ಬೆಂಗಳೂರು: ಡೇಟಿಂಗ್, ಲೈವ್ ಸ್ಟ್ರೀಮ್ ಆ್ಯಪ್‌ಗಳನ್ನು ಬಳಸುವ ಮುನ್ನ ಜನರು ಎಚ್ಚರದಿಂದ ಇರಬೇಕು. ಹೇಗೂ ಪರಿಚಯವಿಲ್ಲದವರು ಎಂದು ಅಪರಿಚಿತರೊಂದಿಗೆ ವಿಡಿಯೊ ಚಾಟಿಂಗ್, ಡೇಟಿಂಗ್ ಎಂದು ಹೋದರೆ ಅಪಾಯ ಕಟ್ಟಿಟ್ಟಬುತ್ತಿ. ಇಂತಹದೇ ಒಂದು ಲೈವ್ ಸ್ಟ್ರೀಮ್ ಆ್ಯಪ್‌ವೊಂದನ್ನು ಮಹಿಳೆಯೊಬ್ಬರು ಬಳಸಿದ್ದರಿಂದ ಬ್ಲ್ಯಾಕ್‌ಮೇಲ್‌ಗೆ (Blackmail) ಒಳಗಾಗಿದ್ದರು. ಅಶ್ಲೀಲ ಚಿತ್ರ, ವಿಡಿಯೊ ಕಳಿಸಿದ್ದ ವ್ಯಕ್ತಿಯೊಬ್ಬ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ನಿಮ್ಮ ನಗ್ನ, ಅರೆ ನಗ್ನ ವಿಡಿಯೊ, ಫೋಟೊ ಇದೆ. 30 ಲಕ್ಷ ರೂಪಾಯಿ ಹಣ ನೀಡದೆ ಇದ್ದರೆ ಅವೆಲ್ಲವನ್ನೂ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮೊದಮೊದಲು ಆರೋಪಿಯ ಬೆದರಿಕೆಗೆ ಸೊಪ್ಪು ಹಾಕದ ಮಹಿಳೆ ನಿರ್ಲಕ್ಷ್ಯ ಮಾಡಿದ್ದಾರೆ. ಆ ಬಳಿಕ ಮಹಿಳೆಯ ಮೊಬೈಲ್‌ಗೆ ಕೆಲ ಫೋಟೊ ಕಳಿಸಿ, ಇದು ಸ್ಯಾಂಪಲ್ಸ್, ಇನ್ನೂ ಬೇಕಾದಷ್ಟು ವಿಡಿಯೊ ಇದೆ ಎಂದು ಸಂದೇಶ ಕಳಿಸಿದ್ದ.
ಇದರಿಂದ ಆತಂಕಕ್ಕೆ ಒಳಗಾದ ಮಹಿಳೆ ಕೂಡಲೇಈಶಾನ್ಯ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆಗಿಳಿದ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬ್ಲ್ಯಾಕ್‌ಮೇಲರ್ ಮಹಾಂತೇಶ ಎಂಬಾತನನ್ನು ನಂಬರ್ ಟ್ರ್ಯಾಕಿಂಗ್ ಮೂಲಕ ಬಂಧಿಸಿದ್ದಾರೆ. ಈತ ಭುವನೇಶ್ವರಿ ನಗರದ ನಿವಾಸಿ ಎಂದು ತಿಳಿದು ಬಂದಿದ್ದು, ಬ್ಲ್ಯಾಕ್‌ಮೇಲ್ ಮಾಡಲು ಬಳಸಿದ್ದ ಫೋಟೊ ಹಾಗೂ ವಿಡಿಯೊ ಇದ್ದ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತನಿಖೆ ವೇಳೆ ಪೊಲೀಸರು ತಬ್ಬಿಬ್ಬು
ಬ್ಲ್ಯಾಕ್‌ಮೇಲರ್ ಮಹಾಂತೇಶನನ್ನು ತನಿಖೆ ನಡೆಸಿದ ಪೊಲೀಸರಿಗೆ ದೂರು ನೀಡಿದ ಮಹಿಳೆ ಯಾರು ಎಂಬುದೇ ಗೊತ್ತಿಲ್ಲವೆಂಬುದು ಹೇಳಿದ್ದಾನೆ. ಅಂದರೆ, ಆಕೆ ಆ್ಯಪ್ ಮೂಲಕ ಪರಿಚಯವಾಗಿದ್ದು, ಅಲ್ಲಿ ನಡೆದಿದೆ ಎನ್ನಲಾದ ವಿಡಿಯೊ ಚಾಟ್ ಸೇರಿದಂತೆ ಇನ್ನಿತರ ಚಟುವಟಿಕೆಯನ್ನು ರೆಕಾರ್ಡ್ ಹಾಗೂ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದಾಗಿ ಬಾಯಿಬಿಟ್ಟಿದ್ದಾನೆ.
ಈ ಆ್ಯಪ್ ಮೂಲಕ ಮಹಿಳೆಯರ ನಗ್ನ ಪೋಟೊ ಪಡೆದುಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಆರೋಪಿ ತನ್ನ ಕೃತ್ಯಕ್ಕೆ ಲೈವ್ ಸ್ಟ್ರೀಮ್ ಆ್ಯಪ್ ಅನ್ನು ಬಳಸಿಕೊಳ್ಳುತ್ತಿದ್ದ. ಟ್ಯಾಂಗೊ (tango) ಎಂಬ ಲೈವ್ ಸ್ಟ್ರೀಮ್ ಆ್ಯಪ್ ಬಳಸುತ್ತಿದ್ದ ಮಹಾಂತೇಶ, ಇದರ ಮೂಲಕವೇ ಮಹಿಳೆಯರ ನಗ್ನ ಹಾಗೂ ಅರೆ ನಗ್ನ ಫೋಟ್‌ಗಳ ಸ್ಕ್ರೀನ್ ಶಾಟ್ ಹಾಗೂ ಸ್ಕ್ರೀನ್ ರೆಕಾರ್ಡಿಂಗ್ ಮಾಡಿಕೊಳ್ಳುತ್ತಿದ್ದ. ಆ ಬಳಿಕ ಮಹಿಳೆಯರ ಮೊಬೈಲ್ ನಂಬರ್ ಹುಡುಕಿ, ಇಲ್ಲವೇ ಅವರ ಬಳಿಯೇ ಕೇಳಿ ಒಡೆದು ತನ್ನ ಬಳಿಯಿದ್ದ ಫೋಟೊ ಕಳಿಸಿ, ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ಈತನ ಬ್ಲ್ಯಾಕ್‌ಮೇಲ್‌ಗೆ ಹೆದರಿ ಕೆಲವರು ಹಣ ನೀಡಿದ್ದಾರೆಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಅಂದಹಾಗೇ, ಈ ಟ್ಯಾಂಗೊ ಲೈವ್ ಸ್ಟ್ರೀಮ್ ಆ್ಯಪ್‌ನಲ್ಲಿ ಅಪರಿಚಿತರ ಜತೆಗೆ ವಿಡಿಯೊ ಚಾಟ್ ಮಾಡಬಹುದಾಗಿದೆ. ಕೆಲವರು ಮೋಜಿಗಾಗಿ ಹಲವರು ಆ್ಯಪ್ ಬಳಸುತ್ತಾರೆ. ಅಪರಿಚಿತರ ಜತೆಗೆ ಅಶ್ಲೀಲವಾಗಿಯೂ ಕೆಲವರು ವಿಡಿಯೊ ಚಾಟ್ ಮಾಡುತ್ತಾರೆ. ಹೀಗೆ ಮಾಡಿದ್ದ ಕಾರಣಕ್ಕೆ ಮಹಿಳೆಯೊಬ್ಬರ ಖಾಸಗಿ ಫೋಟ್, ವಿಡಿಯೊವನ್ನು ರೆಕಾರ್ಡ್ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದ. ಸದ್ಯ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ | Fire Danger | ಗಣೇಶ ಮೂರ್ತಿ ಮೆರವಣಿಗೆ ವೇಳೆ ಬಾಯಿಯಿಂದ ಬೆಂಕಿ ಉಗುಳಲು ಹೋಗಿ ಯುವಕನ ಅವಾಂತರ