ಬೆಂಗಳೂರು: ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ಹೊರ ಬಂದ ಕಾಳಿ ಸ್ವಾಮಿಜಿಯ ಮುಖಕ್ಕೆ ಮಸಿ ಬಳಿದ ಘಟನೆ ನಡೆದಿದೆ. ಮಲ್ಲೇಶ್ವರದ ಗಂಗಮ್ಮ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿತ್ತು, ಇದನ್ನು ಮುಗಿಸಿಕೊಂಡು ಕಾಳಿ ಸ್ವಾಮಿಜಿ ಹೊರಬರುತ್ತಿದ್ದರು. ಈ ಸಂದರ್ಭದಲ್ಲಿ ಆಗಮಿಸಿದ ಗುಂಪೊಂದು ಅವರ ಮುಖಕ್ಕೆ ಮಸಿ ಬಳಿದಿದೆ.
ನಾಡಗೀತೆಯನ್ನು ಅವಮಾನಿಸಿ, ಕನ್ನಡಪರ ಹೋರಾಟಗಾರರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಕಾಳಿಸ್ವಾಮಿ ಹೇಳಿದ್ದಕ್ಕೆ ಈ ಮಸಿ ದಾಳಿ ನಡೆಸಿರುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ತಿಳಿಸಿದೆ. ಸ್ವಾಮೀಜಿ ದೇವಸ್ಥಾನದಿಂದ ಹೊರಬರುತ್ತಿದ್ದಂತೆಯೇ ಅವರೊಂದಿಗೆ ಕೆಲಕಾಲ ವಾಗ್ವಾದ ನಡೆಸಿದ ಕನ್ನಡ ಕಾರ್ಯಕರ್ತರ ಗುಂಪು, ಮಸಿ ಬಳಿದು ದಿಕ್ಕಾರ ಕೂಗಿತು.
ಇದನ್ನೂ ಓದಿ | ಆಜಾನ್ V/s ಭಜನೆ: ಅವಧಿ ಮೀರಿದ್ರೆ ಮತ್ತೆ ರಾಮ ಜಪದ ಎಚ್ಚರಿಕೆ ನೀಡಿದ ಕಾಳಿ ಸ್ವಾಮಿ
ʼಗಂಗಮ್ಮ ದೇವಾಲಯದಲ್ಲಿ ನನಗೆ ಪೂಜೆ ಸಲ್ಲಿಸಿ, ಬಹಳ ಖುಷಿಯಾಗಿತ್ತು. ಪೂಜೆ ಮುಗಿಸಿ ಹೊರ ಬರುವ ವೇಳೆ ಕೆಲವರು ಬಂದು, `ನೀವು ಕುವೆಂಪು ಅವರನ್ನು ಮತ್ತು ಕನ್ನಡ ಸಂಘಟನೆಗಳನ್ನು ನಿಂದಿಸಿದ್ದೀರಾ’ ಎಂದು ಪ್ರಶ್ನಿಸುವ ಮೂಲಕ ಜಗಳ ತೆಗೆಯಿತು. ನಂತರ ಮುಖಕ್ಕೆ ಕಪ್ಪು ಮಸಿ ಬಳಿದಿದ್ದಾರೆ ಎಂದು ಕಾಳಿ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಕುವೆಂಪು ಅವರು ಮತ್ತು ಕನ್ನಡ ಸಂಘಟನೆಗಳನ್ನು ನಾನು ಯಾವತ್ತಿಗೂ ನಿಂದಿಸಿಲ್ಲ. ನಿಮ್ಮ ಬಳಿ ದಾಖಲೆಗಳಿದ್ದರೆ ಅದನ್ನು ತೋರಿಸಿ. ಅದನ್ನು ಬಿಟ್ಟು ಏಕಾಏಕಿ ಕಪ್ಪು ಮಸಿ ಬಳಿಯುವುದು ಎಷ್ಟು ಸರಿ? ನೀವು ಮಸಿ ಬಳಿಯುವ ಮೂಲಕ ಕಾಳಿಯ ರುದ್ರಾವತಾರ ತೋರಿಸಿದ್ದೀರಿ. ಕಾಳಿ ಇರೋದೆ ಕಪ್ಪು, ಅದನ್ನು ನೀವು ನನಗೆ ಹಾಕಿದ್ದೀರಾ ಅಷ್ಟೇ ಎಂದು ಕೃತ್ಯ ಎಸಗಿದವರಿಗೆ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ | ವಿದ್ಯಾರ್ಥಿನಿಯನ್ನು ವೇದಿಕೆಗೆ ಕರೆದಿದ್ದಕ್ಕೆ ಛೀಮಾರಿ ಹಾಕಿದ ಮುಸ್ಲಿಂ ವಿದ್ವಾಂಸನ ವಿರುದ್ಧ ಕೇರಳ ರಾಜ್ಯಪಾಲ ಗರಂ