Site icon Vistara News

ಟಾಪ್‌ ನಾಯಕರ ಎಂಟ್ರಿ ಮೂಲಕ ಚುನಾವಣೆ ಟ್ರೆಂಡ್‌ ಸೃಷ್ಟಿಸಲು ಬಿಜೆಪಿ ಪ್ಲ್ಯಾನ್‌: ಬಿಎಸ್‌ವೈ-ಬೊಮ್ಮಾಯಿ ಚರ್ಚೆ

BSY BOMMAI

ಬೆಂಗಳೂರು: ಕಾಂಗ್ರೆಸ್‌ ರಾಜ್ಯಾದ್ಯಂತ ಸರಣಿ ಕಾರ್ಯಕ್ರಮಗಳ ಮೂಲಕ ಹೈಪ್‌ ಸೃಷ್ಟಿ ಮಾಡಿರುವ ನಡುವೆಯೇ ಈಗ ಬಿಜೆಪಿ ಕೂಡಾ ದೊಡ್‌ ಮಟ್ಟದಲ್ಲಿ ಎಲೆಕ್ಷನ್‌ ಟ್ರೆಂಡ್‌ ಕ್ರಿಯೇಟ್‌ ಮಾಡಲು ಸಜ್ಜಾಗಿದೆ.

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಕೇಂದ್ರದ ಮೂರು ನಾಯಕರು ರಾಜ್ಯಕ್ಕೆ ಭೇಟಿ ನೀಡಲಿದ್ದು, ಅವರ ಮೂಲಕ ೨೦೨೩ರ ಅಸೆಂಬ್ಲಿ ಚುನಾವಣೆಯ ಪ್ರಚಾರಕ್ಕೆ ಮುನ್ನುಡಿ ಬರೆಸಲು ಬಿಜೆಪಿ ಅಣಿಯಾಗಿದೆ. ಸಾಮಾನ್ಯವಾಗಿ ಬಿಜೆಪಿ ಚುನಾವಣೆಗೆ ಒಂದು ವರ್ಷವಿರುವಾಗಲೇ ಹವಾ ಸೃಷ್ಟಿಸುವುದು ರೂಢಿ. ಆದರೆ, ಕರ್ನಾಟಕದಲ್ಲಿ ಇನ್ನೂ ಧೂಳೆದ್ದಿಲ್ಲ. ಇದರ ನಡುವೆ ಕಾಂಗ್ರೆಸ್‌ ನಾನಾ ಕಾರಣಗಳನ್ನು ಇಟ್ಟುಕೊಂಡು ಪಕ್ಷ ಸಂಘಟನೆ ಮಾಡುತ್ತಿರುವುದು ವರಿಷ್ಠ ಗಮನಕ್ಕೆ ಬಂದಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್‌ ಶಾ ಅವರು ಕೇವಲ ಎಂಟು ದಿನಗಳ ಅವಧಿಯಲ್ಲಿ ರಾಜ್ಯಕ್ಕೆ ಬರುತ್ತಿದ್ದಾರೆ.

ಮಂಗಳೂರಿನಲ್ಲಿ ಪ್ರಧಾನಿ ಮೋದಿ
ಸೆಪ್ಟೆಂಬರ್ ೨ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇಲ್ಲಿ ನಡೆಯುವ ಬೃಹತ್‌ ಸಮಾವೇಶದಲ್ಲಿ ಮೋದಿ ಅವರು ಕೇಂದ್ರ ರಾಜ್ಯ ಸರ್ಕಾರದ ಸಾಧನೆ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವುದು ಖಚಿತವಾಗಿದೆ.

ಸೆಪ್ಟೆಂಬರ್‌ ೮ರಂದು ಜೆ.ಪಿ ನಡ್ಡಾ
ದೊಡ್ಡಬಳ್ಳಾಪುರದಲ್ಲಿ ಸೆಪ್ಟೆಂಬರ್‌ ೮ರಂದು ನಡೆಯಲಿರುವ ರಾಜ್ಯ ಸರಕಾರದ ಮೂರನೇ ವರ್ಷಾಚರಣೆ-ಜನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬರುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಎರಡು ಲಕ್ಷ ಜನರನ್ನು ಸೇರಿಸುವ ಟಾಸ್ಕ್‌ ನೀಡಲಾಗಿದೆ ಎನ್ನಲಾಗುತ್ತಿದೆ. ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಕಾರ್ಯಕರ್ತರ ಸಮಾವೇಶ ಇದಾಗಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಡ್ಡಾ ಅವರು ಪಕ್ಷ ಸಂಘಟನಾತ್ಮಕ ಚಟುವಟಿಕೆಗಳನ್ನೂ ಗಮನಿಸಿ ಸಲಹೆ ನೀಡಲಿದ್ದಾರೆ.

ಸೆಪ್ಟೆಂಬರ್‌ ೯ಕ್ಕೆ ಅಮಿತ್‌ ಶಾ
ರಾಜ್ಯದ ಚೆನ್ನೇನಹಳ್ಳಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಭೆಯಲ್ಲಿ ಭಾಗವಹಿಸಲೆಂದು ಸೆಪ್ಟೆಂಬರ್‌ ೯ರಂದು ಗೃಹ ಸಚಿವ ಅಮಿತ್‌ ಶಾ ಆಗಮಿಸಲಿದ್ದಾರೆ. ಹೀಗೆ ಬಂದವರು ರಾಜ್ಯದ ಹಿರಿಯ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ. ೨೦೨೩ರ ಚುನಾವಣೆ ಕುರಿತಂತೆ ಪ್ರಧಾನ ಚರ್ಚೆಯೂ ಅಮಿತ್‌ ಶಾ ಅವರ ಸಭೆಯಲ್ಲಿ ನಡೆಯುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಕಾಂಗ್ರೆಸ್‌ನ್ನು ಮಣಿಸುವುದು, ಪಕ್ಷದೊಳಗಿನ ಆಂತರಿಕ ಸಂಘರ್ಷಕ್ಕೆ ಎಚ್ಚರಿಕೆ ನೀಡುವುದು, ಮಿಷನ್‌ ೧೫೦ ಗುರಿ ನಿಗದಿ ಈ ಸಭೆಯಲ್ಲಿ ನಡೆಯುವ ಸಾಧ್ಯತೆ ಇದೆ.

ಬಿಎಸ್‌ವೈ ಜತೆ ಬೊಮ್ಮಾಯಿ ಚರ್ಚೆ
ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಜತೆ ಚರ್ಚೆ ನಡೆಸಿದರು.

ಸೋಮವಾರ ಬೆಳಗ್ಗೆ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಸುಮಾರು ಹೊತ್ತು ಅವರ ಜತೆ ಚರ್ಚಿಸಿದರು. ಬಿಎಸ್‌ವೈ ಅವರು ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿ ಮೋದಿ, ನಡ್ಡಾ ಮತ್ತು ಬಿ.ಎಲ್‌. ಸಂತೋಷ್‌ ಸೇರಿದಂತೆ ಪ್ರಮುಖ ನಾಯಕರನ್ನೂ ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದರಲ್ಲಿನ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲು, ಮುಂಬರುವ ಸಮಾವೇಶಗಳ ಸಂಘಟನೆ ಹಾಗೂ ಇತರ ಆಂತರಿಕ ವಿಚಾರಗಳ ಕುರಿತಂತೆ ಅವರ ನಡುವೆ ಮಾತುಕತೆ ನಡೆಯಿತು ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.

ಇದನ್ನೂ ಓದಿ| ಸಿದ್ದರಾಮೋತ್ಸವ ಎಫೆಕ್ಟ್‌ ಕಡೆಗಣಿಸುವಂತಿಲ್ಲ; ಅಮಿತ್‌ ಶಾಗೆ ಯಡಿಯೂರಪ್ಪ ರಿಪೋರ್ಟ್

Exit mobile version