ದಾವಣಗೆರೆ: ಸಚಿವ ಭೈರತಿ ಬಸವರಾಜ್ ವಿರುದ್ಧದ ಜಕಾತಿ ವಸೂಲಿ ಅವಧಿ ವಿಸ್ತರಣೆಗೆ ಲಂಚ ಆರೋಪದ ಬಗ್ಗೆ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದು, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವ ಆಡಿಯೊ, ವಿಡಿಯೊ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಮಾಹಿತಿ ಇಲ್ಲದೇ ನಾನು ಮಾತನಾಡುವುದಿಲ್ಲ. ನಮ್ಮ ಸಚಿವರು ಇಂಥದ್ದರಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.
ಜಕಾತಿ ವಸೂಲಿ ಅವಧಿ ವಿಸ್ತರಣೆ ಕುರಿತು ದಾವಣಗೆರೆ ಮಹಾನಗರ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಹಾಗೂ ಗುತ್ತಿಗೆದಾರ ಕೃಷ್ಣ ನಡುವಿನ ಮಾತುಕತೆಯ ಆಡಿಯೊ ವೈರಲ್ ಆಗಿದೆ. ಇದರಲ್ಲಿ ಪ್ರಮುಖವಾಗಿ ಆಯುಕ್ತ ವಿಶ್ವನಾಥ್ ಮುದಜ್ಜಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೆಸರು ಪ್ರಸ್ತಾಪವಾಗಿದ್ದು, ಭೈರತಿ ಬಸವರಾಜ್‌ಗೆ 15 ಲಕ್ಷ ರೂಪಾಯಿ ಸಂದಾಯ ಮಾಡಿರುವ ಬಗ್ಗೆ ಚರ್ಚೆಯಾಗಿದೆ.
ಇದನ್ನೂ ಓದಿ | BJP Janasankalpa Yatre | ಸಿದ್ದು ಸರ್ಕಾರದಲ್ಲಿ ಬಾಯಿ ಮಾತಿನಲ್ಲಿ ಮಾತ್ರವೇ ಇತ್ತು ಸಾಮಾಜಿಕ ನ್ಯಾಯ: ಸಿಎಂ ಬೊಮ್ಮಾಯಿ
ಪಾಲಿಕೆ ಆಯುಕ್ತರ ಸೂಚನೆಯಂತೆ ಜಕಾತಿ ವಸೂಲಿ ಗುತ್ತಿಗೆ ನವೀಕರಿಸಲು 7 ಲಕ್ಷ ರೂಪಾಯಿಗೆ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್, ಗುತ್ತಿಗೆದಾರ ಕೃಷ್ಣಗೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಮುಂಗಡವಾಗಿ 2 ಲಕ್ಷ ರೂಪಾಯಿ ಲಂಚ ಪಡೆಯುವಾಗ ವೆಂಕಟೇಶ್ ಲೋಕಾಯುಕ್ತ ಬಲೆಗೆ ಭಾನುವಾರ ಬಿದ್ದಿದ್ದರು. ಇದರ ಬೆನ್ನಲ್ಲೇ ಆಯುಕ್ತ ವಿಶ್ವನಾಥ್ ಮುದಜ್ಜಿ ನಾಪತ್ತೆಯಾಗಿದ್ದಾರೆ.
ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಹಾಗೂ ಗುತ್ತಿಗೆದಾರ ಕೃಷ್ಣ ನಡುವಿನ ಮಾತುಕತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ಗೆ ಲಂಚ ನೀಡಿರುವ ಬಗ್ಗೆ ಮಾತುಕತೆ ನಡೆದಿದೆ. ಮಿನಿಸ್ಟರ್‌ಗೆ 15 ಲಕ್ಷ ರೂಪಾಯಿ ನೀಡಲಾಗಿದೆ. ಕೃಷ್ಣಪ್ಪನಿಂದ 5 ಲಕ್ಷ ರೂಪಾಯಿ ನೀಡಲು ಹೇಳಿ ಎಂದು ಕಮಿಷನರ್ ಹೇಳಿದ್ದಾರೆ. ನನಗೆ ಕೊಟ್ಟರೆ ಕೆಲಸ ಮಾಡಿಕೊಡುವುದಿಲ್ಲವೇ…ಎಂದು ವ್ಯವಸ್ಥಾಪಕ ವೆಂಕಟೇಶ್, ಗುತ್ತಿಗೆದಾರ ಕೃಷ್ಣಗೆ ಹೇಳಿರುವ ಮಾತುಗಳು ಆಡಿಯೊದಲ್ಲಿವೆ. ಇವರ ಮಾತುಕತೆಯಲ್ಲಿ ಸಚಿವ ಭೈರತಿ ಬಸವರಾಜ್ ಹೆಸರು ಪ್ರಸ್ತಾಪವಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ | Satish Jarakiholi | ಕಾಂಗ್ರೆಸ್ ಪಕ್ಷದ ಹಿಂದು ವಿರೋಧಿ ನೀತಿಯ ಅನಾವರಣ: ಜಾರಕಿಹೊಳಿ ಹೇಳಿಕೆಗೆ ಕಟೀಲ್ ಖಂಡನೆ