Site icon Vistara News

Karnataka Election 2023: ಬೊಮ್ಮಾಯಿ ಅವರದ್ದು ನಾಮ್‌ಕೆ ವಾಸ್ತೆ ಅಲ್ಲ, ಕಾಮ್‌ಕೆ ವಾಸ್ತೆ: ಕಿಚ್ಚ ಸುದೀಪ್‌

basavaraj Bommai is not naam ke vaaste he done kaam ke vaaste says Kichcha Sudeep Karnataka Election 2023 updates

ಹಾವೇರಿ: ಮೊದಲ‌ ಸಲ ನಿಮ್ಮ‌ ಊರಿಗೆ ಬಂದಿದ್ದೇನೆ. ಕನಕದಾಸರು, ಶರೀಫರು ಹುಟ್ಟಿದ ಊರಲ್ಲಿ ಚುನಾವಣಾ ಕ್ಯಾಂಪೇನ್ ಅನ್ನು ಮಾಡುತ್ತಿದ್ದೇನೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಿದವರು ನಮ್ಮ ಬಸವರಾಜ ಬೊಮ್ಮಾಯಿ ಮಾಮ. ಅವರದ್ದು ನಾಮ್‌ಕೆ ವಾಸ್ತೆ ಅಲ್ಲ, ಕಾಮ್‌ಕೆ ವಾಸ್ತೆ. ಅವರನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಗೆಲ್ಲಿಸಬೇಕು ಎಂದು ಕಿಚ್ಚ ಸುದೀಪ್‌ ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ (Basavaraj Bommai) ಪರ ಬ್ಯಾಟ್‌ ಬೀಸಿದ್ದಾರೆ.

ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಪರ ಬೃಹತ್‌ ರೋಡ್‌ ಶೋ ನಡೆಸಿದ ಬಳಿಕ ಏರ್ಪಡಿಸಲಾಗಿದ್ದ ಸಮಾವೇಶದಲ್ಲಿ ಮಾತನಾಡಿದ ಸುದೀಪ್‌, ಬೊಮ್ಮಾಯಿ ಅವರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ಈಗ ಅವರು ಒಬ್ಬರೇ ಇಲ್ಲ, ಅವರ ಜತೆಗೆ ನಾನೂ ಇದೀನೆ. ನಾನು ಒಬ್ಬ ಭಾರತೀಯನಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೆಲಸವನ್ನು ಮೆಚ್ಚುತ್ತೇನೆ. ನಾನು ಸುಮ್ಮ ಸುಮ್ಮನೆ ಕ್ಯಾಂಪೇನ್‌ಗೆ ಇಳಿಯಲ್ಲ. ಎಲ್ಲಿ ಕೆಲಸ ಆಗುತ್ತದೆಯೋ ಅಂಥ ಕಡೆಗೆ ಮಾತ್ರವೇ ನಾನು ಬರುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Karnataka Election 2023: ಶಿಗ್ಗಾಂವಿಯಲ್ಲಿ ಸಿಎಂ ಭರ್ಜರಿ ರೋಡ್‌ ಶೋ; ಪ್ರಚಾರದ ಅಬ್ಬರಕ್ಕೆ ಕಿಚ್ಚು ಹಚ್ಚಿದ ಸುದೀಪ್

ಕಾಂಗ್ರೆಸ್ ಅಂದ್ರೆ ಕಮಿಷನ್, ಭ್ರಷ್ಟಾಚಾರ- ಜೆಪಿ ನಡ್ಡಾ

ಈ ನಾಮಪತ್ರ ಕೇವಲ ಶಿಗ್ಗಾಂವಿಗೆ ಮಾತ್ರವಲ್ಲ. ಇಡೀ ರಾಜ್ಯದ ಪರವಾಗಿ ಸಲ್ಲಿಸಿದ್ದಾಗಿದೆ. ರಸ್ತೆ ಕಾಮಗಾರಿ ಸೇರಿದಂತೆ ಅಭಿವೃದ್ಧಿ ಕೆಲಸವನ್ನು ಸಿಎಂ ಬೊಮ್ಮಾಯಿ ಮಾಡಿದ್ದಾರೆ. ಪ್ರಧಾನಿ ಮೋದಿಯವರ ಕೆಲಸ ನನಗೆ ಮೆಚ್ಚುಗೆ ಆಗಿದೆ ಎಂದು ಸುದೀಪ್‌ ಹೇಳಿದರು. ಇಂದು ಜನರ ಉತ್ಸಾಹ ನೋಡುತ್ತಿದ್ದರೆ ಬೊಮ್ಮಾಯಿ ಅವರನ್ನು ವಿಧಾನಸಭೆಯಲ್ಲಿ ನೋಡಲು ನಿರ್ಧರಿಸಿದಂತೆ ಕಾಣುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

ರಾಜ್ಯದಲ್ಲಿ ಅಭಿವೃದ್ಧಿ ನಿರಂತರವಾಗಿದೆ. ಬಿಜೆಪಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಅಭಿವೃದ್ಧಿಯನ್ನು ಮುಂದುವರಿಸಬೇಕು. ಕಾಂಗ್ರೆಸ್ ಅಂದರೆ ಕಮಿಷನ್, ಭ್ರಷ್ಟಾಚಾರವಾಗಿದೆ. ಇಲ್ಲಿನ ಕಾಂಗ್ರೆಸ್ ನಾಯಕರು ದೆಹಲಿಯವರಿಗೆ ಎಟಿಎಂ ಇದ್ದ ಹಾಗೆ. ಇಲ್ಲಿಂದ ಹಣ ದೆಹಲಿ ಕಾಂಗ್ರೆಸ್‌ಗೆ ವರ್ಗಾವಣೆ ಆಗುತ್ತದೆ. ಅಂತಹ ಸರ್ಕಾರ ಬೇಕಾ?‌ ಎಂದು ಪ್ರಶ್ನೆ ಮಾಡಿದರು.

ರಾಜ್ಯ ಅಭಿವೃದ್ಧಿಯತ್ತ ಹೋಗಬೇಕು, ಮುಂದೆ ಬರಬೇಕು ಎಂದಾದರೆ ಕಮಲದ ಬಟನ್ ಒತ್ತಿ. ಕರ್ನಾಟಕದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ನಮ್ಮ ರಾಜ್ಯ ದೇಶದಲ್ಲಿಯೇ ನಂಬರ್ ಒನ್ ಇದೆ. ಬೊಮ್ಮಾಯಿ ಸರ್ಕಾರದಲ್ಲಿ ಕ್ರಿಮಿನಲ್ ಚಟುವಟಿಕೆ ಬಂದ್ ಆಗಿದೆ.‌ ಕ್ರಿಮಿನಲ್‌ಗಳು ಜೈಲಿನಲ್ಲಿದ್ದಾರೆ. ಬೊಮ್ಮಾಯಿಯವರನ್ನು ನೀವು ಗೆಲ್ಲಿಸಿದ್ದೀರಿ ಎಂದು ನಡ್ಡಾ ಹೇಳಿದರು.

ಇದನ್ನೂ ಓದಿ: BS Yediyurappa : ಮಗನ ನಾಮಪತ್ರ ಮೆರವಣಿಗೆ ವೇಳೆ ನಟಿ ಶ್ರುತಿಯ ಕೆನ್ನೆ ಹಿಂಡಿ ತಲೆ ಸವರಿ ಆಶೀರ್ವದಿಸಿದ ರಾಜಾಹುಲಿ!

ಬೊಮ್ಮಾಯಿಗೆ ಬಂದಿದೆ ತಾರಾಬಲ

ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಹಲವು ಕ್ಷೇತ್ರಗಳು ನಾನಾ ಕಾರಣಗಳಿಂದ ಸುದ್ದಿಯಲ್ಲಿವೆ. ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದ ಕಣವೂ ರಂಗೇರುತ್ತಿದೆ. ಇಲ್ಲಿಗೆ ಈಗ ಬೊಮ್ಮಾಯಿ ಪರ ನಟ ಕಿಚ್ಚ ಸುದೀಪ್‌ ಪ್ರಚಾರಕ್ಕೆ ಎಂಟ್ರಿ ಕೊಡುವ ಮೂಲಕ ತಾರಾ ಬಲ ಬಂದಂತೆ ಆಗಿದೆ.

Exit mobile version