ಆನೇಕಲ್: “ನಮಗೆ ಪ್ರಾಂಜಲ್ ಒಬ್ಬ ಕಾಣಿಸುತ್ತಿದ್ದಾನೆ. ಆದರೆ ಅವನಂತೆ ಸಾವಿರಾರು ಸೈನಿಕರು ತನ್ನದು ಅಂತ ಯಾವುದನ್ನೂ ಲೆಕ್ಕಿಸದೆ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಜಮ್ಮು ಕಾಶ್ಮೀರದ ರಜೌರಿಯ ಎನ್‌ಕೌಂಟರ್‌ನ (Rajouri Encounter) ಹುತಾತ್ಮ ಯೋಧ (martyr soldier) ಪ್ರಾಂಜಲ್ ತಂದೆ ವೆಂಕಟೇಶ್ ಅವರು ನುಡಿದಿದ್ದಾರೆ.
ʼʼಮೊನ್ನೆ ನಡೆದ ಎನ್ಕೌಂಟರ್‌ನಲ್ಲಿ ಪ್ರಾಂಜಲ್ ಹುತಾತ್ಮ ಆಗಿದ್ದಾನೆ. ಅವನ ಬಲಿದಾನ, ದೇಶಸೇವೆಗೆ ಗೌರವ ಸಲ್ಲಿಸಲಾಗುತ್ತದೆ. ಮನೆಯ ಮುಂಭಾಗದಲ್ಲಿ ಸಿದ್ಧತೆ ನಡೆಯುತ್ತಿದೆ. ಅವನು ನೋಡಲು ಮಾತ್ರ ಗನ್ ಹಿಡಿದು ರಫ್ ತರಹ ಕಾಣಿಸ್ತಾನೆ. ಆದರೆ ತುಂಬಾ ಮೃದು ಸ್ವಭಾವದವನಾಗಿದ್ದ. ಅವನು ನಮ್ಮ ಜೊತೆ ಇಲ್ಲ ಎನ್ನುವ ದುಃಖವಾಗುತ್ತಿದೆʼʼ ಎಂದು ವೆಂಕಟೇಶ್ ಹೇಳಿದ್ದಾರೆ.
“ನರ್ಸರಿಯಿಂದ ಹತ್ತನೇ ತರಗತಿ ವರೆಗೆ ಮಂಗಳೂರಲ್ಲಿ ಓದಿದ್ದ. ಸಿ.ಇ.ಟಿ ಸೀಟ್ ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ಸಿಕ್ಕಿತ್ತು. ಆದರೆ ಸೇನೆಗೆ ಸೇರಬೇಕೆಂದು ಮೂರನೇ ಕ್ಲಾಸಿನಿಂದ ಹಟ ಮಾಡುತ್ತಿದ್ದ. ಹಟ ಸಾಧಿಸಿ ಸೇನೆ ಸೇರಿದ್ದ. ಅದಕ್ಕೆ ಬೇಕಾದ ಶಿಕ್ಷಣ ಪಡೆದು, ಮೆಡಿಕಲ್ ಟೆಸ್ಟ್ ಪಾಸ್ ಮಾಡಿ 2014ರ ಜೂನ್‌ನಲ್ಲಿ ಸೇನೆಗೆ ಸೇರಿದ್ದ. ನಾನು ಹಾಗೂ ಅವನ ಅಮ್ಮ ಹೋಗಿ ರೈಲ್ವೆ ಸ್ಟೇಷನ್‌ಗೆ ಬಿಟ್ಟು ಬಂದಿದ್ದೆವುʼʼ ಎಂದು ವೆಂಕಟೇಶ್ ನೆನಪಿಸಿಕೊಂಡರು.
“ಅವನು ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾನೆ. ಆತಂಕವಾದಿಗಳನ್ನು ದಮನ ಮಾಡಲು ತೆರಳಿದ್ದ. ಪ್ರಾಂಜಲ್ ಥರ ಹಲವಾರು ಜನ ಇದ್ದಾರೆ. ಎಷ್ಟೋ ಸೈನಿಕರು ತನ್ನದೇ ಅಂತ ಯಾವುದನ್ನೂ ಲೆಕ್ಕಿಸದೆ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೆ ಪ್ರಾಂಜಲ್ ಒಬ್ಬ ಕಾಣಿಸುತ್ತಿದ್ದಾನೆ. ಅವನಂತೆ ಸಾವಿರಾರು ಸೈನಿಕರು ಇದ್ದಾರೆʼʼ ಎಂದು ಪ್ರಾಂಜಲ್ ತಂದೆ ನುಡಿದಿದ್ದಾರೆ.
“ಪ್ರಾಂಜಲ್ ನಾಲ್ಕು ದಿನದ ಹಿಂದೆ ಕಾಲ್ ಮಾಡಿದ್ದ. ಇಂಟೆಲಿಜೆನ್ಸ್ ಇನ್ಪುಟ್ ಇದೆ. ನಾನೇ ಫೋನ್ ಮಾಡುತ್ತೇನೆ ಎಂದು ಹೇಳಿದ್ದ. ಆಗಾಗ ಮೆಸೇಜ್ ಮಾಡುತ್ತಿದ್ದ. ಅವನ ಮೆಸೇಜ್ ನೋಡಿ ಓಕೆ ಹೇಳುತ್ತಿದ್ದೆವು. ಆಗಾಗ ಮಾತೇ ಆಡದೇ ಇದ್ದಾಗಲೂ ನಮಗೂ ಒತ್ತಡ ಅರ್ಥ ಆಗುತ್ತಿತ್ತು. ಮೊನ್ನೆ ಅವನ ಕಮಾಂಡರ್ ಆಫೀಸ್‌ನಿಂದ ಕರೆ ಬಂತುʼʼ ಎಂದರು.
“ಪ್ರಾಂಜಲ್‌ಗೆ ಮದುವೆ ಆಗಿ ಎರಡು ವರ್ಷವಾಗಿತ್ತು. ಆಕೆ ಚೆನ್ನೈನಲ್ಲಿ ಪಿಎಚ್.ಡಿ ಮಾಡುತ್ತಿದ್ದಾರೆ. ಒಬ್ಬ ಯೋಧನಿಗೆ ತಕ್ಕನಾದ ಪತ್ನಿ ಆಕೆʼʼ ಎಂದು ವೆಂಕಟೇಶ್ ನುಡಿದರು.
ಪಾರ್ಥಿವ ಶರೀರ ಇಂದು ಬೆಂಗಳೂರಿಗೆ
ಜಮ್ಮು- ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ (Rajouri Encounter) ಹುತಾತ್ಮನಾದ ಯೋಧ ಪ್ರಾಂಜಲ್ ಪಾರ್ಥಿವ ಶರೀರ ಇಂದು ಸಂಜೆ ಬೆಂಗಳೂರಿಗೆ ತಲುಪಲಿದೆ. ಜಮ್ಮು ಕಾಶ್ಮೀರದಲ್ಲಿ ಪ್ರಾಂಜಲ್ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವ ಸಲ್ಲಿಸಲಿರುವ ಆರ್ಮಿ, ಅಲ್ಲಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಕಳಿಸಿಕೊಡಲಿದೆ. ಇಂದು ಸಂಜೆ ಅಥವಾ ಮಧ್ಯರಾತ್ರಿ ವೇಳೆಗೆ ಪ್ರಾಂಜಲ್ ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದೆ.
ಜಿಗಣಿಯ ನಂದನವನ ಬಡಾವಣೆಯಲ್ಲಿ ಪ್ರಾಂಜಲ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಬೆಳಗ್ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರ ಯೋಧ ಪ್ರಾಂಜಲ್‌ಗೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಕೂಡ್ಲುವಿನ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸುವ ಸಾಧ್ಯತೆ ಇದೆ. ಹುತಾತ್ಮ ಯೋಧ ಪ್ರಾಂಜಲ್ ನಿವಾಸಕ್ಕೆ ಆನೇಕಲ್ ತಹಶೀಲ್ದಾರ್ ಶಿವಪ್ಪ ಲಮಾಣಿ ನೇತೃತ್ವದ ತಂಡ ಭೇಟಿ ನೀಡಿದ್ದು, ಪ್ರಾಂಜಲ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ: Rajouri Encounter : ದಸರೆಗೆ ಬಂದಿದ್ದ ಕ್ಯಾ. ಪ್ರಾಂಜಲ್; ಜಿಗಣಿಯ ನಂದನವನವೀಗ ಶೋಕಸಾಗರ