನ್ ಕಮಲದ ಮಸಿ ಅಂಟಿಸಿಕೊಳ್ಳುವುದನ್ನು ಈ ಬಾರಿ ತಪ್ಪಿಸಲು ಟಾರ್ಗೆಟ್ 150 ಸಾಧಿಸಲು ಕಳೆದೆಲ್ಲ ಬಾರಿಗಿಂತ ಹೆಚ್ಚು ಗಂಭೀರ ಪ್ರಯತ್ನ ನಡೆಸಿದೆ.
ಹಳೆ ಮೈಸೂರಿನಲ್ಲಿ ಬಿಜೆಪಿ ಬಲ ಅತ್ಯಂತ ಕಡಿಮೆ ಇದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಇದು ಬಿಜೆಪಿಗೂ ತಿಳಿದಿಲ್ಲ ಎಂದೇನಿಲ್ಲ. ಆದರೆ ಈ ಲೋಪವನ್ನು ಸರಿಪಡಿಸಿಕೊಳ್ಳಲು ರಾಜ್ಯ ಬಿಜೆಪಿಯಾಗಲಿ, ರಾಷ್ಟ್ರೀಯ ಬಿಜೆಪಿಯಾಗಲಿ ಗಂಭೀರ ಪ್ರಯತ್ನ ನಡೆಸಿದ್ದು ಕಡಿಮೆ. ಆದರೆ ಈ ಬಾರಿ ಶತಾಯ ಗತಾಯ 150 ಸ್ಥಾನ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಪಕ್ಷ ಹಳೆ ಮೈಸೂರಿನ 11 ಜಿಲ್ಲೆಗಳ ಕಡೆಗೆ ವಿಶೇಷ ಗಮನ ನೀಡಿದೆ. ಇತ್ತೀಚಿನ ವರ್ಷಗಳಲ್ಲೇ ಕನಿಷ್ಠ 11 ಬಾರಿ ಈ ಭಾಗದ ಜನರ ಗಮನ ಸೆಳೆದಿದೆ.
ಹಳೆ ಮೈಸೂರಿನಲ್ಲಿ ಕೇವಲ ಶೇ.24
೨೦೧೮ರ ಚುನಾವಣೆಯಲ್ಲಿ 104 ಸ್ಥಾನ ಗೆದ್ದ ಬಿಜೆಪಿ, ಸರ್ಕಾರ ರಚಿಸಲು ಸಾಧ್ಯವಾಗದೇ ಸುಮ್ಮನಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಎಚ್.ಡಿ. ಕುಮಾರಸ್ವಾಮಿ ಎರಡನೇ ಬಾರಿಗೆ ಸಿಎಂ ಆದರು. ಹಳೆ ಮೈಸೂರಿನ 11 ಜಿಲ್ಲೆಗಳಲ್ಲಿ ಒಟ್ಟು 89 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಬಿಜೆಪಿ ಗೆದ್ದಿದ್ದು 22 ಕ್ಷೇತ್ರಗಳಲ್ಲಿ. ಅಂದರೆ ಶೇಕಡಾವಾರು ಲೆಕ್ಕ ಮಾಡಿದರೆ ಶೇ. 24 ಕ್ಷೇತ್ರಗಳನ್ನು ಹಳೆ ಮೈಸೂರು ಭಾಗದಲ್ಲಿ ಜಯಿಸಿತ್ತು. ಉಳಿದ ಕರ್ನಾಟಕದ 135 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು ಬರೊಬ್ಬರಿ 82 ಶಾಸಕರನ್ನು. ಅಂದರೆ ಒಟ್ಟು ಕ್ಷೇತ್ರದ ಶೇ.60ರಲ್ಲಿ ಬಿಜೆಪಿ ಶಾಸಕರು ಜಯಗಳಿಸಿದ್ದರು.
ಕಾಂಗ್ರೆಸ್-ಜೆಡಿಎಸ್‌ನಿಂದ ಹೊರಬಂದು ಸಮ್ಮಿಶ್ರ ಸರ್ಕಾರ ಪತನವಾಗಲು ಕಾರಣರಾದ 17 ಶಾಸಕರು ಬಿಜೆಪಿ ಕಡೆಗೆ ವಾಲಿದರು. ಇವರು ರಾಜೀನಾಮೆ ನೀಡಿ, ಉಪಚುನಾವಣೆಯನ್ನು ಎದುರಿಸಿದರು. ಈ ಉಪಚುನಾವಣೆ ನಂತರ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಶಾಸಕರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಕೊಳ್ಳೆಗಾಲ ಶಾಸಕ ಮಹೇಶ್ ಅವರನ್ನೂ ಪರಿಗಣಿಸಿದರೆ 30 ಶಾಸಕರಿದ್ದಾರೆ. ಅಂದರೆ ಒಟ್ಟು ಶಾಸಕರಲ್ಲಿ ಶೇ.33ಕೆಕ ಏರಿಕೆ ಕಂಡಿದೆ. ಆದರೆ, ಹಳೆ ಮೈಸೂರು ಭಾಗದ ಹೊರತಾಗಿ ಇತರೆ ಭಾಗದಲ್ಲಿಯೂ ಅನೇಕರು ಬಿಜೆಪಿ ಕಡೆಗೆ ವಾಲಿದ್ದರಿಂದ ಅಲ್ಲಿನ ಸ್ಟ್ರೈಕ್ ರೇಟ್ ಶೇ. 66 ಆಗಿದೆ. ಹಾಗಾಗಿ, ಇತರೆಡೆಗೆ ಹೋಲಿಸಿದರೆ ಹಳೆ ಮೈಸೂರಿನಲ್ಲಿ ಬಿಜೆಪಿ ಬಲ ಅರ್ಧದಷ್ಟು ಕಡಿಮೆ ಇದೆ.
ರಾಜ್ಯದ ಶೇ. 40 ಶಾಸಕರನ್ನು ಹೊಂದಿರುವ ಭಾಗದಲ್ಲಿ ದುರ್ಬಲವಾಗಿರುವ ಸಂಘಟನೆಯನ್ನು ಭದ್ರಪಡಿಸಿಕೊಳ್ಳದೇ ಹೋದರೆ ಟಾರ್ಗೆಟ್ 150 ಇರಿಸಿಕೊಳ್ಳುವುದೇ ನಿರರ್ಥಕ ಎನ್ನುವುದು ಪಕ್ಷಕ್ಕೆ ಮನವರಿಕೆಯಾಗಿದೆ. ಹೀಗಾಗಿ ಹೆಚ್ಚಿನ ಗಮನವನ್ನು ಕಳೆದ ಮೂರು ವರ್ಷದಿಂದಲೂ ಹಳೆ ಮೈಸೂರು ಭಾಗಕ್ಕೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ನಡೆಸುತ್ತಿರುವ 11 ಪ್ರಯತ್ನಗಳು ಕೆಳಕಂಡಂತಿವೆ.
1. ಬೆಂಗಳೂರು-ಮೈಸೂರು ದಶಪಥ
ಹಳೆ ಮೈಸೂರು ಭಾಗದ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಬೆಂಗಳೂರು ಹಾಗೂ ಮೈಸೂರನ್ನು ಸಂಪರ್ಕಿಸುವ ದಶಪಥ ರಸ್ತೆ ಕಾಮಗಾರಿಯು ಬಿಜೆಪಿಗೆ ಬಹುದೊಡ್ಡ ಮೈಲೇಜ್ ತಂದುಕೊಡಲಿದೆ. ಬೆಂಗಳೂರಿನಲ್ಲಿ 28 ಹಾಗೂ ಮೈಸೂರಿನಲ್ಲಿ 11 ಶಾಸಕರಿದ್ದು, ನಡುವೆ ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ.
ಕೇವಲ 90 ನಿಮಿಷದಲ್ಲಿ ಮೈಸೂರಿಗೆ ಪ್ರಯಾಣಿಸಬಹುದು ಎಂದು ಹೇಳಲಾಗುತ್ತಿರುವ ರಸ್ತೆ ಕಾಮಗಾರಿ ಈ ವೇಳೆಗಾಗಲೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಕೆಲ ಅಡಚಣೆಗಳಿಂದಾಗಿ ತಡವಾಗುತ್ತಿದೆ. ಡಿಸೆಂಬರ್ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರೇ ರಸ್ತೆಯನ್ನು ಉದ್ಘಾಟನೆ ಮಾಡಲಿದ್ದಾರೆ ಎನ್ನಲಾಗಿದೆ. ದಶಪಥದ ಅಕ್ಕಪಕ್ಕದಲ್ಲಿರುವ ಹಳ್ಳಿಗಳಿಗೆ ಇತ್ತೀಚನ ಮಳೆಯಿಂದ ಹಾನಿಯಾಗಿದ್ದು, ಅದರ ಪರಿಹಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ.
೨. ವಿಶ್ವ ಯೋಗ ದಿನ
ನರೇಂದ್ರ ಮೋದಿ ಪ್ರಧಾನಿಯಾದ ನಂತರ ವಿಶ್ವಾದ್ಯಂತ ಯೋಗದ ಪ್ರಸಿದ್ಧಿ ಹೆಚ್ಚಾಗಿದೆ. ಸ್ವತಃ ಯೋಗಾಭ್ಯಾಸ ಮಾಡುವ ಪ್ರಧಾನಿ, ವಿಶ್ವ ಸಂಸ್ಥೆಯ ವತಿಯಿಂದಲೇ ಪ್ರತಿ ವರ್ಷ ಜೂನ್ 21 ನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಲು ಕಾರಣರಾಗಿದ್ದಾರೆ. ಪ್ರಸಕ್ತ ವರ್ಷದ ಯೋಗ ದಿನವನ್ನು ಮೈಸೂರಿನಲ್ಲಿಯೇ ಆಯೋಜನೆ ಮಾಡಲಾಗಿತ್ತು.
ಅನೇಕ ವರ್ಷಗಳಿಂದಲೂ ಯೋಗದ ತವರೂರೆನಿಸಿಕೊಂಡಿರುವ ಮೈಸೂರಿನಲ್ಲಿಯೇ ಕಾರ್ಯಕ್ರಮ ಆಯೋಜನೆ ಮಾಡಿ, ಅನೇಕ ದಿನಗಳು ಮೈಸೂರು ಭಾಗದಾದ್ಯಂತ ಮೋದಿ ಹವಾ ಇರುವಂತೆ ನೋಡಿಕೊಳ್ಳಲಾಯಿತು. ಹತ್ತಾರು ಸಾವಿರ ಜನರು ಅಭ್ಯಾಸ ಮಾಡಿ, ಮೋದಿ ಜತೆಗೆ ಪ್ರದರ್ಶಿಸಿದರು. ಮೈಸೂರು ರಾಜವಂಶಸ್ಥರ ಜತೆಗೆ ಉಪಾಹಾರ ಸೇವಿಸಿದರು, ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆದರು.
3. ಬೆಂಗಳೂರಿನಲ್ಲಿ ಕಾರ್ಯಕ್ರಮ
ಮೈಸೂರಿನಲ್ಲಿ ಯೋಗ ದಿನಕ್ಕೆ ಆಗಮಿಸುವ ಸಂದರ್ಭದಲ್ಲೇ ಬೆಂಗಳೂರಿನಲ್ಲೂ ಪ್ರಧಾನಿ ಮೋದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಬೆಂಗಳೂರಿಗರು ಅನೇಕ ವರ್ಷಗಳಿಂದ ಕಾಯುತ್ತಿರುವ ಸಬ್‌ಅರ್ಬನ್ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ವಿವಿಧ ಯೋಜನೆಗಳ ಜತೆಗೆ, ಬೆಂಗಳೂರು ವಿವಿ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕ್ಯಾಂಪಸ್ ಹಾಗೂ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದರು. ಜೂನ್ 20 ಹಾಗೂ 21ರಂದು ರಾಜ್ಯಾದ್ಯಂತ ಮೋದಲಿ ಅಮೆ ಆವರಿಸಿಕೊಂಡಿತು.
4. ಫಲಾನುಭವಿಗಳ ಸಮಾವೇಶ
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿವಿಧ ರಾಜ್ಯಗಳಲ್ಲಿ ಚುನಾವಣೆ ಗೆಲ್ಲಲು ಪ್ರಮುಖ ಕಾರಣಗಳಲ್ಲಿ ಒಂದು, ಫಲಾನುಭವಿಗಳ ಸಮಾವೇಶ. ಪ್ರತಿ ರಾಜ್ಯದಲ್ಲೂ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ನೇರವಾಗಿ ಫಲಾನುಭವಿಗಳಾಗಿರುವ ಮಹಿಳೆಯರು, ರೈತರು, ಉದ್ಯಮಿಗಳನ್ನು ಆಯಾ ಸರ್ಕಾರಿ ಇಲಾಖೆಗಳು, ಬ್ಯಾಂಕ್‌ಗಳ ಮೂಲಕವೇ ಆಹ್ವಾನಿಸಿ ಮೋದಿ ಸಂವಧ ನಡೆಸುತ್ತಾರೆ. ಸರ್ಕಾರಿ ಕಾರ್ಯಕ್ರಮವೇ ಆದರೂ ಪರೋಕ್ಷವಾಗಿ ಬಿಜೆಪಿಗೆ ಅತಿ ದೊಡ್ಡ ಲಾಭ ತಂದುಕೊಡುತ್ತಿದೆ.
ಇದರ ಮುಂದುವರಿದ ಭಾಗವಾಗಿ ಮೈಸೂರಿನಲ್ಲಿ ಜೂನ್ 20ರಂದು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದರು.ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವಿದ್ದು, ಹೆಗಲಿಗೆ ಹೆಗಲು ಕೊಟ್ಟು ಅಭಿವೃದ್ಧಿಯತ್ತ ಹೋಗುತ್ತಿದ್ದೇವೆ. ಕಳೆದ 8 ವರ್ಷಗಳಲ್ಲಿ ಗರೀಬ್ ಕಲ್ಯಾಣ್ ಯೋಜನೆ ವಿಸ್ತರಿಸಲಾಗಿದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ ಜಾರಿ ಮಾಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಿಂದಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗಿದ್ದು, ಸಮಾಜ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಕೇಂದ್ರ ಶ್ರಮಿಸುತ್ತಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಖಾತೆಗಳಿಗೆ ಸಹಾಯಧನ ವರ್ಗಾವಣೆಯಾಗುತ್ತಿದೆ ಎಂದು ಉದ್ದ ಪಟ್ಟಿಯನ್ನು ತೆರೆದಿಟ್ಟರು.
5. ತಳವಾರ- ಪರಿವಾರ
ತಳವಾರ ಹಾಗೂ ಪರಿವಾರ ಸಮುದಾಯಗಳನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡಲು ಅನೇಕ ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ರಾಜ್ಯಾದ್ಯಂತ ಈ ಸಸಮುದಾಐಗಳು ಇವೆಯಾದರೂ ಹಳೆ ಮೈಸೂರು ಭಾಗದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿವೆ. ಪ್ರಮುಖವಾಗಿ ಮೈಸೂರು-ಚಾಮರಾಜನಗರ ಪ್ರದೇಶದಲ್ಲಿರುವ ಸಮುದಾಯಗಳಿಗೆ ಎಸ್‌ಟಿ ಮೀಸಲಾತಿ ಕಲ್ಪಿಸಲು 2020ರಲ್ಲೇ ಕೇಂದ್ರ ಸರ್ಕಾರ ತೀರ್ಮಾನ ಮಾಡಿತ್ತಾದರೂ ಜಾರಿಯಾಗಿರಲಿಲ್ಲ. ಅನೇಖ ವರ್ಷಗಳ ಹಗ್ಗಜಗ್ಗಾಟದ ನಂತರ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಆದರೆ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ ಎಂಬ ಗೊಂದ ಇದೆಯಾದರೂ, ಸರ್ಕಾರ ಶೀಘ್ರದಲ್ಲೇ ಬಗೆಹರಿಸುವ ಸಾಧ್ಯತೆಯಿದೆ. ರಾಜ್ಯದಲ್ಲಿ ಒಟ್ಟು ಸುಮಾರು 20 ಲಕ್ಷ ಜನರಿಗೆ ಇದರಿಂದ ಲಾಭವಾಗುತ್ತದೆ, ಹಳೆ ಮೈಸೂರು ಭಾಗದಲ್ಲಿಯೂ ಸಣ್ಣ ಸಣ್ಣ ಸಮುದಾಯಗಳು ತನ್ನತ್ತ ಒಲಿಯಲಿವೆ ಎಂಬುದು ಬಿಜೆಪಿ ಲೆಕ್ಕಾಚಾರ.
6. ಅದ್ಧೂರಿ ದಸರಾ
ಕರ್ನಾಟಕದಲ್ಲಿ ಅನೇಕ ವರ್ಷದಿಂದಲೂ ಸರಳ ದಸರಾ ಎಂಬ ಮಾತು ಮನೆಮಾತಾಗಿತ್ತು. ಪ್ರತಿ ವರ್ಷ ರಾಜ್ಯದ ಯಾವುದಾದರೂ ಭಾಗದಲ್ಲಿ ಬರ ಅಥವಾ ನೆರೆ ಇದ್ದೇ ಇರುತ್ತದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಸರಳ ದಸರಾ ಆಚರಣೆ ಎಂದು ಹೇಳಲಾಗುತ್ತಿತ್ತು. 2020ರಲ್ಲಿ ಕಾಲಿಟ್ಟ ಕೊರೊನಾ ನಂತರವಂತೂ ಸರಳ ದಸರಾ, ಖಾಸಗಿ ದಸರಾ ಆಗಿ ಮಾರ್ಪಟ್ಟಿತ್ತು.
ಈ ವರ್ಷ ಕೆಲ ಭಾಗಗಳಲ್ಲಿ ನೆರೆ ಹಾವಳಿ ಇತ್ತಾದರೂ ಕೊರೊನಾದಿಂದ ಹೊರಬಂದ ಸಂತೋಷದಲ್ಲಿ ಅದ್ಧೂರಿ ದಸರಾ ಎಂದು ಸರ್ಕಾರ ಘೋಷಿಸಿತು. ಆಯೋಜನೆಯಿಂದ ಮೊದಲುಗೊಂಡು ಮೂಲಸೌಕರ್ಯದ ವರೆಗೆ ಯಥೇಚ್ಚವಾಗಿ ಹಣವನ್ನು ವೆಚ್ಚ ಮಾಡಲಾಯಿತು. ಸ್ಥಳೀಯ ಉದ್ಯಮಿಗಳು, ವ್ಯಾಪಾರಸ್ಥರು, ಸಣ್ಣಪುಟ್ಟ ಮಾರಾಟಗಾರರೂ ವ್ಯಾಪಾರ ನಡೆಸಿದ್ದಾರೆ. ಅನೇಕ ವರ್ಷಗಳ ನಂತರದಲ್ಲಿ ಅದ್ಧೂರಿ ದಸರಾ ನಡೆದ ಸಂಭ್ರಮದಲ್ಲಿ ಮೈಸೂರಿಗರು, ಒಟ್ಟಾರೆಯಾಗಿ ಕನ್ನಡಿಗರಿದ್ದಾರೆ, ಇದು ಬಿಜೆಪಿ ಪರ ಮೃದು ಧೋರಣೆಗೆ ಕಾರಣವಾಗುತ್ತದೆ ಎನ್ನುವುದು ಬಿಜೆಪಿ ಲೆಕ್ಕ.
ಇದೆಲ್ಲದರ ಜತೆಗೆ, ದಸರಾ ಮುಕ್ತಾಯದ ನಂತರ ಸ್ವತಃ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಮೈಸೂರಿನ ಸಂಸ್ಕೃತಿ, ಪರಂಪರೆ ಜತೆಗೆ ಇದೆಲ್ಲವನ್ನೂ ಪೋಷಣೆ ಮಾಡುತ್ತಿರುವ ಜನರಿಗೂ ಅಭಿನಂದನೆ ಸಲ್ಲಿಸಿದ್ದರು. ಈ ಹಿಂದೆ ಯೋಗ ದಿನಕ್ಕೆ ಆಗಮಿಸಿದ್ದ ನೆನಪನ್ನು ಮಾಡಿಕೊಂಡಿದ್ದರು. ಇದರಿಂದಾಗಿ, ಮೈಸೂರಿಗರಿಗೆ ಪ್ರಧಾನಿ ಮೋದಿ ಮತ್ತಷ್ಟು ಹತ್ತಿರವಾದರು.
7. ಹಿಂದ ಮತಗಳಿಗೆ ಗಾಳ
ಬಹುದೊಡ್ಡ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯಲು ಬಿಜೆಪಿ ಯಾವ ಪ್ರಯತ್ನವನ್ನೂ ಉಳಿಸುತ್ತಿಲ್ಲ. ಅನೇಕ ಬಾರಿ ಮುಂದೂಡಿಕೆ ನಂತರ ಸೆಪ್ಟೆಂಬರ್ 10ರಂದು ದೊಡ್ಡಬಳ್ಳಾಪುರದಲ್ಲಿ ನಡೆದಿದ್ದ ಜನಸ್ಪಂದನ ರ‍್ಯಾಲಿಯಲ್ಲಿ, ಹಿಂದುಳಿದ ವರ್ಗಗಳನ್ನು ಟಾರ್ಗೆಟ್ ಮಾಡಲಾಯಿತು. ನಮ್ಮ ಪಕ್ಷದಿಂದ ಎಸ್‌ಸಿ ಸಮುದಾಯಕ್ಕೆ ಸೇರಿದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಲಾಗಿದೆ. ಇದೀಗ ಪರಿಶಿಷ್ಟ ಪಂಗಡಕ್ಕೆ ಸೇರಿದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದೇವೆ. ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ಸ್ಪಂದಿಸುತ್ತದೆ ಎನ್ನಲು ಇದೇ ಸಾಕ್ಷಿ ಎಂದು ಬಿಜೆಪಿ ನಾಯಕರು ಮಾತನಾಡಿದರು. ನೇಕಾರರು ಹಾಗೂ ರೈತರು ನಮ್ಮ ಸರ್ಕಾರದ ಎರಡು ಕಣ್ಣುಗಳಿದ್ದಂತೆ. ಇದೇ ಕಾರಣಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ನೇಕಾರರು ಹಾಗೂ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ ಎಂದರು.
ರ‍್ಯಾಲಿ ನಡೆದ ದಿನ ರಾತ್ರಿಯೇ, ಮೈಸೂರು ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಾಗುತ್ತದೆ ಎಂದು ಬಿಜೆಪಿ ಘೋಷಿಸಿತು. ಎಸ್‌ಟಿ ಸಮುದಾಯಕ್ಕೆ ಸೇರಿದ ಮುರ್ಮು ಅವರು ಮೈಸೂರಿಗೆ ಆಗಮಿಸಿ ದಸರಾದ ಉದ್ಘಾಟಿಸಿದರು. ಕರ್ನಾಟಕ ಸಂಸ್ಕೃತಿಯನ್ನು ಕೊಂಡಾಡಿದರು. ಮುರ್ಮು ಅವರ ಸ್ವಾಗತಕ್ಕೆ ಸ್ಥಳೀಯ ಬುಡಕಟ್ಟು ಸಮುದಾಯದ ನೃತ್ಯ ಏರ್ಪಡಿಸುವುದು ಸೇರಿ, ಹಿಂದುಳಿದ ವರ್ಗ ಮತ್ತು ಎಸ್‌ಸಿಎಸ್‌ಟಿ ಸಮುದಾಯಕ್ಕೆ ಸಂದೇಶ ನೀಡುವ ಪ್ರಯತ್ನ ಮಾಡಲಾಯಿತು.
8. ಕುಂಭ ಮೇಳದ ಮೋಡಿ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಕ್ಷಿಣ ಭಾರತದ ಮಹಾ ಕುಂಭ ಮೇಳ ಆಯೋಜನೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆಗಮಿಸಬೇಕಿತ್ತಾದರೂ, ಉತ್ತರ ಪ್ರದೇಶದಲ್ಲಿ ನೆರೆ ಹೆಚ್ಚಳವಾದ ಕಾರಣಕ್ಕೆ ಆಗಮಿಸಲಿಲ್ಲ.
ಅದನ್ನು ಹೊರತುಪಡಿಸಿ ಅತ್ಯಂತ ಶಿಸ್ತುಬದ್ಧವಾಗಿ, ವೈಭವಯುತವಾಗಿ ಕುಂಭಮೇಳ ನೆರವೇರಿತು. ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳೂ ಶಾಸಕರನ್ನು ಹೊಂದಿದ್ದ ಜೆಡಿಎಸ್‌ನಿಂದ, ಒಂದು ಸ್ಥಾನವನ್ನು ಬಿಜೆಪಿಗೆ ದೊರಕಿಸಿಕೊಟ್ಟವರು ನಾರಾಯಣಗೌಡ. ಅವರ ಮೂಲಕವೇ ಉತ್ಸವವನ್ನು ಆಯೋಜಿಸಿದ್ದ ಸರ್ಕಾರ, ಪ್ರತಿ 12 ವರ್ಷಕ್ಕೊಮ್ಮೆ ಕುಂಭ ಮೇಳ ನಡೆಸುವುದಾಗಿ ಘೋಷಣೆ ಮಾಡಿತು.
9. ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲು
ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುತ್ತಿದ್ದ ಟಿಪ್ಪು ಎಕ್ಸ್‌ಪ್ರೆಸ್ ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಅಕ್ಟೋಬರ್ ಮೊದಲ ವಾರದಲ್ಲಿ ಬದಲಾವಣೆ ಮಾಡಲಾಯಿತು. ಟಿಪ್ಪು ಹೆಸರನ್ನು ಬದಲಿಸುವ ಬದಲು, ಹೊಸ ರೈಲಿಗೆ ಚಾಲನೆ ನೀಡಿ ಅದಕ್ಕೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ಹೆಸರಿಡಿ ಎಂದು ಪ್ರತಿಪಕ್ಷಗಳು ಸಲಹೆ ನೀಡಿದ್ದವು. ಆದರೆ ಕಳೆದ ಚುನಾವಣೆ ವೇಳೆಯಲ್ಲೇ ಟಿಪ್ಪು ವಿರೋಧಿ ನಿಲುವಿನಿಂದಾಗಿ ಸಾಕಷ್ಟು ಲಾಭ ಮಾಡಿಕೊಂಡಿದ್ದ ಬಿಜೆಪಿ ಈ ಬಾರಿಯೂ ಅದನ್ನು ಮುಂದುವರಿಸಲು ತೀರ್ಮಾನಿಸಿತು.
ಸಂಸದ ಪ್ರತಾಪ್ ಸಿಂಹ ನೀಡಿದ್ದ ಮನವಿಯನ್ನು ಪರಿಗಣಿಸಿ ಒಡೆಯರ್ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಿತು. ಇದರಿಂದಾಗಿ, ಹಳೆ ಮೈಸೂರು ಭಾಗದಲ್ಲಿ ಹಿಂದು ಮತಗಳ ಕ್ರೋಢೀಕರಣಕ್ಕೆ ಪ್ರಯತ್ನ ನಡೆಸಲಾಯಿತು.
10. ವಂದೇ ಭಾರತ್ ಎಕ್ಸ್‌ಪ್ರೆಸ್
ದೇಶಾದ್ಯಂತ ಅತಿ ವೇಗದ ರೈಲುಗಳ ಸೇವೆಯನ್ನು ಆರಂಭಿಸುತ್ತಿರುವ ಮೋದಿ ಸರ್ಕಾರ, ಅನೇಖ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡುತ್ತಿದೆ. ಎಲ್ಲ ಕಡೆಯಲ್ಲೂ ಸ್ವತಃ ಪ್ರಧಾನಿ ಮೋದಿ ಹಸಿರು ನಿಶಾನೆ ತೋರುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮೊದಲ ವಂದೇ ಭಾರತ್ ರೈಲನ್ನು ಹುಬ್ಬಳ್ಳಿ ಮಾರ್ಗದಲ್ಲಿ ಚಲಾಯಿಸುವುದಾಗಿ ತಿಳಿಸಲಾಗಿತ್ತು. ಆದರೆ ನಂತರ ಯೋಜನೆಯನ್ನು ಬದಲಾಯಿಸಲಾಯಿತು.
ಹುಬ್ಬಳ್ಳಿ ಮಾರ್ಗದ ಬದಲಿಗೆ ಚೆನ್ನೈ-ಬೆಂಗಳೂರು-ಮೈಸೂರು ಭಾಗದಲ್ಲಿ ನವೆಂಬರ್ 10ರಂದು ಸಂಚರಿಸಲಿದೆ. ಗಂಟೆಗೆ ಸರಾಸರಿ 130 ಕಿ.ಮೀ. ಚಲಿಸಬಲ್ಲ ರೈಲು ಸೇವೆಯು ಮುಖ್ಯವಾಗಿ ಬೆಂಗಳೂರು-ಮೈಸೂರು ನಡುವಿನ ಸಂಚಾರ ಸಮಯವನ್ನು ಕಡಿಮೆ ಮಾಡುವ ವಿಶ್ವಾಸವಿದೆ.
11. ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ
ರಾಜ್ಯದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ಎಂದರೆ ಬೆಂಗಳೂರು. 28 ವಿಧಾನಸಭೆ ಕ್ಷೇತ್ರಗಳಲ್ಲಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಬಂದವರನ್ನೂ ಸೇರಿ ಸದ್ಯ ಬಿಜೆಪಿಯ 15 ಶಾಸಕರಿದ್ದಾರೆ. ಈ 15 ಸಂಖ್ಯೆಯನ್ನು ಉಳಿಸಿಕೊಂಡು, 20ರವರೆಗೂ ವಿಸ್ತರಿಸಿಕೊಳ್ಳುವುದು ಬಿಜೆಪಿ ಆಲೋಚನೆ.
ಈಗಾಗಕೆ ಸಬ್‌ಅರ್ಬನ್ ರೈಲು, ಸ್ಮಾರ್ಟ್ ಸಿಟಿ ಸೇರಿ ಅನೇಕ ಯೋಜನೆಗಳನ್ನು ಬಿಜೆಪಿ ನೀಡಿದೆಯಾದರೂ ಇಲ್ಲಿನ ಮೂಲಸೌಕರ್ಯ ಕೊರತೆಯು ಬಿಜೆಪಿ ಪರ ವಾತಾವರಣ ನಿರ್ಮಿಸುವಲ್ಲಿ ಹಿಂದೆ ಬಿದ್ದಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಪ್ರತಿಷ್ಠಿತ ಲೇಔಟ್‌ಗಳ ಜಲಾವೃತವಾಗಿದ್ದು, ರಸ್ತೆಯಲ್ಲಿ ಗುಂಡಿ ಬಿದ್ದಿರುವುದು ಬಿಜೆಪಿಗೆ ಹಿನ್ನಡೆ ಉಂಟುಮಾಡುತ್ತಿದೆ.
ಆದರೆ ಚುನಾವಣೆ ವೇಳೆಗೆ ಈ ಮೂಲಸೌಕರ್ಯ ಸಮಸ್ಯೆಯನ್ನು ಸರಿಪಡಿಸುವ ಗುರಿಯನ್ನು ಬಿಜೆಪಿ ಸರ್ಕಾರ ಹೊಂದಿದೆ. ಇದಿಷ್ಟೇ ಅಲ್ಲದೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನ್ನು ನವೆಂಬರ್ 11ರಂದು ಮೋದಿ ಉದ್ಘಾಟಿಸಲಿದ್ದಾರೆ. ಇದರ ಜತೆಗೆ, ನಾಡ ಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ ನಾಗರಿಕರ ಜತೆಗೆ, ಒಕ್ಕಲಿಗ ಸಮುದಾಯವನ್ನು ಗಮನದಲ್ಲಿರಿಸಿ ಈ ಕಾರ್ಯಕ್ರಮ ರೂಪಿಸಲಾಗಿದೆ.
ಒಕ್ಕಲಿಗ ಸಮುದಾಯದವರೇ ಆದ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದು, ಈಗಾಗಲೆ ರಾಜ್ಯದ ಹಳ್ಳಿ ಹಳ್ಳಿಗಳಿಂದ ಮೃತ್ತಿಕೆ ಸಂಗ್ರಹ ಅಭಿಯಾನ ನಡೆಯುತ್ತಿದೆ. ಕೆಂಪೇಗೌಡರ ಪ್ರತಿಮೆಯು ಹಳೆ ಮೈಸೂರಿನಲ್ಲಿ ಪ್ರಬಲವಾಗಿರುವ ಸಮುದಾಯವನ್ನು ತಲುಪುವ ಅಭಿಯಾನವಾಗಲಿ ಎಂಬಂತೆ ಯೋಜನೆ ರೂಪಿಸಲಾಗಿದೆ.
ಪ್ರಮುಖ ವ್ಯಕ್ತಿಗಳು
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲವನ್ನು ಹೆಚ್ಚಿಸಲು ಪ್ರಮುಖವಾಗಿ ನಾಲ್ಕೈದು ವ್ಯಕ್ತಿಗಳನ್ನು ಬಿಜೆಪಿ ನಿಯೋಜನೆ ಮಾಡಿದೆ. ಮುಖ್ಯವಾಗಿ ಕಾಂಗ್ರೆಸ್ ಬಲವನ್ನು ಉಡುಗಿಸಬೇಕು ಎಂಬ ಉದ್ದೇಶದಲ್ಲಿ ಐಟಿಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಕಾರ್ಯಪ್ರವೃತ್ತರಾಗಿದ್ದಾರೆ. ರಾಮನಗರ, ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಸಹೋದರರ ಜತೆಗೆ ಕಾಳಗಕ್ಕೆ ಇಳಿದಿದ್ದಾರೆ. ಇವರ ಜತೆಗೆ ಸಿ.ಪಿ. ಯೋಗೇಶ್ವರ್ ಇದ್ದಾರೆ. ಮಂಡ್ಯದಲ್ಲಿ ಸಚಿವ ನಾರಾಯಣಗೌಡ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ, ಇತ್ತೀಚೆಗೆ ಕುಂಭ ಮೇಳವನ್ನೂ ಆಯೋಜಿಸಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳು, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ, ಟಿಪ್ಪು ರೈಲು ಹೆಸರು ಬದಲಾವಣೆಯಂತಹ ವಿಚಾರಗಳನ್ನು ಸಂಸದ ಪ್ರತಾಪ್ ಸಿಂಹ ಪ್ರಚುರಪಡಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ ಬಿ.ವೈ. ವಿಜಯೇಂದ್ರ ಅವರನ್ನು ಈ ಭಾಗದಲ್ಲಿ ಬಳಸಿಕೊಳ್ಳುವ ಯೋಜನೆಯನ್ನು ಪಕ್ಷ ಹೊಂದಿದೆ. ವೀರಶೈವ ಲಿಂಗಾಯ ಸಮುದಾಯವಷ್ಟೆ ಅಲ್ಲದೆ, ಒಟ್ಟಾರೆ ಯುವ ಸಮುದಾಯವನ್ನು ವಿಜಯೇಂದ್ರ ಸೆಳೆಯಬಲ್ಲರು ಎನ್ನುವುದು ಉಪಚುನಾವಣೆ, ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಾಬೀತಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರೂ ಹೆಚ್ಚೆಚ್ಚು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮುನ್ಸೂಚನೆಯನ್ನು ಈಗಾಗಲೆ ನೀಡಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ತುಸು ಹೆಚ್ಚಾಗಿಯೇ ಇರುವ ಮೋದಿ ಅಲೆಯನ್ನೂ ಬಿಜೆಪಿ ಯಥೇಚ್ಚವಾಗಿ ಬಳಸಿಕೊಳ್ಳುವುದಂತೂ ಶತಃಸಿದ್ಧ.
ಇದನ್ನೂ ಓದಿ | ರಾ..ರಾ.. ಎನ್ನುತ್ತಿರುವ ಕಾಂಗ್ರೆಸಿಗರು| ಸಂಘಟನೆಯೋ? ಚುನಾವಣೆಯೋ?: ಚೆಂಡು ಈಗ ಡಿ.ಕೆ. ಶಿವಕುಮಾರ್ ಅಂಗಳದಲ್ಲಿ!