ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾತ್ರಿ 8ರಿಂದ 11ಗಂಟೆವರೆಗೂ ಪಟಾಕಿ ಸ್ಫೋಟಿಸಲು ಅವಕಾಶ ನೀಡಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುತ್ತೋಲೆ ಹೊರಡಿಸಿದೆ. ವಾಯು ಮಾಲಿನ್ಯ ನಿಯಂತ್ರಿಸಲು ಸುಪ್ರೀಂ ಕೋರ್ಟ್ ಆದೇಶದಂತೆ ಸುತ್ತೋಲೆ ಹೊರಡಿಸಿದ್ದು, ಜತೆಗೆ ಹಸಿರು ಪಟಾಕಿ ಹೊರತುಪಡಿಸಿ ಉಳಿದ ಯಾವುದೇ ರೀತಿಯ ಪಟಾಕಿ ಮಾರಾಟ ಹಾಗೂ ಬಳಕೆ ನಿಷೇಧ ವಿಧಿಸಲಾಗಿದೆ.
ದೀಪಾವಳಿ ಸಂದರ್ಭದಲ್ಲಿ ನವೆಂಬರ್ 11ರಿಂದ 15 ರವರೆಗೆ ಪಟಾಕಿ ಸಿಡಿಸಲು ಸಮಯ ನಿಗದಿ ಮಾಡಲಾಗಿದೆ. ಪಟಾಕಿ ಬಳಕೆ ಕುರಿತಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡುವಂತೆ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ.
ದೀಪಾವಳಿ ಹಬ್ಬದ ಒಂದು ವಾರದ ಮೊದಲು ಹಾಗೂ ಒಂದು ವಾರದ ನಂತರ ಎಲ್ಲಾ ಜಿಲ್ಲೆಗಳಲ್ಲಿ ಪರಿವೇಷ್ಟಕ ವಾಯು ಹಾಗೂ ಶಬ್ದ ಗುಣಮಟ್ಟ ಮಾಪನಕ್ಕೆ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.
ಹಸಿರು ಪಟಾಕಿ ಹೊರತು ಬೇರೆ ಪಟಾಕಿ ಕಂಡು ಬಂದಲ್ಲಿ ಗೋದಾಮು ಮುಟ್ಟುಗೋಲು ಹಾಕಿಕೊಳ್ಳಬೇಕು, ಹಸಿರು ಪಟಾಕಿಗಳ ರ‍್ಯಾಂಡಮ್ ಪರೀಕ್ಷೆ ಮಾಡಿಕೊಂಡು ಖಚಿತ ಪಡಿಸಿಕೊಳ್ಳುವುದು, ಸಾರ್ವಜನಿಕರು ಹಾಗೂ ಮಕ್ಕಳಲ್ಲಿ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮ, ಸ್ಥಳೀಯ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಹಾಗೂ ನಿಷೇಧಿತ ಪ್ರದೇಶಗಳಲ್ಲಿ ಪಟಾಕಿ ಸ್ಫೋಟಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.
ಸುತ್ತೋಲೆಯಲ್ಲಿರುವ ಸೂಚನೆಗಳು
1. ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯ ಎಲ್ಲಾ ಅಧೀನ ಅಧಿಕಾರಿಗಳ ಗಮನಕ್ಕೆ ತರುವುದು ಮತ್ತು ಆದೇಶ ಪಾಲನೆಗೆ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸುವುದು.
2. ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಜಿಲ್ಲಾ ಅಗ್ನಿಶಾಮಕ ಪಡೆ ಅಧಿಕಾರಿ, ಸ್ಥಳೀಯ ಸಂಸ್ಥೆಯ ಆರೋಗ್ಯಾಧಿಕಾರಿಗಳು, ತಹಸೀಲ್ದಾರರು, ಜಿಲ್ಲಾ ಪರಿಸರ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆಸಕ್ತ ನಾಗರಿಕರು ಹಾಗೂ ಸ್ಥಳೀಯ ಸರ್ಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆಗಳನ್ನು ರಚಿಸಿ, ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶೀಲಿಸಬೇಕು ಹಾಗೂ ಅಲ್ಲಿ ಹಸಿರು ಪಟಾಕಿಯಲ್ಲದೆ, ಇನ್ನಾವುದಾದರೂ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿದ್ದಲ್ಲಿ, ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗು ಸಂಬಂಧಿತ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಬೇಕು.
3. ಎಲ್ಲಾ ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆಯಿರುತ್ತದೆ ಹಾಗೂ ಕ್ಯೂ.ಆರ್ ಕೋಡ್ ಸಹ ಇರುತ್ತದೆ. ಚಿಹ್ನೆಯ ಬಗ್ಗೆ ಸಂಬಂಧಪಟ್ಟ ಜಿಲ್ಲೆಯ ಪರಿಸರ ಅಧಿಕಾರಿಗಳಿಂದ ಖಚಿತ ಪಡಿಸಿಕೊಳ್ಳುವುದು. ಚಿಹ್ನೆ ಇಲ್ಲದ ಯಾವುದೇ ಪಟಾಕಿ ಹಸಿರು ಪಟಾಕಿಯೆನಿಸುವುದಿಲ್ಲ ಮತ್ತು ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
4. ಯಾವುದೇ ಹಸಿರು ಪಟಾಕಿಗಳ ಪ್ಯಾಕೆಟ್ಟುಗಳನ್ನು ರ‍್ಯಾಂಡಮ್ ಆಗಿ ಸಂಗ್ರಹಿಸಿ, ನಿಗದಿತ ವಿಧಿ ವಿಧಾನಗಳ ಮೂಲಕ ಅವುಗಳ ಶಬ್ಧ ಮಟ್ಟವನ್ನು ಮಾಪನ ಮಾಡಬೇಕು ಮತ್ತು ನಿಗದಿತ ಗುಣಮಾಪನಗಳಿಗೆ ಸರಿಹೊಂದಿದ್ದಲ್ಲಿ, ಅವುಗಳನ್ನು ಕೂಡಲೆ ಮುಟ್ಟುಗೋಲು ಹಾಕಿಕೊಳ್ಳಬೇಕು. ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಹಾಗು ಇವುಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗು ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು.
5. ನ್ಯಾಯಾಲಯದ ಆದೇಶದಂತೆ AAQM ಮತ್ತು Noise Monitoring ಮಾಡಲು ಕ್ರಮ ವಹಿಸಬೇಕು. Samples ಮತ್ತು ಗುಣ ಮಾಪನಗಳ ವಿಶ್ಲೇಷಣೆ ಹಾಗೂ Noise Monitoring ವಿಷಯದಲ್ಲಿ ಡಾ. ರಾಘವೇಂದ್ರ, ಡಿ.ಎಸ್.ಒ 9880046189 ಇವರನ್ನು ಸಂಪರ್ಕಿಸಲು ತಿಳಿಸಿದೆ.
6. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳ ಕುರಿತಂತೆ ಸಾರ್ವಜನಿಕರಿಗೆ ಮತ್ತು ಮಕ್ಕಳಲ್ಲಿ ಅರಿವು ಮೂಡಿಸಲು ಪರಿಣಾಮಾಕಾರಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳುವುದು.
7. ಯಾವುದೇ ಸ್ಥಳೀಯ ಆಸ್ಪತ್ರೆ ಹಾಗು ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಹಾಗೂ ಇನ್ನಾವುದೇ ನಿಷೇಧಿತ ಪ್ರದೇಶದಲ್ಲಿ ಯಾವುದೇ ರೀತಿಯ ಪಟಾಕಿಗಳನ್ನು ಸ್ಪೋಟಿಸುವಂತಿಲ್ಲ ಅಥವಾ ಬಳಸುವಂತಿಲ್ಲ, ಇದನ್ನು ಎಲ್ಲಾ ಸ್ಥಳೀಯ ಸಂಸ್ಥೆ ಹಾಗು ಪೊಲೀಸ್ ಇಲಾಖೆಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು.
8. ದೀಪಾವಳಿ ಸಮಯದಲ್ಲಿ ಉತ್ಪಾದನೆಯಾಗುವ ಘನ ತ್ಯಾಜ್ಯ ವಿಲೇವಾರಿಗೆ ಶೀಘ್ರ ಕ್ರಮ ವಹಿಸಬೇಕು. ಹೊರ ರಾಜ್ಯಗಳಿಂದ ನಿಷೇಧಿತ ಪಟಾಕಿ ಸಾಗಾಟ ಮಾಡುತ್ತಿದ್ದಲ್ಲಿ ಅವುಗಳನನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳಬೇಕು.