ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ಇದೀಗ ರಾಜ್ಯದಲ್ಲಿ ಉಪ ಚುನಾವಣೆಗೆ ಕಣ ರಂಗೇರಿದೆ (By Election). ಬೈ ಎಲೆಕ್ಷನ್ ನಡೆಯಲಿರುವ ಚನ್ನಪಟ್ಟಣ, ಶಿಗ್ಗಾಂವ್ ಮತ್ತು ಸಂಡೂರಿನಲ್ಲಿ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಮೈತ್ರಿ ಪಕ್ಷಗಳು ಗೆಲುವುಗಾಗಿ ಪಣ ತೊಟ್ಟಿದ್ದು, ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿವೆ. 2+1 ಸೂತ್ರದಂತೆ ಟಿಕೆಟ್ ಹಂಚಿಕೆಯಾಗಲಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಿದರೆ ಶಿಗ್ಗಾಂವ್ ಮತ್ತು ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಕುತೂಹಲ ಮೂಡಿಸಿದ ಚನ್ನಪಟ್ಟಣ ಕ್ಷೇತ್ರ
ಸದ್ಯ ಚನ್ನಪಟ್ಟಣ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಯಾರೆಲ್ಲ ಕಣಕ್ಕಿಳಿಯಲಿದ್ದಾರೆ ಎನ್ನುವ ವಿಚಾರವೇ ಕುತೂಹಲ ಮೂಡಿಸಿದೆ. ಚನ್ನಪಟ್ಟಣದಲ್ಲಿ ಮೊದಲಿಂದಲೂ ನೇರಾನೇರ ಪೈಪೋಟಿ ಇರೋದು ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ. ಇಲ್ಲಿ ಕಾಂಗ್ರೆಸ್‌ಗೆ ಯಾವಾಗಲೂ ಮೂರನೇ ಸ್ಥಾನ. 2023, 2018ರಲ್ಲಿ ಇಲ್ಲಿ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಅದಕ್ಕೂ ಮೊದಲು 2013 ಮತ್ತು 2008ರಲ್ಲಿ ಸಿ.ಪಿ.ಯೋಗಿಶ್ವರ್ ಜಯ ದಾಖಲಿಸಿದ್ದರು.
ಮುಸ್ಲಿಂ ಹಾಗೂ ಹಿಂದುಳಿದ ಸಮುದಾಯದ ಮತಗಳು ಇಲ್ಲಿನ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ನಾಯಕತ್ವದ ಕೊರತೆಯಿಂದ ಕಾಂಗ್ರೆಸ್ ಸಂಘಟನೆಯಲ್ಲಿ ಹಿಂದುಳಿದಿದೆ. ಹೀಗಾಗಿ ಈ ಬಾರಿ ಇಲ್ಲಿಂದ ಗೆಲ್ಲಲೇ ಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಸೋತ ಡಿ.ಕೆ.ಸುರೇಶ್ ಅಥವಾ ಡಿ.ಕೆ.ಶಿವಕುಮಾರ್ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಲೋಕಸಭೆಯಲ್ಲಿ ಸೋತ ಸಹೋದರನನ್ನ ಗೆಲ್ಲಿಸಿ ವಿಧಾನಸಭೆಗೆ ತರಲು ಶಿವಕುಮಾರ್ ಯೋಜನೆ ರೂಪಿಸಿದ್ದಾರೆ ಎನ್ನುವ ಮಾತೂ ಕೇಳಿ ಬಂದಿದೆ.
ಇತ್ತ ಮೈತ್ರಿ ಪಕ್ಷಗಳು ಜೆಡಿಎಸ್‌ನಿಂದ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲಿದೆ. ಅಥವಾ ಜೆಡಿಎಸ್ ಚಿಹ್ನೆಯಲ್ಲಿ ಸಿ.ಪಿ.ಯೋಗಿಶ್ವರ್ ಸ್ಪರ್ಧಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಈಗಾಗಲೇ ಎರಡು ಚುನಾವಣೆಗಳನ್ನ ಸೋತಿರುವ ನಿಖಿಲ್ ಅವರು ಉಪಚುನಾವಣೆಯಲ್ಲಿ ಕಣಕ್ಕಿಳಿಯುವುದು ಬೇಡ ಎಂದು ಕೆಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಸ್ವತಃ ಕುಮಾರಸ್ವಾಮಿ ಅವರಿಗೂ ಮಗ ಈಗ ಕಣಕ್ಕಿಳಿಯುವುದರಲ್ಲಿ ಆಸಕ್ತಿ ಇಲ್ಲ ಎನ್ನಲಾಗಿದೆ.
ಇನ್ನು ಜೆಡಿಎಸ್‌ನಿಂದ ಸಿ.ಪಿ.ಯೋಗಿಶ್ವರ್ ಅವರನ್ನು ಕಣಕ್ಕೆ ಇಳಿಸುವ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಎಚ್‌ಡಿಕೆ ಕುಟುಂಬದಿಂದಲೇ ಅಭ್ಯರ್ಥಿ ಆಗಬೇಕು ಎಂದು ಕೆಲವು ಮುಖಂಡರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಅನಿತಾ ಕುಮಾರಸ್ವಾಮಿ ಅವರ ಬಗ್ಗೆ ಚನ್ನಪಟ್ಟಣ ಜನರಿಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಹೀಗಾಗಿ ಎಚ್‌ಡಿಕೆ ಸೂಕ್ತ ಅಭ್ಯರ್ಥಿ ಹುಡುಕುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ. ಒಟ್ಟಿನಲ್ಲಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸೋಲಿಸಲು ದಳಪತಿಗಳ ಕಸರತ್ತು ಈಗಾಗಲೇ ಆರಂಭವಾಗಿದೆ.
ಇತ್ತ ಶಿಗ್ಗಾಂವ್ ಮತ್ತು ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಕಣಕ್ಕಿಳಿಯಲಿದ್ದಾರೆ. ಶಿಗ್ಗಾಂವ್ ಟಿಕೆಟ್ ತನ್ನ ಪುತ್ರ ಭರತ್‌ಗೆ ಕೊಡಿಸಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Channapatna By Election: ಚನ್ನಪಟ್ಟಣದಲ್ಲಿ ಡಿಕೆಶಿ ಎದುರು ಸೈನಿಕ; ಬಿಜೆಪಿಯಿಂದಲಾ, ಜೆಡಿಎಸ್‌ನಿಂದಲಾ?