ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹುಸಿ ಬಾಂಬ್ ಬೆದರಿಕೆ (Bomb Threat) ಕರೆ ಹೆಚ್ಚಾಗುತ್ತಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಶಾಲೆ, ಆಸ್ಪತ್ರೆ ಮುಂತಾದೆಡೆ ಬಾಂಬ್ ಇಟ್ಟಿರುವುದಾಗಿ ಅನೇಕ ಕರೆಗಳು ಬಂದಿವೆ. ಇದರಿಂದ ಪೊಲೀಸರೂ ಜಾಗೃತರಾಗಿದ್ದು, ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದಾರೆ. ಈ ಮಧ್ಯೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿ ಜೋಕ್ ಮಾಡಲು ಹೋಗಿ ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಏರ್‌ಪೋರ್ಟ್ ಬೋರ್ಡಿಂಗ್ ವೇಳೆ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿ ಹರಿಯಾಣ ಮೂಲದ ರಾಜೇಶ್ ಕುಮಾರ್ ಕೆಲ ಕಾಲ ಆತಂಕ ಸೃಷ್ಟಿಸಿದ್ದ. ಬೆಂಗಳೂರಿನಿಂದ ಪುಣೆಗೆ ವಿಮಾನ ಟಿಕೆಟ್ ಬುಕ್ ಮಾಡಿ ಏರ್‌ಪೋರ್ಟ್‌ಗೆ ಆಗಮಿಸಿದ್ದ ಆತ ಟರ್ಮಿಟನ್ 2 ಬೋರ್ಡಿಂಗ್ ತಪಾಸಣೆ ವೇಳೆ ಹುಚ್ಚಾಟ ಮೆರೆದಿದ್ದ. ತಪಾಸಣೆ ವೇಳೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಇದೀಗ ಹುಸಿ ಬಾಂಬ್ ಬೆದರಿಕೆ ಹಾಕಿ ಆತಂಕದ ವಾತಾವರಣ ಸೃಷ್ಟಿಸಿದ್ದ ರಾಜೇಶ್ ಕುಮಾರ್‌ನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರಾಜೇಶ್ ಕುಮಾರ್ ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿಕೊಂಡಿದ್ದ. ಏರ್‌ಪೋರ್ಟ್ ಬೋರ್ಡಿಂಗ್ ವೇಳೆ ಸಹಪ್ರಯಾಣಿಕರ ಜತೆಗೂ ಇದನ್ನೇ ಹೇಳಿದ್ದ. ಆತನ ಮಾತು ಕೇಳಿ ದಂಗಾಗಿ ಹೋಗಿದ್ದ ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ ಕೂಡಲೇ ಆತನ ಬಳಿಯಿದ್ದ ಬ್ಯಾಗ್ ವಶಕ್ಕೆ ಪಡೆದು ತಪಾಸಣೆ ನಡೆಸಿದ್ದರು.
ಜತೆಗೆ ಬಾಂಬ್ ಸ್ಕ್ವಾಡ್ ಹಾಗೂ ಏರ್‌ಪೋರ್ಟ್ ಠಾಣೆ ಪೊಲೀಸರಿಗೂ ಮಾಹಿತಿ ನೀಡಿದ್ದರು. ತಪಾಸಣೆ ವೇಳೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ವಿಚಾರಣೆ ವೇಳೆ ರಾಜೇಶ್ ಕುಮಾರ್, ʼʼಥ್ರಿಲ್‌ಗಾಗಿ ಈ ರೀತಿ ಹೇಳಿಕೆ ನೀಡಿದ್ದೆ. ತಮಾಷೆ ಮಾಡಿದ್ದೆʼʼ ಎಂದು ರಾಜೇಶ್ ಕುಮಾರ್ ಬಾಯಿ ಬಿಟ್ಟಿದ್ದಾನೆ. ಇದರಿಂದ ಕೆಲ ಕಾಲ ಮೂಡಿದ್ದ ಆತಂಕದ ವಾತಾವರಣ ತಿಳಿಯಾಗಿ ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಪೊಲೀಸರು ವಶದಲ್ಲಿರುವ ರಾಜೇಶ್ ಕುಮಾರ್‌ನ ವಿಚಾರಣೆ ಮುಂದುವರಿದಿದೆ.
ಏರ್ ಇಂಡಿಯಾ ವಿಮಾನದಲ್ಲಿ ಮತ್ತೆ ಅವಘಡ
ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ(Emergency Landing) ಮಾಡಿದೆ. ಬೆಂಗಳೂರಿನಿಂದ ಕೇರಳದ ಕೊಚ್ಚಿಗೆ ಹೊರಟಿದ್ದ ವಿಮಾನದ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ತುರ್ತು ಭೂ ಸ್ಪರ್ಶ ಮಾಡಲಾಗಿದ್ದು, ಭಾರೀ ಅವಘಡವೊಂದು ತಪ್ಪಿದೆ.
AI 1132 ಏರ್ ಇಂಡಿಯಾ ವಿಮಾನ ರಾತ್ರಿ 11.20ಕ್ಕೆ ಬೆಂಗಳೂರಿನಿಂದ ಕೊಚ್ಚಿಗೆ ತೆರಳಲು ಟೇಕ್ ಆಫ್ ಆಗಿತ್ತು. ಆದರೆ ವಿಮಾನದಲ್ಲಿ ಏಕಾಏಕಿ ಬೆಂಕಿ ಹೊಗೆ ಕಾಣಿಸಿಕೊಂಡಿದೆ. ಕೂಡಲೆ ಪೈಲಟ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಎಮರ್ಜೆನ್ಸಿ ಲ್ಯಾಂಡ್ ಮಾಡಿದರು. ಇದರಿಂದ ಭಾರಿ ಅನಾಹುತ ತಪ್ಪಿದೆ. ವಿಮಾನ ಭೂ ಸ್ಪರ್ಶವಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಕೂಡಲೆ ಬೆಂಕಿಯನ್ನು ನಂದಿಸಿದ್ದಾರೆ. ವಿಮಾನದಲ್ಲಿದ್ದ ಸಿಬ್ಬಂದಿ ಸೇರಿ 170 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ: Cyber Crime: ಸೈಬರ್ ಕ್ರೈಂ ಜಾಲ ಪತ್ತೆ; ಬಲೆಗೆ ಬಿದ್ದ ಸಿಮ್ ಕಾರ್ಡ್ ಪೂರೈಸುತ್ತಿದ್ದ ವ್ಯಕ್ತಿ