ಬೆಂಗಳೂರು: ಯುವ ಮೋರ್ಚಾ ಕಾರ್ಯಕರ್ತರು ರಾಜೀನಾಮೆ ನೀಡುತ್ತಿರುವುದು ಹೇಡಿತನದ ಕ್ರಮ. ಅವರಿಗೆ ಪ್ರಬುದ್ಧತೆ ಇಲ್ಲ. ಅವರು ಬಿಟ್ಟು ಹೋದರೂ ಪಕ್ಷಕ್ಕೆ ಏನೂ ಆಗೊಲ್ಲ ಎಂಬರ್ಥದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ನೀಡಿದ ಹೇಳಿಕೆಯನ್ನು ಒಪ್ಪಲಾಗದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಕೆ.ಎಸ್ ಈಶ್ವರಪ್ಪ, ಸಿದ್ದೇಶ್ವರ್ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ನಮ್ಮ ಕಾರ್ಯಕರ್ತರೇ ನಮ್ಮ ಆಸ್ತಿ. ವಿಚಾರಕ್ಕಾಗಿ, ಸಿದ್ದಾಂತಕ್ಕೆ ಹೋರಾಟ ಮಾಡಿದ ಲಕ್ಷಾಂತರ ಕಾರ್ಯಕರ್ತರು ನಮ್ಮಲ್ಲಿ ಇದಾರೆ. ಅವರು ಇಂದು ಯಾವುದೇ ಅಧಿಕಾರ ಇಲ್ಲದೆ ಕೂತಿದ್ದಾರೆ. ಗ್ರಾಮಪಂಚಾಯಿತಿ ಸದಸ್ಯರ ಸ್ಥಾನಮಾನವೂ ಸಿಗದಿದ್ದರೂ ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ. ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರನ್ನು ಮರೆಯುವ ಪ್ರಶ್ನೆಯೇ ಇಲ್ಲ ಎಂದು ಮಾಧ್ಯಮಗಳ ಜತೆ ಮಾತನಾಡುತ್ತಾ ಸಿ.ಟಿ. ರವಿ ಹೇಳಿದರು.
ʻʻಕಾರ್ಯಕರ್ತರು ಬೇಸರಿಂದ ಮಾತನಾಡಿದ್ದಾರೆ. ಅವರಿಗೆ ನೋವಾಗಿರುವುದು ಸಹಜ. ಹಾಗಂತ ಪ್ರಶ್ನೆ ಮಾಡಲಾಗದ ಪಕ್ಷ ನಮ್ಮದಲ್ಲ. ಪ್ರಶ್ನೆ ಮಾಡಿದರೆ ಕ್ರಮ ಆಗುವ ಪಕ್ಷವೂ ನಮ್ಮದಲ್ಲ. ತಮ್ಮದಲ್ಲದ ತಪ್ಪಿನಿಂದ ಅವರು ಹೊರಹೋಗುವಂತೆ ಆಗಬಾರದು. ಯಾರಾದ್ರೂ ದುರುದ್ದೇಶ ಪೂರಕವಾಗಿ ಹೇಳಿಕೆ ನೀಡಿದ್ದರೆ ಅದು ಸರಿಯಲ್ಲ. ಹಾಗಿದ್ದರೆ ಅವರ ಮೇಲೆ ಪಕ್ಷದ ನಿಯಮಗಳ ಅಡಿ ಕ್ರಮವಾಗಲಿದೆʼʼ ಎಂದು ಹೇಳಿದರು ಸಿ.ಟಿ ರವಿ.
ʻʻಕಾರ್ಯಕರ್ತರು ಮತ್ತು ಸಿದ್ದಾಂತದ ಆಧಾರದ ಮೇಲೆ ಪಕ್ಷ ಬೆಳೆದಿದೆ. ಈಗ ನಮ್ಮ ಹೋರಾಟ ಯಾರ ಮೇಲೆ ಅನ್ನುವುದನ್ನು ಅರಿಯಬೇಕುʼʼ ಎಂದರು.
ಸಿದ್ಧರಾಮಯ್ಯಗೆ ತರಾಟೆ
ʻʻಸಿದ್ದರಾಮಯ್ಯ ಅವರಿಗೆ ನಿನ್ನೆ ತಮಿಳುನಾಡಿನಲ್ಲಿ ಅಂಬೇಡ್ಕರ್ ಪ್ರಶಸ್ತಿ ನೀಡಿದ್ದಾರೆ. ಆದರೆ, ಅವರು ಪ್ರಶಸ್ತಿ ಪಡೆದು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆʼʼ ಎಂದು ಆಕ್ಷೇಪಿಸಿದರು.
ʻʻಅವರು ಕನ್ನಡವನ್ನು ಇನ್ನೊಂದು ಭಾಷೆಯ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಇವರ ರಾಜಕೀಯ ದುರ್ಲಾಭಕ್ಕೋಸ್ಕರ ಎತ್ತಿಕಟ್ಟಿದ್ದಾರೆ. ಆರ್ಯ ದ್ರಾವಿಡ ಎಂಬ ವಿಚಾರ ಮಾತನಾಡಿದ್ದಾರೆʼʼ ಎಂದು ಹೇಳಿದ ಅವರು, ಸಿದ್ದರಾಮಯ್ಯ ಯಾವ ಇತಿಹಾಸ ಓದಿದ್ದಾರೆ. ಸಿದ್ದರಾಮಯ್ಯ ಓದಿದ್ದು ಇಟಲಿ ಇತಿಹಾಸವಾ ಎಂದು ಪ್ರಶ್ನಿಸಿದರು. ೭೫ ವರ್ಷದ ಹೊಸ್ತಿಲಲ್ಲಿರುವ ಸಿದ್ದರಾಮಯ್ಯ ಅವರು ಮುತ್ಸದ್ದಿತನ ತೋರಬೇಕು ಎಂದು ಹೇಳಿದರು.
ಮತ್ತೊಬ್ಬ ಮುಖ್ಯಮಂತ್ರಿಯಾ!
ಕಾಂಗ್ರೆಸ್‌ನೊಳಗೆ ನಡೆಯುತ್ತಿರುವ ಮುಖ್ಯಮಂತ್ರಿ ಫೈಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಲ್ಲಿ ಇಬ್ಬರಲ್ಲಾರಿ.. ಎಸ್.ಆರ್. ಪಾಟೀಲ್ ಅವರು ಸಿಎಂ ಆಗಬೇಕು ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ. ಅಂದರೆ, ಮೂವರಾಯಿತು ಎಂದು ಗೇಲಿ ಮಾಡಿದರು.
ʻʻಹಿಂದೆ ಮಲ್ಲಿಕಾರ್ಜುನ ಖರ್ಗೆಗೆ ಕುರ್ಚಿ ತೋರಿಸೋದು, ಮೋಸ ಮಾಡೋದು ಮಾಡಿದ್ರು. ಆಮೇಲೆ ಅಧಿಕಾರಕ್ಕೆ ಬಂದ ಮೇಲೆ ಪರಮೇಶ್ವರ್ ರನ್ನು ಸೋಲಿಸಿ ಅಧಿಕಾರ ಕೊಡದೆ ಮೋಸ ಮಾಡಿದ್ರುʼʼ ಎಂದರು ಹೇಳಿದ ಸಿ.ಟಿ. ರವಿ, ನಾವು ಬೊಮ್ಮಾಯಿ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದರು.
ಚಕ್ರವರ್ತಿ ಜತೆ ಮಾತನಾಡುತ್ತೇನೆ
ಸರಕಾರ, ಸಿಎಂ ಮತ್ತು ಶಾಸಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಮಾತಿನ ಬಗ್ಗೆ ಕೇಳಿದಾಗ, ʻʻಚಕ್ರವರ್ತಿ ಅವರು ವೈಚಾರಿಕವಾಗಿ ಅಪ್ಪಟ ರಾಷ್ಟ್ರವಾದಿ ಚಿಂತಕ. ನಾನು ಅವರ ಟ್ವೀಟ್ ಗಮನಿಸಿಲ್ಲ. ವ್ಯತಿರಿಕ್ತವಾಗಿ ಟ್ವೀಟ್ ಮಾಡಿದ್ರೂ ಅವರ ಜೊತೆ ಮಾತಾಡ್ತೀವಿ. ಅವರು ಅಂತಲ್ಲ, ಯಾವ ಕಾರ್ಯಕರ್ತರನ್ನೂ ಬಿಟ್ಟುಕೊಡೋದಿಲ್ಲ. ಕೆಲವರನ್ನು ಕೂತು ಮಾತನಾಡಿಸಬೇಕು. ದವಡೆಯೂ ನಮ್ಮದೆ, ನಾಲಿಗೆಯೂ ನಮ್ಮದೆ. ದವಡೆ ನಾಲಿಗೆ ಕಚ್ಚಿತು ಅಂತ ಏನೂ ಮಾಡಲಾಗದುʼʼ ಎಂದು ನುಡಿದರು.
ಇದನ್ನೂ ಓದಿ| Praveen Nettarru: ಗೃಹ ಸಚಿವರ ಮೇಲೆ ಮಾತ್ರವಲ್ಲ ಇಡೀ ರಾಜ್ಯ ಬಿಜೆಪಿ ಮೇಲೆ ಬೇಸರವಿದೆ ಎಂದ ಸಿ.ಟಿ. ರವಿ