ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ (Border Dispute) ಸಂಬಂಧಪಟ್ಟಂತೆ ಈಗ ಮಹಾರಾಷ್ಟ್ರ ನವನಿರ್ಮಾಣ ಸೇನೆ ವರಿಷ್ಠ ರಾಜ್ ಠಾಕ್ರೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರ ಈಗಲೇ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಘರ್ಷ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದು, ಸಂಘರ್ಷವೇ ಬೇಕೆಂದರೆ ಅದಕ್ಕೆ ನಾವು ಸಿದ್ಧ ಎಂದು ತಿಳಿಸಿದ್ದಾರೆ.
ಗಡಿ ವಿವಾದದ ಬಗ್ಗೆ ಸುದೀರ್ಘ ಪತ್ರ ಬರೆದಿರುವ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರಿಗೆ ಸಂಘರ್ಷ ಬೇಕಾಗಿದೆ. ಹೀಗಾಗಿ ಉದ್ದೇಶಪೂರ್ವಕವಾಗಿ ಮಹಾರಾಷ್ಟ್ರವನ್ನು ಗುರಿಯಾಗಿಸಲಾಗುತ್ತಿದೆ. ಮಹಾರಾಷ್ಟ್ರಕ್ಕೆ ಏನು ಸಿಕ್ಕಿದೆಯೋ ಅದು ಸಂಘರ್ಷ ಮೂಲಕವೇ ಸಿಕ್ಕಿದೆ. ಹೀಗಾಗಿ ಸಂಘರ್ಷಕ್ಕಾಗಿ ನಾವು ಸದಾ ಸಿದ್ಧವಾಗಿಯೇ ಇರುತ್ತೇವೆ. ಹೀಗೆ ಆಗಬಾರದು ಎಂದರೆ ಕೇಂದ್ರ ಸರ್ಕಾರ ಈಗಲೇ ಗಮನಹರಿಸಬೇಕು ಎಂದು “ಅಖಂಡ ಮಹಾರಾಷ್ಟ್ರ ” ಎಂಬ ಹ್ಯಾಷ್‌ಟ್ಯಾಗ್‌ನಡಿ ಟ್ವೀಟ್ ಮಾಡಿದ್ದಾರೆ.
ಪತ್ರದ ಸಾರಾಂಶ
ಶ್ರೀ ಜೈ ಮಹಾರಾಷ್ಟ್ರ||
ಈ ಮಧ್ಯೆ ನಾನು ಹೇಳಿದಂತೆ, ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಉಲ್ಬಣಗೊಳ್ಳಲು ಯಾರೋ ಮತ್ತೆ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲಿಂದ ಯಾರು ಈ ವಿವಾದವನ್ನು ಹುಟ್ಟುಹಾಕಿದ್ದಾರೆ ಎಂಬುದು ಸ್ಪಷ್ಟವಾಗಿದೆ, ಆದರೆ, ಅದನ್ನು ಇಲ್ಲಿ ಯಾರು ಪೋಷಿಸುತ್ತಿದ್ದಾರೆ ಎಂಬುದನ್ನು ಇಲ್ಲಿನ ಸರ್ಕಾರ ನೋಡಬೇಕು. ಕರ್ನಾಟಕದ ಮುಖ್ಯಮಂತ್ರಿಗಳು ಈಗ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು. ಸಮಸ್ಯೆ ಉಲ್ಬಣಗೊಳ್ಳಲು ಬಿಡಬಾರದು. ಮರಾಠಿಗರು ಸಂಕಷ್ಟದಲ್ಲಿದ್ದಾರೆ. ಇದನ್ನು ತಕ್ಷಣ ನಿಲ್ಲಿಸಿ.
ಇದನ್ನೂ ಓದಿ | Border Dispute | ಬೆಳಗಾವಿ ನಮ್ಮದು, ಒಂದಿಂಚೂ ಬಿಟ್ಟು ಕೊಡಲ್ಲ; ಸರ್ಕಾರ ಒಳ್ಳೇ ವಕೀಲರ ನೇಮಿಸಲಿ: ಸಿದ್ದು
ಈಗ ಎದ್ದಿರುವ ವಿವಾದವನ್ನು ಚರ್ಚೆ ಮತ್ತು ಸಾಮರಸ್ಯದ ಮೂಲಕ ಪರಿಹರಿಸಬೇಕು. ಆದರೆ, ಆರಂಭದಿಂದಲೇ ಹೋರಾಟದಂತಹ ಕ್ರಮಕ್ಕೆ ಮುಂದಾದರೆ ನನ್ನ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಏನು ಮಾಡಬಹುದು ಎಂಬುದನ್ನು ತೋರಿಸಿದ್ದಾರೆ. ಅಗತ್ಯವಿದ್ದರೆ ನಮ್ಮ ಉತ್ತರವೂ ಅಷ್ಟೇ ಪ್ರಬಲವಾಗಿರುತ್ತದೆ ಎಂಬುದನ್ನು ಮರೆಯಬೇಡಿ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮುಂಬರುವ 2023ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಈ ವಿಷಯವನ್ನು ಪ್ರಸ್ತಾಪಿಸಲಾಗುತ್ತಿದೆ. ಈ ಮೂಲಕ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ. ಮರಾಠಿ ಸಹೋದರರಿಗೆ ನಾನು ಹೇಳಬಯಸುವುದು ಏನೆಂದರೆ, ಅವರಿಗೆ ಏನು ಬೇಕೋ ಅದನ್ನು ನಾವು ನೀಡಬಾರದು, ನಮಗೆ ಬೇಕಾದುದನ್ನು ನಾವು ಮಾಡಬೇಕು.
ಇದ್ದಕ್ಕಿದ್ದಂತೆ, ರಾಜ್ಯದ ಗಡಿಗಳ ಬಗ್ಗೆ ವಿಚಾರವನ್ನು ಪ್ರತಿಪಾದಿಸಲಾಗುತ್ತಿದೆ. ಈ ವಿಷಯವು ಸುಲಭವಲ್ಲ, ಆದ್ದರಿಂದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಮಹಾರಾಷ್ಟ್ರ ನಾಡಿಗೆ ಬರುವ ಇಂಥ ಸಮಸ್ಯೆಗಳಿಗೆ ತಕ್ಕ ಉತ್ತರವನ್ನು ನೀಡಬೇಕು. ಇಲ್ಲಿ ನಾವು ಯಾವ ಪಕ್ಷಕ್ಕೆ ಸೇರಿದವರು ಎಂಬುದನ್ನು ಮರೆತು, ನಾವು ಮಹಾರಾಷ್ಟ್ರಕ್ಕೆ ಸೇರಿದವರು ಎಂದು ನೆನಪಿಸಿಕೊಂಡು ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರವು ಈ ಸಮಸ್ಯೆಯನ್ನು ಸಮಯೋಚಿತ ರೀತಿಯಲ್ಲಿ ಪರಿಹರಿಸಬೇಕು ಮತ್ತು ಈ ವಿವಾದವು ಭುಗಿಲೇಳದಂತೆ ನೋಡಿಕೊಳ್ಳಬೇಕು.
ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ಸಾಕಷ್ಟು ಏಕರೂಪತೆ ಇದೆ ಎಂದು ನಾನು ಪುನರುಚ್ಚರಿಸುತ್ತೇನೆ. ಇಂದು, ಇಲ್ಲಿನ ಅನೇಕ ಕುಲದೇವರ ಕ್ಷೇತ್ರಗಳು ಕರ್ನಾಟಕದಲ್ಲಿವೆ. ಅದೇ ರೀತಿಯಾಗಿ ಅನೇಕ ಕನ್ನಡಿಗರು ಮಹಾರಾಷ್ಟ್ರದಲ್ಲಿದ್ದಾರೆ. ಇದನ್ನೇ ಸಂಕ್ಷಿಪ್ತವಾಗಿ ಹೇಳುವುದಾದರೆ, ಎರಡೂ ರಾಜ್ಯಗಳ ನಡುವಿನ ಬಂಧವು ಬಲವಾಗಿದೆ. ಆದ್ದರಿಂದ ಯಾವುದೇ ಸಂಘರ್ಷ ಇರಬಾರದು. ಆದರೂ, ಕರ್ನಾಟಕದಿಂದ ನಮಗೆ ಸವಾಲು ಮಾಡುವುದೇ ಆದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮತ್ತು ಇಲ್ಲಿನ ಮರಾಠಿ ಜನರು ಅದನ್ನು ಸ್ವೀಕರಿಸಲು ಸಿದ್ಧರಾಗಿದ್ದೇವೆ. ಸಂಘರ್ಷವನ್ನು ಹೊಂದದಿರುವುದು ಮತ್ತು ಸ್ನೇಹವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಹಿತಾಸಕ್ತಿಯಾಗಿದೆ ಎಂದು ರಾಜ್ ಠಾಕ್ರೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ | Border Dispute | ನಮ್ಮ ತಂಟೆಗೆ ಬಂದರೆ ಕರ್ನಾಟಕದ ಗಡಿ ದಾಟಿ ಮಹಾರಾಷ್ಟ್ರದ ಒಂದೂ ವಾಹನ ಬರಲು ಬಿಡಲ್ಲ: ಕರವೇ ನಾರಾಯಣಗೌಡ