ಮುಂಬೈ: ಬೆಳಗಾವಿ ಗಡಿ ವಿವಾದಕ್ಕೆ (Border Dispute) ಸಂಬಂಧಿಸಿದಂತೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೇಜವಾಬ್ದಾರಿ ಹೇಳಿಕೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ಕರ್ನಾಟಕಕ್ಕೆ ಮಹಾರಾಷ್ಟ್ರ ಅಣೆಕಟ್ಟೆಗಳಿಂದ ನೀರು ಬಿಡುವ ಬಗ್ಗೆ ಮರುಪರಿಶೀಲಿಸಬೇಕಾಗುತ್ತದೆ ಎಂದು ಮಹಾರಾಷ್ಟ್ರದ ಸಚಿವ ಶಂಭುರಾಜ್ ದೇಸಾಯಿ ಅವರು ಧಮ್ಕಿ ಹಾಕಿದ್ದಾರೆ.
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ತಂಡದೊಂದಿಗೆ ಸಂವಹನ ನಡೆಸಲು ಇತ್ತೀಚೆಗಷ್ಟೇ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು, ಶಂಭುರಾಜ್ ದೇಸಾಯಿ ಮತ್ತು ಚಂದ್ರಕಾಂತ್ ಪಾಟೀಲ್ ಅವರನ್ನು ನೋಡಲ್ ಸಚಿವರನ್ನಾಗಿ ನೇಮಕ ಮಾಡಿದ್ದಾರೆ. ಮುಂಬೈನ ವಿಧಾನ ಭವನ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಒಂದಿಂಚೂ ಭೂಮಿಯನ್ನು ಮಹಾರಾಷ್ಟ್ರಕ್ಕೆ ನೀಡುವುದಿಲ್ಲ ಎಂಬ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ಖಂಡಿಸಿದರು.
ಮಹಾರಾಷ್ಟ್ರವು ತಾಳ್ಮೆಯಿಂದ ಇದೆ. ಈ ಸಂಗತಿಯನ್ನು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಬೇಸಿಗೆ ಕಾಲದಲ್ಲಿ ಮಹಾರಾಷ್ಟ್ರದಲ್ಲಿರುವ ಕೋಯ್ನಾ ಮತ್ತು ಕೃಷ್ಣಾ ಅಣೆಕಟ್ಟುಗಳ ಮೇಲೆ ಕರ್ನಾಟಕ ವಿಪರೀತವಾಗಿ ಅವಲಂಬಿಸಿರುತ್ತದೆ ಎಂಬುದನ್ನು ಮರೆಯಬಾರದು. ಒಂದು ವೇಳೆ ಕರ್ನಾಟಕವು ಪ್ರಚೋದನಕಾರಿ ಹೇಳಿಕೆಗಳನ್ನು ನಿಲ್ಲಿಸದಿದ್ದರೆ, ಕರ್ನಾಟಕಕ್ಕೆ ನೀರು ಪೂರೈಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರವು ಮರು ಪರಿಶೀಲಿಸಬೇಕಾಗುತ್ತದೆ ಎಂದು ಸಚಿವ ದೇಸಾಯಿ ಎಚ್ಚರಿಸಿದ್ದಾರೆ.
ಗಡಿ ವಿಷಯವು ನ್ಯಾಯಾಲಯದಲ್ಲಿರುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆದರಿಕೆಯ ಭಾಷೆಯನ್ನು ಬಳಸುತ್ತಿದ್ದಾರೆ. ಇದು ಒಳ್ಳೆಯದಲ್ಲ. ಕೂಡಲೇ ಅಂಥ ಮಾತುಗಳನ್ನಾಡುವುದನ್ನು ನಿಲ್ಲಿಸಬೇಕು. ಬೊಮ್ಮಾಯಿ ಅವರ ಭಾಷೆಯಲ್ಲಿ ಮಾತನಾಡಲು ನಮಗೂ ಬರುತ್ತದೆ. ನಮ್ಮನ್ನು ಪ್ರಚೋದಿಸುವ ಕೆಲಸವನ್ನು ಮಾಡಲು ಹೋಗಬೇಡಿ ಎಂದು ದೇಸಾಯಿ ಅವರು ಹೇಳಿದರು.
ಇದನ್ನು ಓದಿ | Border Dispute | ಭಾರತಕ್ಕೆ ಚೀನಾ ಪ್ರವೇಶಿಸಿದಂತೆ, ನಾವು ಕರ್ನಾಟಕಕ್ಕೆ ನುಗ್ಗುತ್ತೇವೆ; ಗಡಿ ವಿವಾದದ ಉರಿ ಹೆಚ್ಚಿಸಿದ ಸಂಜಯ್ ರಾವತ್