Site icon Vistara News

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್; ಮಂಗಳೂರು ಕುಕ್ಕರ್ ಬ್ಲಾಸ್ಟ್‌ಗೆ ಸಂಬಂಧ ಇಲ್ಲ; ಬಿಜೆಪಿ ಅವಧಿ‌ ಬಗ್ಗೆ ಸಿಎಂ ಪ್ರಶ್ನೆ

Blast in Bengaluru Rameswaram Cafe and Mangalore Cooker Blast have no similarity CM Siddaramaiah

ಮೈಸೂರು: ರಾಜಧಾನಿಯ ವೈಟ್‌ಫೀಲ್ಡ್‌ನ (Whitefield) ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್‌ ಸ್ಫೋಟ ಪ್ರಕರಣಕ್ಕೂ (Blast in Bengaluru) ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್‌ ಬ್ಲಾಸ್ಟ್‌ಗೂ ಸಂಬಂಧ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಬಿಜೆಪಿಯವರ ಅವಧಿಯಲ್ಲಾದ ಬಾಂಬ್‌ ಬ್ಲಾಸ್ಟ್‌ಗಳು ಅಲ್ಪಸಂಖ್ಯಾತರ ಓಲೈಕೆಗಾಗಿ ನಡೆದಿದ್ದೇ? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಾಂಬ್ ಬ್ಲಾಸ್ಟ್ ಆಗಿರುವುದು ನಿಜ. ಮಾಸ್ಕ್, ಟೋಪಿ‌ ಹಾಕಿಕೊಂಡು ವ್ಯಕ್ತಿಯೊಬ್ಬ ಬಸ್‌ನಲ್ಲಿ ಬಂದಿದ್ದಾನೆ. ಟೈಮರ್ ಫಿಕ್ಸ್ ಮಾಡಿ ಬ್ಲಾಸ್ಟ್ ಮಾಡಲಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಮಂಗಳೂರು ಬಾಂಬ್ ಬ್ಲಾಸ್ಟ್‌ಗೂ ಈ ಬ್ಲಾಸ್ಟ್‌ಗೂ ಯಾವುದೇ ಸಂಬಂಧವಿಲ್ಲ. ಈ ಬ್ಲಾಸ್ಟ್ ಮಾಡಿದ್ದನ್ನು ಖಂಡಿಸುತ್ತೇನೆ. ಬಾಂಬ್ ಬ್ಲಾಸ್ಟ್ ಸಂಬಂಧ ಇನ್ನೂ ತನಿಖೆ ನಡೆಯುತ್ತಿದೆ. ವರದಿ ಬಳಿಕ ಬಳಿಕ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು‌ ಎಂದು ಹೇಳಿದರು.

ಘಟನೆ ನಡೆದ ದಿನವಾದ ಶುಕ್ರವಾರ (ಮಾ. 1) ಡಿಸಿಎಂ ಡಿ.ಕೆ. ಶಿವಕುಮಾರ್,‌ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಭೇಟಿ ನೀಡಿದ್ದಾರೆ. ನಾನು ಕೂಡ ಇಂದು ಆಸ್ಪತ್ರೆಗೆ ಹಾಗೂ ಸ್ಥಳಕ್ಕೆ ಹೋಗುತ್ತೇನೆ. ಇದು ಸಂಘಟನೆಯ ಕೆಲಸವೋ ಇಲ್ಲವೋ ಗೊತ್ತಿಲ್ಲ. ಸೀರಿಯಸ್ ಆಗಿ ತನಿಖೆ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಅವಧಿಯಲ್ಲಿ ಬಾಂಬ್‌ ಬ್ಲಾಸ್ಟ್‌ ಆಗಿತ್ತಲ್ಲವೇ?

ಅಲ್ಪಸಂಖ್ಯಾತರ ಓಲೈಕೆಗಾಗಿ ಈ ಕೃತ್ಯ ನಡೆದಿದೆ ಎಂಬ ಬಿಜೆಪಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರ ಅವಧಿಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತಲ್ಲವೇ? ಅದೂ ಅಲ್ಪಸಂಖ್ಯಾತರ ಓಲೈಕೆ ಕಾರಣಕ್ಕೇ ಆಗಿತ್ತಾ? ಎಂದು ಪ್ರಶ್ನೆ ಮಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದರು.

ಪಾಕ್‌ ಪರ ಘೋಷಣೆ ಕೇಸ್;‌ ಇನ್ನೂ FSL ರಿಪೋರ್ಟ್‌ ಬಂದಿಲ್ಲ

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಇನ್ನೂ ಯಾವುದೇ ವರದಿ ನಮ್ಮ ಕೈ ಸೇರಿಲ್ಲ. ಎಫ್‌ಎಸ್‌ಎಲ್ ರಿಪೋರ್ಟ್ ಈವರೆಗೆ ಬಂದಿಲ್ಲ. ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು.

ನಾಲ್ವರು ವಶಕ್ಕೆ, ವಿಚಾರಣೆ ತೀವ್ರ

ಬಾಂಬ್‌ ಸ್ಫೋಟ ಪ್ರಕರಣಕ್ಕೆ (Blast in Bengaluru) ಸಂಬಂಧಿಸಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಸಿಸಿಟಿಟಿಯಲ್ಲಿ (CCTV) ಅನುಮಾನಾಸ್ಪದ ಓಡಾಟದೊಂದಿಗೆ ಕಂಡುಬಂದಿದ್ದ, ಕ್ಯಾಪ್‌ ಧರಿಸಿದ ವ್ಯಕ್ತಿಯನ್ನೂ ವಶಕ್ಕೆ ಪಡೆಯಲಾಗಿದೆ.

ನಿನ್ನೆ ಮಧ್ಯಾಹ್ನ ಸ್ಫೋಟದ ಕ್ಷಣದಿಂದಲೇ ಮಿಂಚಿನ ಕಾರ್ಯಾಚರಣೆಗೆ ಇಳಿದಿರುವ ಸಿಸಿಬಿ ಪೊಲೀಸರು, ಕ್ಯಾಪ್ ಹಾಕಿರುವ ವ್ಯಕ್ತಿ ಸೇರಿ ಒಟ್ಟು ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ. ಅಜ್ಞಾತ ಸ್ಥಳದಲ್ಲಿ ಇವರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಶಂಕಿತ ವ್ಯಕ್ತಿ ಖತರ್ನಾಕ್ ಪ್ಲಾನ್ ಮಾಡಿದ್ದು, ಘಟನೆಯುದ್ದಕ್ಕೂ ಕೈಗೆ ಹ್ಯಾಂಡ್ ಗ್ಲೌಸ್ ಹಾಕಿಕೊಂಡಿದ್ದ ಎಂದು ಗೊತ್ತಾಗಿದೆ. ಫಿಂಗರ್ ಪ್ರಿಂಟ್ ಎಲ್ಲಿಯೂ ಉಳಿಯಬಾರದು ಎಂಬ ಕಾರಣಕ್ಕೆ ಹ್ಯಾಂಡ್ ಗ್ಲೌಸ್ ಬಳಸಿದ್ದ. ಹ್ಯಾಂಡ್ ಗ್ಲೌಸ್ ಹಾಕಿಕೊಂಡೇ ಕೆಫೆಯೊಳಗೆ ಎಂಟ್ರಿ ನೀಡಿದ್ದು, ಅದರ ಜೊತೆಗೇ ಹೋಗಿದ್ದಾನೆ.

ಕೆಫೆಯಲ್ಲಿ ಬಾಂಬ್‌ ಇಟ್ಟು ನಾಪತ್ತೆಯಾದ ವ್ಯಕ್ತಿಯ ಚಲನವಲನಗಳ ಎಕ್ಸ್‌ಕ್ಲೂಸಿವ್‌ ದೃಶ್ಯಗಳು ಸಿಸಿಟಿವಿ ಫೂಟೇಜ್‌ನಿಂದ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿವೆ. ಕೆಫೆಯಿಂದ ಹೊರ ಬಂದು ವೇಗವಾಗಿ ಹೋಗುತ್ತಿರುವ ವ್ಯಕ್ತಿಯ ಓಡಾಟವನ್ನು ಸಿಸಿಟಿವಿ ಸೆರೆಹಿಡಿದಿತ್ತು. ಆರೋಪಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದು, ತಲೆಗೆ ಕ್ಯಾಪ್‌ ಧರಿಸಿದ್ದಾನೆ. ಈತನ ಅನುಮಾನಾಸ್ಪದ ಓಡಾಟದ ದಾಖಲಾಗಿದೆ. ನಿನ್ನೆ 11:50ಕ್ಕೆ ಕೆಫೆಯಿಂದ ಹೊರ ಬಂದಿರುವ ಈತ ವೇಗವಾಗಿ ಹೊರಟುಹೋಗಿದ್ದಾನೆ.

ರಾಮೇಶ್ವರಂ ಕೆಫೆ‌ ಮುಂದೆಯೇ ಬಿಎಂಟಿಸಿ ಬಸ್ ನಿಲ್ದಾಣವಿದೆ. ಅಲ್ಲೇ‌ ಇರುವ ಹೋಟೆಲ್‌ನ ಹೊರ ಭಾಗದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಶಂಕಿತನ ವಿಡಿಯೋ ಸೆರೆಯಾಗಿದೆ. ಬರುವಾಗ ಈತ ಬಸ್ಸಿನಲ್ಲಿ ಬಂದು ಇಳಿದಿದ್ದ. ಹೋಗುವಾಗ ಅವಸರದಲ್ಲಿ ನಡೆದುಕೊಂಡು ಹೋಗಿದ್ದಾನೆ.

ಆರೋಪಿ ಸೈಡ್ ಬ್ಯಾಗ್ ಹಾಕಿಕೊಂಡು ಬ್ಯಾಗ್‌ ಒಳಗೆ ಮತ್ತೊಂದು ಬ್ಯಾಗ್‌ನಲ್ಲಿ ಸ್ಫೋಟಕ ತಂದಿರುವುದು ಇನ್ನೊಂದು ಸಿಸಿಟಿವಿ ಫೂಟೇಜ್‌ನಲ್ಲಿ ಪೊಲೀಸರಿಗೆ ಲಭ್ಯವಾಗಿದೆ. ಜನರ ಕಣ್ಣಿಗೆ ಮತ್ತು ಸಿಸಿ ಕ್ಯಾಮರದಲ್ಲಿ ಸೆರೆಯಾಗದ ಜಾಗಕ್ಕೆ ಈತ ಹುಡುಕಾಟ ನಡೆಸಿದ್ದು, ಕೊನೆಗೆ ಕೈ ತೊಳೆಯುವ ಜಾಗದಲ್ಲಿದ್ದ ಡೆಸ್ಟ್ ಬಿನ್‌ನಲ್ಲಿ ಬ್ಯಾಗ್ ಬಿಸಾಡಿ ಎಸ್ಕೇಪ್ ಆಗಿದ್ದಾನೆ.

ಎಫ್‌ಐಆರ್‌ ದಾಖಲು

ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಕುರಿತು ಹೆಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 307, 471 ಮತ್ತು ಯುಎಪಿಎ ಕಾಯ್ದೆಯ 16, 18, 38 ಹಾಗೂ explosive substance’s act 3ಮತ್ತು 4 ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ.

ನಿನ್ನೆ ಮಧ್ಯಾಹ್ನ‌ 12.55ಕ್ಕೆ ರಾಮೇಶ್ವರ ಕೆಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಓರ್ವ ಮಹಿಳೆ ತೀವ್ರವಾಗಿ ಗಾಯಗೊಂಡು ಒಟ್ಟು ಹತ್ತು ಜನ ಗಾಯಗೊಂಡಿದ್ದರು. ಎನ್ಎಸ್‌ಜಿ ಬಾಂಬ್ ಸ್ಕ್ವಾಡ್ ವಿಂಗ್‌ನಿಂದಲೂ ಕಾರ್ಯಾಚರಣೆ ತೀವ್ರಗೊಂಡಿದ್ದು, ಸ್ಪೋಟ ನಡೆದ ಸ್ಥಳದಲ್ಲಿ ಇಂಚಿಂಚು ಪರಿಶೀಲನೆ ನಡೆಸಿದ್ದಾರೆ.

ಹೆಚ್ಚಿನ ಭದ್ರತೆ ಇಲ್ಲ

ಕೆಫೆ ಸ್ಫೋಟ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಬಸ್‌ ನಿಲ್ದಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಎಂದಿನಂತೆ ಭದ್ರತೆ ಮುಂದುವರಿದಿದೆ. ಯಾವುದೇ ರೀತಿಯ ಹೆಚ್ಚುವರಿ ಭದ್ರತೆಯನ್ನು ರೈಲ್ವೇ ಇಲಾಖೆ ಆಯೋಜನೆ ಮಾಡಿಲ್ಲ. ನಿನ್ನೆಯ ನಡೆದ ಘಟನೆ ಬಳಿಕ ಭದ್ರತೆ ತೀವ್ರ ಮಾಡುವ ನಿರೀಕ್ಷೆ ಇತ್ತು. ರಾಜ್ಯದ ನಾನಾ ಜಿಲ್ಲೆಗಳಿಂದ, ದೇಶದ ನಾನಾ ಭಾಗಗಳಿಂದ ಬಂದು ತಲುಪುವ ಪ್ರಮುಖ ಭಾಗದಲ್ಲಿ ಹೆಚ್ಚಿನ ಎಚ್ಚರ ತೆಗೆದುಕೊಂಡಿಲ್ಲ.

ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ; ಇವನೇ ನೋಡಿ ಬಾಂಬ್‌ ಇಟ್ಟವನು!

ಬಿಎಂಟಿಸಿ ಬಸ್‌ಗಳ ಪರಿಶೀಲನೆ

ನಿನ್ನೆ ಶಂಕಿತ ವ್ಯಕ್ತಿ ಓಡಾಡಿರಬಹುದಾದ ಬಿಎಂಟಿಸಿ ಬಸ್‌ಗಳಲ್ಲಿನ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟು 5 ಡಿಪೋಗಳ ವೋಲ್ವೋ ಬಸ್‌ಗಳ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಲಾಗಿದೆ. ಶಂಕಿತ ಬಂದು ಹೋಗಿರುವ ಬಸ್‌ಗಳಲ್ಲಿ ಪರಿಶೀಲನೆ ಮಾಡಲಾಗಿದೆ.

Exit mobile version