ತುಮಕೂರು: ಪತ್ರಕರ್ತನ ಸೋಗಿನಲ್ಲಿ ತುಮಕೂರು ಮಹಾನಗರ ಪಾಲಿಕೆ ಮಹಿಳಾ ಸಿಬ್ಬಂದಿಯನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಿ ಪ್ರದೀಪ್ ಪಾವಗಡ ಎಂಬಾತನಿಗೆ ಸಾರ್ವಜನಿಕರು ಸೇರಿ ಚೆನ್ನಾಗಿ ಥಳಿಸಿದ್ದಾರೆ. ಜತೆಗೆ ಅವನ ಪರವಾಗಿ ಮಾನವ ಹಕ್ಕುಗಳ ಕಾರ್ಯಕರ್ತರೆಂದು ಹೇಳಿಕೊಂಡು ಬಂದ ಹೆಣ್ಮಕ್ಕಳಿಗೂ ಗೂಸಾ ನೀಡಲಾಗಿದೆ. ಪ್ರದೀಪ್ ಪಾವಗಡ ಬಿಗ್ ಬಾಸ್ ಕಳೆದ ಅವತರಣಿಕೆಯ ವಿನ್ನರ್, ಮಜಾ ಭಾರತ ಖ್ಯಾತಿಯ ಮಂಜು ಪಾವಗಡ ಅವರ ಸೋದರನಾಗಿದ್ದಾನೆ.
ಏನಿದು ಪ್ರಕರಣ?
ತುಮಕೂರು ಮಹಾನಗರ ಪಾಲಿಕೆಯ ನಗರ ಜೀವನೋಪಾಯ ಕೇಂದ್ರದಲ್ಲಿ ಸಿಆರ್‌ಪಿ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಈತ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಮಾತ್ರವಲ್ಲ, ಒಂದು ರಾತ್ರಿ ಕಳೆಯುವಂತೆ ಬೇಡಿಕೆ ಮುಂದಿಟ್ಟಿದ್ದ ಎಂದು ಆರೋಪಿಸಲಾಗಿದೆ.
ಮಹಿಳೆಯ ಜತೆ ಮಾತನಾಡುತ್ತಿದ್ದ ಪ್ರದೀಪ್ ಆಕೆಗೆ ಲಂಚದಾಸೆ ತೋರಿಸಿ ವಿಡಿಯೊ ಮಾಡಿಕೊಂಡಿದ್ದ ಎನ್ನಲಾಗಿದೆ. ಯಾವುದೋ ಒಂದು ಪ್ರಕರಣಕ್ಕೆ ಸಂಬಂಧಿಸಿ ಈ ವ್ಯವಹಾರದ ಮಾತು ಬಂದಿದೆ. ಇದಾದ ಬಳಿಕ ತಾನೊಬ್ಬ ಪತ್ರಕರ್ತ, ಖಾಸಗಿ ಪತ್ರಿಕೆ ಸಂಪಾದಕ, ನಿಮ್ಮ ವಿಡಿಯೊ ನನ್ನಲ್ಲಿದೆ. ನೀವು ನಾಲ್ಕು ಲಕ್ಷ ರೂ. ಕೊಡಬೇಕು, ಇಲ್ಲದಿದ್ದರೆ ಈ ವಿಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿದ್ದಾರೆ. ಈ ಮಹಿಳೆ ಹಣ ಕೊಡಲು ಸಾಧ್ಯವಿಲ್ಲ ಎಂದು ಹೇಳಿದಾಗ ಒಂದು ರಾತ್ರಿ ತನ್ನ ಜತೆ ಕಳೆಯುವಂತೆ ಆಹ್ವಾನಿಸಿದ್ದಾನೆ ಎಂದು ಆತನ ಮೇಲೆ ಆರೋಪ ಹೊರಿಸಲಾಗಿದೆ.
ಶುಕ್ರವಾರ ಏನಾಯಿತು?
ಶುಕ್ರವಾರ ಪ್ರದೀಪ್ ಪಾವಗಡ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರೆಂದು ಹೇಳಿಕೊಂಡು ಬಂದ ಹೆಣ್ಮಕ್ಕಳು ಮಹಿಳೆ ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಂದಿದ್ದರು. ಆಗಲೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಮಹಿಳೆ ಅಲ್ಲಿದ್ದವರಿಗೆ ವಿಷಯ ತಿಳಿಸಿದಾಗ ಎಲ್ಲರೂ ಸೇರಿ ಪ್ರದೀಪ್ ಪಾವಗಡ ಮತ್ತು ಇತರ ಹೆಣ್ಮಕ್ಕಳಿಗೆ ಹಲ್ಲೆ ಮಾಡಿದ್ದಾರೆ.
ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರದೀಪ್ ಪಾವಗಡ ಮತ್ತು ಇತರ ನಾಲ್ವರು ಹೆಣ್ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ.
ಮಹಿಳೆ ಲಂಚ ಸ್ವೀಕಾರಕ್ಕೆ ಒಪ್ಪಿದ್ದು ಯಾಕೆ? ಆಕೆ ಲಂಚಾವತಾರದಲ್ಲಿ ಭಾಗಿಯೇ ಎನ್ನುವುದು ಸದ್ಯಕ್ಕೆ ಗೊತ್ತಾಗಿಲ್ಲ. ಬ್ಲ್ಯಾಕ್ ಮೇಲ್‌ಗೆ ಬಳಸಿದ ವಿಡಿಯೊದಲ್ಲಿ ಏನಿದೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಸ್ಪಷ್ಟವಾಗಲಿದೆ.