ತುಮಕೂರು, ಕರ್ನಾಟಕ: ಕರ್ನಾಟಕ ವಿಧಾನಸಭೆ ಚುನಾವಣೆ ಸಂಬಂಧ ಅನೇಕ ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರದ ಸಾಧ್ಯತೆಗಳ ಬಗ್ಗೆ ಹೇಳುತ್ತಿವೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ವಿಷಯವನ್ನು ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಿ, ”ತಮಕೂರಿನಲ್ಲಿ ಸೇರಿರುವ ಜನ ಸಾಗರವನ್ನು ನೋಡಿದರೆ ಯಾರು ಗೆಲ್ಲುತ್ತಾರೆಂಬುದು ತಿಳಿಯುತ್ತದೆ. ಈ ದೃಶ್ಯಗಳನ್ನು ಸಮೀಕ್ಷೆ ಕೈಗೊಳ್ಳುವವರು ನೋಡಬೇಕು,” ಎಂದು ಮೂದಲಿಸಿದರು. ”ಹೆಲಿಪ್ಯಾಡ್‌ನಿಂದ ಸಭೆ ಸ್ಥಳಕ್ಕೆ ಬರುವವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ನೆರೆದಿತ್ತು. ಈ ದೃಶ್ಯಗಳನ್ನು ನೋಡಿದರೆ ಪ್ರಚಂಡ ಬಹುಮತ ಯಾರಿಗೆ ದೊರೆಯಲಿದೆ ಎಂಬುದು ನಿರ್ಧಾರವಾಗಿದೆ,” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು(Karnataka Election 2023).
ತುಮಕೂರಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ಧಗಂಗಾ ಮಠ, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಗಳನ್ನು ಸ್ಮರಿಸಿಕೊಂಡರು. ಅಲ್ಲದೇ, ಶಿವಕುಮಾರ ಸ್ವಾಮಿಗಳು ಅನುಸರಿಸಿದ್ದ ಅನ್ನ, ಅಕ್ಷರ ಮತ್ತು ಆಶ್ರಯ ತ್ರಿವಿಧ ದಾಸೋಹದ ಪ್ರೇರಣೆಯಲ್ಲಿ ಬಿಜೆಪಿ ಸರ್ಕಾರವು ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು. ಆಗ, ಸಭಿಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ನೀಡಿದರು.
ತುಮಕೂರಿನಲ್ಲಿ ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರ ಭಾಷಣ ಮಾಡಿದರು
ಕುವೆಂಪು ಕವಿತೆ ಸಾಲು ಉಲ್ಲೇಖಿಸಿ ಕಾಂಗ್ರೆಸ್‌ಗೆ ಚಾಟಿ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ರಾಷ್ಟ್ರಕವಿ ಕುವೆಂಪು ಅವರನ್ನು ಉಲ್ಲೇಖಿಸಿ ಕಾಂಗ್ರೆಸ್‌ಗೆ ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರಕವಿ ಕುವೆಂಪು ಅವರು “ಓ ಲಂಕಾ ಭಯಂಕರ ಸಮೀರಕುಮಾರ ಹೇ ಆಂಜನೇಯ” ಎಂದು ತಮ್ಮ ಕವನವೊಂದರಲ್ಲಿ ಆಂಜನೇಯನನ್ನು ಕುರಿತ ಹಾಡಿ ಹೊಗಳಿದ್ದಾರೆ. ಈ ನಾಡು ಆಂಜನೇಯನ ಜನ್ಮನಾಡು. ಅದೇ ನಾಡಿನಲ್ಲಿ ಕಾಂಗ್ರೆಸ್‌ಗೆ “ಜೈ ಬಜರಂಗಬಲಿ” ಎಂದು ಹೇಳಿದರೆ ಸಂಕಟವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈ ಮೂಲಕ ಕಾಂಗ್ರೆಸ್‌ನ ಬಜರಂಗದಳ ನಿಷೇಧ ಪ್ರಣಾಳಿಕೆಯ ಕುರಿತು ಟೀಕಿಸಿದರು. ಭಾಷಣ ಆರಂಭದಲ್ಲಿಯೂ ಜೈ ಬಜರಂಗಬಲಿ ಘೋಷಣೆಗಳನ್ನು ಮೊಳಗಿಸಿದರು.
ಕಾಂಗ್ರೆಸ್ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡಿಕೊಂಡು ಬರುತ್ತಿದೆ. ಇದು ತುಷ್ಟಿಕರಣ ರಾಜಕಾರಣದ ಗುಲಾಮಿತನವಾಗಿದೆ. ಕಾಂಗ್ರೆಸ್‌ನಿಂದ ರಾಜ್ಯಕ್ಕೆ ಎಂದಿಗೂ ಒಳ್ಳೆಯದಾಗುವುದಿಲ್ಲ. ಕಾಂಗ್ರೆಸ್‌ನಿಂದ ಕರ್ನಾಟಕ ಅಭಿವೃದ್ಧಿಯೇ ಸಾಧ್ಯವಿಲ್ಲ. ಹಾಗೆಯೇ ಜೆಡಿಎಸ್‌ಗೆ ನೀವು ನೀಡುವ ಪ್ರತಿ ವೋಟ್, ಅಸ್ಥಿರ ಸರ್ಕಾರ ರಚನೆಗೆ ಕಾರಣಾವಾಗುತ್ತಿದೆ. ಅಸ್ಥಿರ ಸರ್ಕಾರದಿಂದ ಶಕ್ತಿಶಾಲಿ ಕರ್ನಾಟಕ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಈ ಬಾರಿ ಬಿಜೆಪಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಕಳೆದ ಒಂಭತ್ತು ವರ್ಷದಲ್ಲಿ ಬಿಜೆಪಿ ಸರ್ಕಾರವು ಹಳ್ಳಿಗಳು ಮತ್ತು ಬಡವರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿದೆ. ಕಳೆದ ಏಳು ದಶಕಗಳಲ್ಲಿ ಆಗದ ಕೆಲಸಗಳನ್ನು ಕೇವಲ ಒಂಭತ್ತು ವರ್ಷಗಳಲ್ಲೇ ಬಿಜೆಪಿ ಮಾಡಿ ತೋರಿಸಿದೆ. ನಾವು ಗ್ರಾಮೀಣ ಅರ್ಥವ್ಯವಸ್ಥೆಯನ್ನು ಹೆಚ್ಚಿಸಿದ್ದೇವೆ. ಇದಿರಂದ ರೈತರು, ಬಡವರಿಗೆ ಖರೀದಿ ಶಕ್ತಿ ಹೆಚ್ಚಾಗಿದೆ ಎಂದು ಹೇಳಿದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಜಾರಿಗೆ ತಂದಿದ್ದೇವೆ. ತುಮಕೂರು ಜಿಲ್ಲೆಯಲ್ಲಿ ಸುಮಾರು 3 ಲಕ್ಷ ರೈತರಿಗೆ 700 ಕೋಟಿ ರೂ. ನೀಡಿದ್ದೇವೆ. 3 ಕೋಟಿ ಮಹಿಳೆಯರು ಇಂದು ಸ್ವ ಸಹಾಯ ಗುಂಪುಗಳ ಜತೆ ಗುರುತಿಸಿಕೊಂಡಿದ್ದಾರೆ. ಅವರಿಗೆ ಗ್ಯಾರಂಟಿ ಇಲ್ಲದೇ 20 ಲಕ್ಷದವರೆಗೂ ಸಾಲ ನೀಡಿದ್ದೇವೆ. ರೈತರಿಗೆ ನೆರವಾಗಲು ಹಳ್ಳಿಗಳಲ್ಲಿ ಶೈತ್ಯಾಗಾರಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ರಾಸಾಯನಿಕ ಗೊಬ್ಬರವನ್ನು ಕೆಜಿಗೆ 50 ರೂ. ಖರೀದಿಸಿ, ರೈತರಿಗೆ ಕೆಜಿಗೆ 5 ರೂ.ನಲ್ಲಿ ನೀಡುತ್ತಿದ್ದೇವೆ. ಆ ಮೂಲಕ ಕೃಷಿ ವೆಚ್ಚವನ್ನು ಕಡಿಮೆ ಮಾಡುತ್ತಿದ್ದೇವೆ. ಗ್ರಾಮ ಪಂಚಾಯ್ತಿಗಳಿಗೆ ಫೈಬರ್ ಆಪ್ಟಿಕಲ್ ಕೇಬಲ್ ಅಳವಡಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದೆ. ಹಾಗೆಯೇ, ತಮ್ಮ ಸರ್ಕಾರದ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಇದನ್ನೂ ಓದಿ: Karnataka Election 2023: ಪ್ರಧಾನಿ ನರೇಂದ್ರ ಮೋದಿ ಮೆಗಾ ರೋಡ್ ಶೋ: ಮನೆ ಬಾಲ್ಕನಿ, ಟೆರೇಸ್ ಮೇಲೆ ನಿಂತು ನೋಡುವಂತಿಲ್ಲ!
ಕಾಂಗ್ರೆಸ್‌ನಿಂದ ವಿದ್ಯಾರ್ಥಿಗಳಿಗೆ ಅನ್ಯಾಯ
ಆಧುನಿಕ ಶಿಕ್ಷಣವನ್ನು ಒದಗಿಸುವುದಕ್ಕಾಗಿ ಬಿಜೆಪಿ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಆದರೆ, ಕಾಂಗ್ರೆಸ್ ಸರ್ಕಾರವು ತಾನು ಅಧಿಕಾರಕ್ಕೆ ಬಂದರೆ ಈ ನೀತಿಯನ್ನು ರದ್ದು ಮಾಡುವುದಾಗಿ ಹೇಳಿಕೊಂಡಿದೆ. ಅಂದರೆ, ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲು ಹಾಕಲು ಹೊರಟಿದೆ. ಬಡ ತಾಯಿ ಮಗ ತನ್ನದೇ ಮಾತೃ ಭಾಷೆಯಲ್ಲಿ ವೈದ್ಯಕೀಯ ಕೋರ್ಸು, ಎಂಜಿನಿಯರಿಂಗ್ ಕೋರ್ಸು ಮಾಡುವ ಹಕ್ಕು ಹೊಂದಿಲ್ಲವೇ? ಆ ಹಕ್ಕನ್ನು ಈ ಕಾಂಗ್ರೆಸ್ ಕಸಿದುಕೊಳ್ಳುವುದಾಗಿ ಹೇಳುತ್ತಿದೆ. ಅಂಥ ಕಾಂಗ್ರೆಸ್‌ಗೆ ನೀವು ಚುನಾವಣೆಯಲ್ಲಿ ಶಿಕ್ಷೆ ನೀಡಬೇಕು. ಕಾಂಗ್ರೆಸ್ ಸೋಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.