Site icon Vistara News

BJP vs Congress | ಏಕೆ ʼಸಿಎಂ ಅಂಕಲ್‌?ʼ ಎಂಬ ಪ್ರಶ್ನೆಗೆ ʼಕಾಂಗ್ರೆಸ್‌ ಅವಿವೇಕʼ ಎಂದ ಬಿಜೆಪಿ !

ಬೆಂಗಳೂರು: ಶಾಲೆಗಳನ್ನು ದುರಸ್ತಿ ಮಾಡಿಸಿ ಬಣ್ಣ ಬಳಿಸುವ ಸಂಬಂಧ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಸಾಮಾಜಿಕ ಜಾಲತಾಣದಲ್ಲಿ ಗುದ್ದಾಟ ಜೋರಾಗಿದೆ.

ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದನ್ನು ಬಿಟ್ಟು ಗುಣಮಟ್ಟದ ಶಿಕ್ಷಣ ನೀಡಿ ಎಂದು ಕಾಂಗ್ರೆಸ್‌ ಸರಣಿ ಟ್ವೀಟ್‌ ಮಾಡುತ್ತಿದೆ. ಶಾಲಾ ಮಕ್ಕಳೇ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ʼಸಿಎಂ ಅಂಕಲ್‌?ʼ ಎಂಬ ಪ್ರಶ್ನಾರ್ಥಕದೊಂದಿಗೆ ಪೋಸ್ಟ್‌ಗಳನ್ನು ಹರಿಯಬಿಟ್ಟಿದೆ.

“ಸೈಕಲ್ ನೀಡುವ ಯೋಜನೆಯನ್ನು ಹೇಳದೆ ಕೇಳದೆ ನಿಲ್ಲಿಸಿದ ಸರ್ಕಾರ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂಕಟ ತಂದೊಡ್ಡಿದೆ. #ಸಿಎಂಅಂಕಲ್ ಬಸವರಾಜ ಬೊಮ್ಮಾಯಿ ಅವರಿಗೆ ಮಕ್ಕಳು ಮನವಿ ಮಾಡ್ತಿದ್ರೂ ಸ್ಪಂದನೆ ಇಲ್ಲವೇಕೆ? ಶಾಲೆಗೆ ಕೇಸರಿ ಬಣ್ಣ ಬಳಿಯಲು ಇರುವ ಆಸಕ್ತಿ ವಿದ್ಯಾರ್ಥಿಗಳಿಗೆ ಸೈಕಲ್ ಕೊಡುವುದರಲ್ಲಿ ಇಲ್ಲವೇಕೆ? ಕೇಸರಿ ಬಣ್ಣದ್ದಾದರೂ ಸರಿ ಸೈಕಲ್ ಕೊಡಿ”.

“ಬಣ್ಣ ಬಳಿಯುವುದು, ಧ್ಯಾನ ಮಾಡಿಸುವುದಕ್ಕಿಂತ ಮೊದಲು ಶಾಲೆಗಳ ಮೂಲ ಸೌಕರ್ಯ ಕೊರತೆಯತ್ತ ಸರ್ಕಾರ ಗಮನಿಸುವುದಿಲ್ಲವೇಕೆ? ಕಲಿಕೆಯ ಗುಣಮಟ್ಟ ಹೆಚ್ಚಿಸಲು ಮಕ್ಕಳು ಮನವಿ ಮಾಡ್ತಿದಾರೆ, ಆದರೆ ಶಿಕ್ಷಣ ಸಚಿವರಿಗೆ ಕೇಸರಿ ಬಣ್ಣದ್ದೇ ಚಿಂತೆ! #ಸಿಎಂಅಂಕಲ್, ಮಕ್ಕಳ ಬೇಡಿಕೆಗಳನ್ನು ಈಡೇರಿಸುವುದರಲ್ಲಿ ಆಸಕ್ತಿ ಇಲ್ಲವೇಕೆ?”

“ಬಡ ಮಕ್ಕಳ ಶಿಕ್ಷಣಕ್ಕೆ ಬಡತನ, ಹಸಿವು ಅಡ್ಡಿಯಾಗಬಾರದು ಎಂಬ ದೃಷ್ಟಿಯಲ್ಲಿ ಜಾರಿಗೆ ತಂದ ಬಿಸಿಯೂಟ ಯೋಜನೆಗೆ ಅನುದಾನ ನೀಡದೆ ಬಡ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಸರ್ಕಾರ. ಒಳ್ಳೆಯ ಪಾಠವೂ ಇಲ್ಲ, ಬಿಸಿ ಊಟವೂ ಇಲ್ಲ, ಊಟ, ಪಾಠದ ಸಮಸ್ಯೆ ಬಗೆಹರಿಸಲು ಯಾವ ಕ್ರಮ ಕೈಗೊಳ್ಳುವಿರಿ #ಸಿಎಂಅಂಕಲ್

“ಶಾಲೆ ಶುರುವಾಗಿ ಅರ್ಧ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ವಿದ್ಯಾರ್ಥಿಗಳಿಗೆ ಸಂಪೂರ್ಣ ಸಮವಸ್ತ್ರ ಪೂರೈಕೆಯಾಗಿಲ್ಲ. ಮಕ್ಕಳು ಎರಡು ವರ್ಷ ಹಳೆಯದಾದ ಹರಿದುಹೋದ ಸಮವಸ್ತ್ರ ಹಾಕಿಕೊಂಡು ಬರ್ತಿದ್ದಾರೆ, ಮಕ್ಕಳಿಗೆ ಸಮವಸ್ತ್ರ ನೀಡುವಲ್ಲೂ ವಿಳಂಬವೇಕೆ, ಸಮವಸ್ತ್ರ ನೀಡುವುದು ಯಾವಾಗ #ಸಿಎಂಅಂಕಲ್ ?”

ಕಾಂಗ್ರೆಸ್‌ ಅವಿವೇಕ ಎಂದ ಬಿಜೆಪಿ

ಕಾಂಗ್ರೆಸ್‌ನ ಟ್ವೀಟ್‌ಗಳಿಗೆ #ಕಾಂಗ್ರೆಸ್‌ಅವಿವೇಕ ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ಬಿಜೆಪಿ ಉತ್ತರ ನೀಡಿದೆ.

“ಶಿಕ್ಷಣ ಇಲಾಖೆಯ ಮೂಲಕ ಬಸವರಾಜ ಬೊಮ್ಮಾಯಿ ಸರ್ಕಾರ #ವಿವೇಕಯೋಜನೆ ಜಾರಿಗೊಳಿಸಿ ₹1200 ಕೋಟಿ ವೆಚ್ಚದಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲೆಯ 7,601 ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿದೆ. ಆದರೆ ಕಾಂಗ್ರೆಸ್‌ಈ ಯೋಜನೆಯಲ್ಲೂ ರಾಜಕೀಯ ಬೆರೆಸಿ, ಬಣ್ಣದ ವಿಚಾರ ಹಿಡಿದುಕೊಂಡು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ತಡೆ ನೀಡುತ್ತಿದೆ”.

“ಕೇಸರಿ ಬಣ್ಣವನ್ನು ಕಂಡರೆ ಕಾಂಗ್ರೆಸ್ ಉರಿದು ಬೀಳುವುದೇಕೆ? ಹಸಿರು ಬಣ್ಣ ಹಚ್ಚಿದರೆ ಡಿಕೆಶಿ, ಸಿದ್ದರಾಮಯ್ಯ ಸ್ವಾಗತಿಸುತ್ತಾರೆಯೇ? ಶಾಲೆಯ ಕೊಠಡಿಯ ಬಣ್ಣಕ್ಕೂ ಮಕ್ಕಳ ಭವಿಷ್ಯಕ್ಕೂ ಯಾವ ಸಂಬಂಧವಿದೆ? ಕಾಂಗ್ರೆಸ್ ನಾಯಕರು ಬಣ್ಣದ ವಿಚಾರವನ್ನು ರಾಜಕೀಯಗೊಳಿಸುತ್ತಿರುವುದೇಕೆ?”

“ಶಾಲೆಯ ಕೊಠಡಿಯ ಕೇಸರಿ ಬಣ್ಣಕ್ಕೆ ವಿರೋಧಿಸುವ ಕಾಂಗ್ರೆಸ್ ನಾಯಕರು, ತ್ರಿವರ್ಣ ಧ್ವಜದಲ್ಲಿರುವ ಕೇಸರಿ ಬಣ್ಣದ ಕುರಿತು ಯಾವ ನಿಲುವು ಹೊಂದಿದ್ದಾರೆ? ಕಾಂಗ್ರೆಸ್ ಪಕ್ಷದ ಧ್ವಜದಲ್ಲೂ ಕೇಸರಿಯಿದೆ, ಕೇಸರಿ ಕಂಡರೆ ಉರಿದು ಬೀಳುವವರು ತಮ್ಮ ಪಕ್ಷದ ಧ್ವಜದಲ್ಲಿರುವ ಕೇಸರಿ ಬಣ್ಣ ತೆಗೆದು ಪೂರ್ಣ ಹಸಿರು ಮಾಡಿಕೊಳ್ಳಲಿ.”

“ದೋಷವಿರುವುದು ಬಣ್ಣದಲ್ಲಲ್ಲ, ಕಾಂಗ್ರೆಸ್ ಸಿದ್ದಾಂತದಲ್ಲಿ!” ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ಇದನ್ನೂ ಓದಿ | 1 ಕೆಜಿ ಕುಂಕುಮ, 1 ಮೀಟರ್‌ ಕೇಸರಿ ಬಟ್ಟೆ ಹಿಡ್ಕೊಂಡು ರಾಜಕೀಯ ಮಾಡಿ ಗೆದ್ದವರು ಸಿ.ಟಿ ರವಿ: ಸಚಿನ್‌ ಮೀಗಾ

Exit mobile version