Site icon Vistara News

ಭ್ರಷ್ಟರು ಯಾರು? ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್, ಪೋಸ್ಟರ್ ಸಮರ

bjp poster

ಬೆಂಗಳೂರು: ಇಂದು ಬೆಂಗಳೂರಿನಾದ್ಯಂತ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್‌ ಮುಖಂಡರ ವಿರುದ್ಧ ಬಿಜೆಪಿ ಸರಣಿ ಟ್ವೀಟ್‌ಗಳು ಹಾಗೂ ಪೋಸ್ಟರ್‌ಗಳ ಮೂಲಕ ಸಮರಕ್ಕೆ ಇಳಿದಿದೆ.

ಬಿಜೆಪಿ ಕರ್ನಾಟಕ ಖಾತೆಯಿಂದ ಕಾಂಗ್ರೆಸ್‌ ಮುಖಂಡರ ಮೇಲೆ ಸರಣಿ ಆರೋಪಗಳ ಟ್ವೀಟ್‌ ಮಾಡಲಾಗಿದೆ. ʼಸಿದ್ದರಾಮಯ್ಯ ಸರ್ಕಾರ ಇದ್ದಾಗ ಕಾಂಗ್ರೆಸ್ ಹೈಕಮಾಂಡ್‌ಗೆ 100 ಕೋಟಿ ಕಳುಹಿಸಿದ್ದರುʼ ಎಂದು ಉಲ್ಲೇಖಿಸಲಾಗಿದೆ. ʼಅರ್ಕಾವತಿ ಅಕ್ರಮ ಡೀನೋಟಿಫಿಕೇಶನ್‌ನಲ್ಲಿ ಸಾವಿರಕ್ಕೂ ಹೆಚ್ಚು ಕೋಟಿ ಹಗರಣ, ಕಸದಿಂದ ಕೋಟಿ ಕೋಟಿ ಹಗರಣ ನಡೆದಿದೆ.ʼ ʼಕಾಲ ಕಳೆದಂತೆ ಜನ ಹಳೆಯ ವಿಚಾರಗಳನ್ನು ಮರೆಯುತ್ತಾರೆ ಎಂದು ಮಾನ್ಯ @DKShivakumar ಭಾವಿಸಿದ್ದಾರೆ. ತಾನು ವ್ಯವಹಾರವೇ ನಡೆಸಬಾರದಾ ಎಂದು ಮುಗ್ಧ ವ್ಯಾಪಾರಿಯಂತೆ ಪ್ರಶ್ನಿಸುವ ಅವರು, 2017ರಲ್ಲಿ ದೆಹಲಿಯ ಅವರ ನಿವಾಸದಲ್ಲಿ 8.86 ಕೋಟಿ ರೂ.ನಷ್ಟು ನಗದು ನಳನಳಿಸುತ್ತಿದ್ದುದು ಹೇಗೆ ಎಂದು ಇನ್ನೂ ತಿಳಿಸಿಲ್ಲʼ ಎಂಬ ಒಕ್ಕಣೆ ಈ ಟ್ವೀಟ್‌ಗಳಲ್ಲಿ ಇದೆ.

bjp poster

ʼಸೌರ ವಿದ್ಯುತ್‌ ಹೆಸರಲ್ಲಿ @DKShivakumar ತಂತ್ರಜ್ಞಾನವನ್ನೇ ಮೀರಿಸುವಂತೆ ಭ್ರಷ್ಟಾಚಾರ ನಡೆಸಿದ್ದರು. ಸದಾ ಸರ್ವರ್‌ ಬಿಜಿ಼ ಇರಿಸಿ ತಮಗೆ ಬೇಕಾದ ಆಯ್ದ ವ್ಯಕ್ತಿಗಳ ಜತೆ ವ್ಯವಹಾರ ಕುದುರಿಸಿದ ಮೇಲೆ ಏಳೇ ನಿಮಿಷಗಳಲ್ಲಿ ಕೋಟ್ಯಂಟರ ರೂ. ಟೆಂಡರ್‌ ಪ್ರಕ್ರಿಯೆ ಮುಗಿಸಿದ ಕೀರ್ತಿ ಅವರದ್ದು. ಆ ವೇಳೆ @laxmi_hebbalkar ಅವರ ತಾಯಿ ಹಾಗೂ ಸಹೋದರನ ಹೆಸರಲ್ಲೂ ಟೆಂಡರ್‌ ಮಾಡಿಸಿದ @DKShivakumar ಬೇನಾಮಿ ವ್ಯವಹಾರದ ಎಕ್ಸ್‌ಪರ್ಟ್‌. ಈಗಲೂ ತಾವು ಇಡಿ ಕರೆದಾಗ ಪಿಕ್ನಿಕ್‌ ರೀತಿ ಹೋಗಿ ಮಾಧ್ಯಮಗಳ ಮುಂದೆ ಅಲವತ್ತುಕೊಳ್ಳುತ್ತಾರೆಯೇ ವಿನಃ ಆರೋಪ ಅಲ್ಲಗಳೆಯುವ ಯಾವುದೇ ಸಾಕ್ಷ್ಯ ಒದಗಿಸಿಲ್ಲʼ ಎಂದಿದೆ.

ಇದನ್ನೂ ಓದಿ | Congress Protest : ನೇತಾಜಿ ಜನ್ಮದಿನದಂದೇ ಕಾಂಗ್ರೆಸ್‌ ಪ್ರತಿಭಟನೆ: ಸುಭಾಷ್‌ಚಂದ್ರ ಬೋಸ್‌ಗೆ ಅವಮಾನ ಎಂದ ಎನ್‌. ರವಿಕುಮಾರ್‌

ʼಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನಡೆಸುವ ಹಾಸ್ಟೆಲ್‌ಗಳಿಗೆ ಹಾಸಿಗೆ-ದಿಂಬು ಖರೀದಿಯಲ್ಲೂ @siddaramaiah ಸರ್ಕಾರ ನೋಡಿದ್ದು ಹಣ ಕಬಳಿಸುವ ದಾರಿಯನ್ನೇ. 14 ಕೋಟಿ ರೂ. ಆ ರೀತಿ ನುಂಗಿದರೆ ಆಹಾರ ಪೂರೈಕೆ ಗುತ್ತಿಗೆಗೆ ಎಚ್.‌ ಆಂಜನೇಯ ಪತ್ನಿ 7 ಲಕ್ಷ ರೂ. ಲಂಚಕ್ಕೆ ಕೈ ಒಡ್ಡಿ ವೀಡಿಯೋ ಸಹಿತ ಸಿಕ್ಕುಬಿದ್ದರು. ಇವು ಕೇವಲ ಸ್ಯಾಂಪಲ್‌ಗಳು. ಇಂಥ ಘನಂದಾರಿ ಕೆಲಸ ಮಾಡಿದ @INCKarnataka ಇವತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ. ಯಾವ ನೈತಿಕತೆಯೂ ಉಳಿದಿಲ್ಲದ ಕೈ ನಾಯಕರು ಆಡುವ ಮಾತಿಗೆ ಆಧಾರಗಳೂ ಕೊಡುತ್ತಿಲ್ಲ. ಸುಳ್ಳನ್ನೇ ನೂರು ಬಾರಿ ಗಟ್ಟಿಯಾಗಿ ಹೇಳಿ ಅದನ್ನೇ ಸತ್ಯ ಎಂದು ಬಿಂಬಿಸುವ ಹಳೇ ಸೂತ್ರದಲ್ಲೇ ಇದ್ದಾರೆʼ ಎಂದು ಟೀಕಿಸಿದೆ.

ಇದನ್ನೂ ಓದಿ | Karnataka Congress : ಇಂದು ಬೆಂಗಳೂರಿನ 300ಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ

Exit mobile version