ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ (Border dispute) ಹಿನ್ನೆಲೆ ಕೆಲವು ಮರಾಠಿ ಪುಂಡರು ಶುಕ್ರವಾರ ಬೆಳಗ್ಗೆಯಷ್ಟೇ ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು ಮಸಿ ಹಾಕಿದ್ದರು. ಮತ್ತೆ ಅಂದು ರಾತ್ರಿಯೇ ರಾಜ್ಯ ಸಾರಿಗೆ ಬಸ್‌ಗೆ ಕಲ್ಲು ತೂರಿ ಉದ್ಧಟತನ ಪ್ರದರ್ಶಿಸಿದ್ದಾರೆ.
ಮೀರಜ್-ಕಾಗವಾಡ ಮಧ್ಯೆ ಸಂಚರಿಸುವ ಕರ್ನಾಟಕ ಬಸ್‌ಗೆ ಮಹಾರಾಷ್ಟ್ರದ ಕೆಲವು ಪುಂಡರು ಕಲ್ಲು ತೂರಾಟ ನಡೆಸಿದ್ದಾರೆ. ಪುಣೆಯಿಂದ ಅಥಣಿಗೆ ಬರುತ್ತಿದ್ದ ವಾಯವ್ಯ ಕರ್ನಾಟಕ ಸಾರಿಗೆ ಬಸ್‌ಗೆ ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಕಲ್ಲು ತೂರಲಾಗಿದೆ. ಬಸ್ ಸಂಚಾರ ಮಾಡುತ್ತಿದ್ದಾಗಲೇ ಕಲ್ಲು ತೂರಿದ್ದಾರೆ. ಇದರಿಂದಾಗಿ ಬಸ್ ಮುಂಭಾಗದ ಗಾಜು ಜಖಂಗೊಂಡಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಡಿಪೋಗೆ ಸೇರಿದ್ದ ಬಸ್ ಇದಾಗಿದ್ದು, ಕರ್ನಾಟಕ ಬಸ್‌ಗಳಿಗೆ ಕಲ್ಲು ತೂರಾಟ ಮಾಡಿದ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ. ಮೀರಜ್ ಮಾರ್ಗವಾಗಿ ಸಂಚರಿಸುವ ಎಲ್ಲ 150 ಬಸ್‌ಗಳ ಸಂಚಾರ ಸ್ಥಗಿತ ಮಾಡಲಾಗಿದೆ. ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಬಸ್ ಸೇವೆ ಸ್ಥಗಿತವಾಗಿದ್ದು, ಕಾಗವಾಡ ಬಾರ್ಡರ್ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್ ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.
ಇದನ್ನೂ ಓದಿ | Border Dispute| ಮಹಾರಾಷ್ಟ್ರದ ಜತ್ತ ತಾಲೂಕಲ್ಲಿ ನೀರಿಗಾಗಿ ಪ್ರತಿಭಟನೆ; ಕರ್ನಾಟಕಕ್ಕೆ ಹೋಗ್ತೇವೆ ಎಂದ ಹಳ್ಳಿಗರು
ಈ ಕುರಿತು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿರುವ ಕೆಎಸ್‌ಆರ್‌ಟಿಸಿ ಡಿಸಿ ಶಶಿಧರ್ ಬಸ್ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಕಾಗವಾಡ ಹಾಗೂ ಅಥಣಿ ಮಾರ್ಗವಾಗಿ ಮೀರಜ್ ತಲುಪುವ ಬಸ್‌ಗಳ ಸಂಚಾರವನ್ನು ತಡೆಹಿಡಿಯಲಾಗಿದೆ. ಕೊಲ್ಹಾಪುರ, ಪುಣೆ, ಮುಂಬೈಗೆ ಓಡಾಡುವ ಬಸ್ ಸಂಚಾರ ಎಂದಿನಂತೆ ಪ್ರಾರಂಭವಾಗಿದೆ. ಕೇವಲ ಮೀರಜ್‌ಗೆ ಮಾತ್ರ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದಿನಕ್ಕೆ ಕರ್ನಾಟಕದಿಂದ ಮೀರಜ್‌ಗೆ ೧೨೦ ಬಸ್ಸುಗಳ ಸಂಚಾರ ಮಾಡುತ್ತಿದ್ದವು, ಈಗ ತಾತ್ಕಾಲಿಕವಾಗಿ ಆ ಎಲ್ಲ ಬಸ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರ – ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ
ಕರ್ನಾಟಕ ಗಡಿ ಭಾಗವಾದ ಕಾಗವಾಡದಲ್ಲಿ ಪೊಲೀಸ್ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿದೆ. ಕಾಗವಾಡ ಗಡಿಯಲ್ಲಿ ಒಂದು ಕೆಎಸ್‌ಆರ್‌ಪಿ, ಡಿಆರ್ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಕರ್ನಾಟಕ – ಮಹಾರಾಷ್ಟ್ರದ ಸಾಂಗಲಿ, ಮೀರಜ್‌ಗೆ ತೆರಳುವ ಕರ್ನಾಟಕ ಬಸ್ ಸಂಚಾರವನ್ನು ನಿರ್ಬಂಧಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಮಹಾರಾಷ್ಟ್ರದ ಬಸ್ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ.