ಬೆಂಗಳೂರು: ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದ ಕನ್ನಡ ನಾಡಿನ ಮಹಾನ್ ವರ್ಣಕಲಾವಿದರಲ್ಲಿ ಒಬ್ಬರಾದ ಬಿಕೆಎಸ್ ವರ್ಮಾ (BKS Varma) ಅವರ ಕಲಾಕೃತಿಗಳು ನಾಡಿನ ಗಡಿಯನ್ನೂ ಮೀರಿ ವಿಶ್ವವಿಖ್ಯಾತವಾಗಿದ್ದವು. ಇದಕ್ಕೆ ಉದಾಹರಣೆ, ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ತಮ್ಮ ರಾಘವೇಂದ್ರ ಸ್ವಾಮಿಗಳ ಬೃಹತ್ ವರ್ಣಚಿತ್ರವನ್ನು ಇವರಿಂದಲೇ ಕೇಳಿ ಬರೆಸಿಕೊಂಡುದು.
ರಜನಿಕಾಂತ್ ಅವರು ತಮ್ಮ ಚೆನ್ನೈಯಲ್ಲಿರುವ ಮನೆಯಲ್ಲಿ ಸ್ವಾಮಿ ರಾಘವೇಂದ್ರರ ಒಂದು ಬೃಹತ್ ವರ್ಣಚಿತ್ರ ಇರಬೇಕೆಂದು ಬಯಸಿದ್ದರು. ಇದಕ್ಕೆ ಸೂಕ್ತ ಕಲಾವಿದರಿಗಾಗಿ ಅವರು ಹೆಚ್ಚೇನೂ ಹುಡುಕಾಡಿರಲಿಲ್ಲ. ವರ್ಮಾ ಅವರ ದೇವಾನುದೇವತೆಗಳ ಚಿತ್ರಗಳು ಅವರ ಮನಸ್ಸನ್ನು ಆಗಲೇ ಸೆಳೆದಿದ್ದುದರಿಂದ, ವರ್ಮಾ ಅವರಿಂದಲೇ ಆ ಚಿತ್ರ ಬರೆಸಲು ಮುಂದಾದರು. ರಜನಿಕಾಂತ್ ಅವರ ಒತ್ತಾಯಕ್ಕೆ ಮಣಿದಿದ್ದ ವರ್ಮಾ, ಚೆನ್ನೈಯಲ್ಲಿದ್ದ ರಜನಿ ಮನೆಗೆ ಹೋಗಿ ಅಲ್ಲಿ ವರ್ಣಚಿತ್ರವನ್ನು ಬಿಡಿಸಿಕೊಟ್ಟು ಬಂದಿದ್ದರು. ಈ ಚಿತ್ರದ ಹಲವು ಆವೃತ್ತಿಗಳನ್ನು ನಂತರ ಅವರು ಕೆಲವು ಕಡೆ ಬಳಸಿಕೊಂಡಿದ್ದಾರೆ.
ರಜನಿಕಾಂತ್ ಅವರಂತೆಯೇ ತೆಲುಗಿನ ಖ್ಯಾತ ಹಾಸ್ಯ ಕಲಾವಿದ ಬ್ರಹ್ಮಾನಂದಂ ಅವರು ಕೂಡ ದೈವಭಕ್ತರಾಗಿದ್ದು, ವರ್ಮಾ ಅವರಿಂದ ತಮ್ಮ ಮನೆಯ ಹಾಲ್‌ನ ಗೋಡೆಗೆ ತಿರುಪತಿ ಶ್ರೀನಿವಾಸ ದೇವರ ಬೃಹತ್ ವರ್ಣಚಿತ್ರ ಮಾಡಿಸಿಕೊಂಡಿದ್ದರು. ಚಿತ್ರ ಪೂರ್ತಿಯಾದ ಬಳಿಕ ವರ್ಮಾ ಅವರನ್ನು ಮನೆಗೆ ಕರೆದು ಸನ್ಮಾನಿಸಿದ್ದರು.
ವರ್ಮಾ ಅವರು ಮಾಡುತ್ತಿದ್ದ ದೇವಾನುದೇವತೆಗಳ ಚಿತ್ರಗಳು ವಿಖ್ಯಾತವಾಗಿದ್ದವು. ಇವರು ಬಿಡಿಸಿದ ಅನೇಕ ಚಿತ್ರಗಳು ದೇಶದ ಗಡಿ ದಾಟಿ ಪಾಶ್ಚಾತ್ಯ ದೇಶಗಳಿಗೂ ಹೋಗಿವೆ.
ಇದನ್ನೂ ಓದಿ: BKS Varma Death News : ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮಾ ನಿಧನ