ರಾಯಚೂರು: ಮುಂದಿನ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದ ನೇತೃತ್ವದಲ್ಲೇ ಎದುರಿಸ್ತೇವೆ. ಬಿಜೆಪಿಗೆ ಸ್ಪಷ್ಟ ಬಹುಮತ ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ರಾಯರ ಆರಾಧನೆ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ಆಗಮಿಸಿರುವ ಅವರು, ರಾಯರ ಕ್ಷೇತ್ರದಲ್ಲಿ ಈ ಮಾತು ಹೇಳುತ್ತಿರುವುದರಿಂದ ನಮ್ಮ ಗೆಲವು ಶತಸಿದ್ಧ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಸ್ಪಷ್ಟವಾಗಿ ನುಡಿದರು.
ಆ.21 ರಿಂದ ಬಿಜೆಪಿ ನಾಯಕರೆಲ್ಲರೂ ರಾಜ್ಯ ಪ್ರವಾಸ ಮಾಡುತ್ತೇವೆ. ಸಭೆ ನಡೆಸಿ ಸ್ಥಳ ಶೀಘ್ರ ನಿಗದಿ ಮಾಡಲಾಗುವುದು. ಪ್ರವಾಸದ ಮೂಲಕ ಪಕ್ಷ ಸಂಘಟನೆ ಮಾಡುತ್ತೇವೆ ಎಂದ ಅವರು ಈಗಾಗಲೇ ಗೆಲ್ಲುವ ಅಭ್ಯರ್ಥಿ ಹುಡುಕಿ ಕೆಲಸ ಮಾಡಲು ಸೂಚನೆ ನೀಡಿದ್ದೇವೆ ಎಂದು ಹುಮ್ಮಸ್ಸಿನಿಂದ ಹೇಳಿದರು.
ನಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ ಜನರ ಒಲವು ನನ್ನ ಮೇಲೆ ಇದೆ ಎಂದು ಹೆಮ್ಮೆಯಿಂದ ಹೇಳಿಕೊಂಡ ಅವರು, ರಾಜ್ಯದ ಜನರ ವಿಶ್ವಾಸ ಬಿಜೆಪಿ ಮೇಲಿದೆ. ಹೀಗಾಗಿ ಪಕ್ಷವನ್ನು ಅಧಿಕಾರಿಕ್ಕೆ ತರುವುದೇ ನಮ್ಮ ಗುರಿ ಎಂದರು. ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಪಕ್ಷದ ಋಣ ತೀರಿಸುವೆ ಎಂದರು.
ಸಿಎಂ ಬೊಮ್ಮಾಯಿ ಬದಲಾವಣೆ ವಿಚಾರ ಪ್ರಸ್ತಾಪಿಸಿದ ಅವರು, ಚುನಾವಣೆ ಹತ್ತಿರದಲ್ಲೇ ಇರೋದರಿಂದ ಬದಲಾವಣೆ ಇಲ್ಲ. ಬೊಮ್ಮಾಯಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವಿಪಕ್ಷಗಳು ಹಬ್ಬಿಸುವ ವಂದಂತಿಗಳಿಗೆ ಬೆಲೆ ಇಲ್ಲ. ಕಾರ್ಯಕರ್ತರು ಗೊಂದಲಕ್ಕೆ ಸಿಲುಕೋದು ಬೇಡ. ಚುನಾವಣೆ ಹತ್ತಿರದಲ್ಲಿರೋದರಿಂದ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದರು.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನಮ್ಮ ಪಕ್ಷದ ಶಕ್ತಿ ಎಂದ ಅವರು, ಇತ್ತೀಚೆಗೆ ಅಮಿತ್ ಶಾ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯ ರಾಜಕೀಯ ವಿದ್ಯಮಾನದ ಕುರಿತು ಚರ್ಚೆ ಮಾಡಿದ್ದೇನೆ. ಕೇಂದ್ರ ನಾಯಕರಿಂದ ಯಾವುದೇ ಅಡ್ಡಿ ಆತಂಕವಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದರು.
ಹೈಕಮಾಂಡ್ ಒಪ್ಪಿದರೆ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ಪುನರುಚ್ಛರಿಸಿದ ಯಡಿಯೂರಪ್ಪ, ಈ ವಿಷಯದಲ್ಲಿ ಗೊಂದಲವೇನೂ ಇಲ್ಲ ಎಂದರು. ಕೇಂದ್ರ ನಾಯಕರ ತೀರ್ಮಾನದಂತೆಯೇ ಆಯಾ ಜಿಲ್ಲೆಯ ಸಚಿವರನ್ನು ಆಯಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರಾಗಿ ನೇಮಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ| ಕಟೀಲು ಬದಲಾವಣೆ ಮುನ್ಸೂಚನೆ ನೀಡಿದ ಮಾಜಿ ಸಿಎಂ: ಮುಖ್ಯಮಂತ್ರಿಗೆ ಯಡಿಯೂರಪ್ಪ ಅಭಯ