Site icon Vistara News

ಬೊಮ್ಮಾಯಿ ನೇತೃತ್ವದಲ್ಲೇ 2023ರ ಚುನಾವಣೆ: ಬಿಜೆಪಿ ಹೈಕಮಾಂಡ್‌ ಘೋಷಣೆ, ಎಲ್ಲ ಗೊಂದಲಕ್ಕೆ ತೆರೆ

Multi Speciality Hospital

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದು ಬಿಜೆಪಿ ಹೈಕಮಾಂಡ್‌ ಘೋಷಿಸಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ ಬದಲಾವಣೆ ಕುರಿತ ಎಲ್ಲ ಚರ್ಚೆಗಳಿಗೆ ತೆರೆ ಬಿದ್ದಂತಾಗಿದೆ.

ರಾಜ್ಯ ಬಿಜೆಪಿ ಸರಕಾರದಲ್ಲಿ ಶೀಘ್ರವೇ ಮೂರನೇ ಸಿಎಂ ಬರಲಿದ್ದಾರೆ ಎಂದು ಕಾಂಗ್ರೆಸ್‌ ಇತ್ತೀಚೆಗೆ ಭಾರಿ ಪ್ರಚಾರವನ್ನು ನಡೆಸಿತ್ತು. ಬಿಜೆಪಿ ನಾಯಕರೇ ಆಗಿರುವ ಸುರೇಶ್‌ ಗೌಡ ಅವರ ಹೇಳಿಕೆಯೊಂದನ್ನು ಆಧರಿಸಿ ಕೆಪಿಸಿಸಿ ಘಟಕದ ಹ್ಯಾಂಡಲ್‌ ಮೂಲಕವೇ ಟ್ವೀಟ್‌ ಮಾಡಿ ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದು ಕಾಂಗ್ರೆಸ್‌ ಹೇಳಿತ್ತು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನಗಳು, ಪ್ರವೀಣ್‌ ನೆಟ್ಟಾರ್‌ ಹತ್ಯೆಯ ಬಳಿಕ ಉಂಟಾದ ಕಾರ್ಯಕರ್ತರ ಆಕ್ರೋಶ, ಇತ್ತೀಚೆಗೆ ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ಅಮಿತ್‌ ಶಾ ಅವರು ನೀಡಿದ್ದಾರೆನ್ನಲಾದ ಎಚ್ಚರಿಕೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೇಳುತ್ತಿರುವಂತೆ ʻಮುಖ್ಯಮಂತ್ರಿ ಬದಲಾವಣೆʼ ಆಗಿಬಿಡಬಹುದಾ ಎಂಬ ಸಂಶಯ ಎಲ್ಲರಲ್ಲೂ ಮೊಳಕೆ ಒಡೆದಿತ್ತು.

ರಾಜ್ಯದ ಎಲ್ಲ ಸಚಿವರು, ಬಿಜೆಪಿ ರಾಜ್ಯಾಧ್ಯಕ್ಷರು ಸೇರಿ ಮುಖ್ಯಮಂತ್ರಿ ಬದಲಾವಣೆ ಇಲ್ಲವೇ ಇಲ್ಲ ಎಂದು ಜಾಲತಾಣಗಳಲ್ಲಿ ಹೇಳಿಕೊಳ್ಳುವ ಮೂಲಕ ಡ್ಯಾಮೇಜ್‌ ಕಂಟ್ರೋಲ್‌ಗೆ ಪ್ರಯತ್ನಿಸಿದ್ದರು. ಇದೆಲ್ಲದರ ನಡುವೆ ಈಗ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಎಲ್ಲ ಗೊಂದಲಗಳನ್ನು ನಿವಾರಿಸುವ ರೀತಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದು ಹಾಕಲಾಗುತ್ತದೆ ಎಂದು ಕಾಂಗ್ರೆಸ್‌ ಮಾಡುತ್ತಿರುವ ಅಪಪ್ರಚಾರ ಮತ್ತು ಬಿತ್ತುತ್ತಿರುವ ಸಂಶಯದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅವರು ನೀಡಿದ ಹೇಳಿಕೆ ಹೀಗಿದೆ
ʻʻಕರ್ನಾಟಕದ ಪ್ರಭಾರಿಯಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ನೀವು ನನ್ನ ಹೇಳಿಕೆಯನ್ನು ನಂಬಲೇಬೇಕು. ನಾನು ಹೇಳುತ್ತಿದ್ದೇನೆ ಮುಂದಿನ ಚುನಾವಣೆಯನ್ನು ನಾವು ಬೊಮ್ಮಾಯಿ ಅವರ ನಾಯಕತ್ವದಲ್ಲೇ ಎದುರಿಸುವುದು ಎನ್ನುವುದು ನೂರಕ್ಕೆ ನೂರು ಪಕ್ಕಾ. ಅವರೊಬ್ಬ ಕಾಮನ್‌ ಮ್ಯಾನ್‌. ಅವರು ರೈತರು, ಯುವಕರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ನಾವು ಮತ್ತೆ ಬಹುಮತದೊಂದಿಗೆ ಗೆದ್ದು ಬರುತ್ತೇವೆ. ನಾವು ೧೫೦ ಸೀಟುಗಳ ಟಾರ್ಗೆಟ್‌ ಇಟ್ಟುಕೊಂಡಿದ್ದೇವೆ. ಅದನ್ನು ಸಾಧಿಸುತ್ತೇವೆ ಕೂಡಾʼʼ ಎಂದು ಸಿಂಗ್‌ ಅವರು ಹೇಳಿದ್ದಾರೆ.

ʻʻಇದೆಲ್ಲವೂ ಕಾಂಗ್ರೆಸ್‌ ನಾಯಕರಾದ ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರು ಸೃಷ್ಟಿ ಮಾಡಿದ್ದು ಬಿಟ್ಟರೆ ಬೇರೇನೂ ಅಲ್ಲ. ಯಾಕೆಂದರೆ ಅವರಿಗೆ ಬೇರೆ ಯಾವುದೇ ವಿಷಯವೇ ಇಲ್ಲ. ಕಾಂಗ್ರೆಸ್‌ ಒಂದು ನಾಯಕರೇ ಇಲ್ಲದ ಪಕ್ಷ. ಅವರಿಗೆ ಬಿಜೆಪಿ ಬಗ್ಗೆ ಮಾತನಾಡಲು ಒಂದು ಕಾರ್ಯಸೂಚಿಯೂ ಇಲ್ಲ. ಹೀಗಾಗಿ ಅವರು ಸಿಎಂ ಬದಲಾವಣೆ ಮಾಡಲಾಗುತ್ತದೆ ಎಂಬಂಥ ಸುದ್ದಿಗಳ ಮೂಲದ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇದರಲ್ಲಿ ಯಾವುದೇ ಸತ್ಯ ಇಲ್ಲ.ʼʼ ಎಂದು ಹೇಳಿದ್ದಾರೆ ಅರುಣ್‌ ಸಿಂಗ್‌.

ಹೈಕಮಾಂಡ್‌ಗೆ ಬೊಮ್ಮಾಯಿ ಅವರ ಕಾರ್ಯವೈಖರಿಯ ಬಗ್ಗೆ ಅಷ್ಟೇನೂ ತೃಪ್ತಿ ಇಲ್ಲ. ಅದರಲ್ಲೂ ಮುಖ್ಯವಾಗಿ ಬಿಜೆಪಿ ಕಾರ್ಯಕರ್ತರಲ್ಲೇ ಸರಕಾರದ ಬಗ್ಗೆ ಆಕ್ರೋಶವಿದೆ ಎಂಬ ಅಂಶವನ್ನು ಇಟ್ಟುಕೊಂಡು ಕಾಂಗ್ರೆಸ್‌ ಮುಖ್ಯಮಂತ್ರಿ ಬದಲಾವಣೆಯ ವ್ಯಾಖ್ಯಾನವನ್ನು ಪ್ರಚಾರ ಮಾಡುತ್ತಿದೆ. ಅದರ ಜತೆಗೆ ಬೊಮ್ಮಾಯಿ ಅವರು ಒಬ್ಬ ಮಾಸ್‌ ಲೀಡರ್‌ ಅಲ್ಲ. ಸಿದ್ದರಾಮಯ್ಯ ಅವರಂಥ ಮಾಸ್‌ ಲೀಡರ್‌ ಅವರನ್ನು ಎದುರಿಸಲು ಬೊಮ್ಮಾಯಿ ಚಾರ್ಮ್‌ ಸಾಲದು ಎಂದೆಲ್ಲ ಹೈಕಮಾಂಡ್‌ ಯೋಚಿಸುತ್ತಿದೆ ಎಂಬ ಭಾವನೆಯನ್ನು ಬಿತ್ತಲು ಕಾಂಗ್ರೆಸ್‌ ಪ್ರಯತ್ನಿಸಿತ್ತು. ಆದರೆ, ಇದೆಲ್ಲದಕ್ಕೂ ಹೈಕಮಾಂಡ್‌ ತಿರುಗೇಟು ನೀಡಿದೆ. ಆದರೆ, ಇದು ಒಂದು ಹಂತದಲ್ಲಿ ಬೊಮ್ಮಾಯಿ ಅವರಿಗೆ ವರವಾಗಿಯೇ ಪರಿಣಮಿಸಿದೆ. ಯಾಕೆಂದರೆ ಬಿಜೆಪಿಯಲ್ಲೇ ಕೆಲವು ನಾಯಕರು ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಕಥೆಗಳನ್ನು ಹೆಣೆಯುತ್ತಿದ್ದರು. ಅವರಿಗೀ ಈಗ ಹೈಕಮಾಂಡ್‌ ಛಡಿಯೇಟು ನೀಡಿದಂತಾಗಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ರದ್ದಾಗಿದ್ದ ಸರಕಾರದ ಜನೋತ್ಸವ ಆಗಸ್ಟ್‌ 28ಕ್ಕೆ ಮರುನಿಗದಿ

Exit mobile version