Site icon Vistara News

BY Vijayendra : ಗ್ಯಾರಂಟಿ ಕೊಡದಿದ್ರೂ ಪರ್ವಾಗಿಲ್ಲ, ಜೀವ ತೆಗೆಯಬೇಡಿ ಅಂದ್ರು ಬಿವೈ ವಿಜಯೇಂದ್ರ

BY Vijayendra

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಕದನಗಳಲ್ಲಿ ಪ್ರಮುಖವಾಗಿರುವುದು ಎರಡು. ಒಂದು ಕಾಂಗ್ರೆಸ್‌ ಸರಕಾರ ಗ್ಯಾರಂಟಿಗಳನ್ನು (Congress Guarantee) ಈಡೇರಿಸಿಲ್ಲ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿರುವುದು, ಇನ್ನೊಂದು ಹೆಚ್ಚುತ್ತಿರುವ ಹಿಂದು ಕಾರ್ಯಕರ್ತರ ಕೊಲೆ. ಈ ನಡುವೆ ಶಿಕಾರಿಪುರ ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಅವರು, ʻʻನೀವು ಗ್ಯಾರಂಟಿಗಳನ್ನು ಈಡೇರಿಸದಿದ್ದರೂ ಪರವಾಗಿಲ್ಲ. ಆದರೆ, ಜೀವ ತೆಗೆಯಬೇಡಿʼ ಎಂದು ವಿನಂತಿಸಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೊಲೆ, ಅಪರಾಧ ಕೃತ್ಯಗಳ (Criminal activities) ಹಿನ್ನೆಲೆಯಲ್ಲಿ ಅವರು ಸರ್ಕಾರಕ್ಕೆ ಚಾಟಿ ಏಟು ನೀಡಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಇನ್ನೊಂದು ದಿನ ಬಂತು, ಇನ್ನೊಂದು ಕೊಲೆಯಾಯಿತು. ದಿನಕ್ಕೊಂದು ಕೊಲೆ ಗ್ಯಾರಂಟಿ ಆಯಿತು. ಕರ್ನಾಟಕದ ನಾಗರಿಕರ ಪರವಾಗಿ ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಒಂದು ವಿನಮ್ರ ಮನವಿ ಇದೆ. ಅದೇನೆಂದರೆ, ನೀವು ಇತರ ಗ್ಯಾರಂಟಿಗಳನ್ನು ಕೊಡುತ್ತೀರೋ ಇಲ್ಲವೋ ಗೊತ್ತಿಲ್ಲ. ಆದರೆ, ಬದುಕಿಗೊಂದು ಗ್ಯಾರಂಟಿ (Guarantee of life) ಕೊಟ್ಟು ಬಿಡಿ ಸಾಕು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ- ಎಂದು ವಿಜಯೇಂದ್ರ ಅವರು ಟ್ವೀಟ್‌ ಮಾಡಿದ್ದಾರೆ.

ರಾಜ್ಯದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆಗಳು ಹೆಚ್ಚುತ್ತಿವೆ ಎಂದು ಬಿಜೆಪಿ ವಿಧಾನಸೌಧದ ಒಳಗೆ ಮತ್ತು ಹೊರಗೆ ಆಪಾದನೆ ಮಾಡುತ್ತಿದೆ. ಅದರಲ್ಲೂ ಚಿಕ್ಕೋಡಿಯ ಹಿರೇಕೋಡಿಯ ಜೈನ ಮುನಿಗಳ ಹತ್ಯೆ ಹಾಗೂ ಮೈಸೂರಿನ ಟಿ. ನರಸೀಪುರದಲ್ಲಿ ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ ನಾಯಕ ಅವರನ್ನು ಕೊಲೆ ಮಾಡಿದ ಬಳಿಕ ಇದು ಟಾರ್ಗೆಟ್ಟೆಡ್‌ ಕಿಲ್ಲಿಂಗ್‌ ಎಂಬ ವಾದ ಜೋರಾಗಿದೆ. ಹಿಂದು ಕಾರ್ಯಕರ್ತರ ಮೇಲೆ ನಡೆದಿರುವ 12 ಘಟನೆಗಳನ್ನು ಅದು ಪಟ್ಟಿ ಮಾಡಿದೆ.

ಇದನ್ನೂ ಓದಿ: CT Ravi : ಕೈ ಸರ್ಕಾರ ಬಂದ ಬಳಿಕ ಕೆಲವು ಮುಸ್ಲಿಮರಿಗೆ ಮದ; 14 ಘಟನೆ ಪಟ್ಟಿ ಮಾಡಿದ ಸಿ.ಟಿ ರವಿ

ಬಿಜೆಪಿ ಕೇವಲ ಹಿಂದುಗಳ ಕೊಲೆ ಅಥವಾ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಲ್ಲದೆ ರೈತರ ಆತ್ಮಹತ್ಯೆಗಳ ಲೆಕ್ಕಾಚಾರವನ್ನೂ ಪಟ್ಟಿ ಮಾಡಿದೆ. ಅದರ ಜತೆಗೆ ರಾಜ್ಯಾದ್ಯಂತ ನಾನಾ ಕಡೆಗಳಲ್ಲಿ ಜನರು ಎಗ್ಗಿಲ್ಲದೆ ಕೊಲೆ ಸುಲಿಗೆಗಳನ್ನು ಮಾಡುವ ಪರಿಸ್ಥಿತಿ ನಿರ್ಮಾಣಗೊಂಡಂತೆ ಕಾಣುತ್ತಿರುವುದನ್ನು ಬಿಜೆಪಿ ನಾಯಕರು ಉಲ್ಲೇಖಿಸುತ್ತಿದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಹಾಡಹಗಲೇ ಇಬ್ಬರು ಉದ್ಯಮಿಗಳನ್ನು ಕೊಲೆ ಮಾಡಿದ ಘಟನೆಯೂ ಕುಸಿಯುತ್ತಿರುವ ಕಾನೂನು ಮತ್ತು ಶಿಸ್ತು ಪರಿಸ್ಥಿತಿಯ ಪ್ರತಿಬಿಂಬ ಎಂದು ಹೇಳುತ್ತಿದೆ.

ಶಿಕಾರಿಪುರ ಶಾಸಕರು, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ಅವರು ಈ ಎಲ್ಲ ವಿಚಾರಗಳನ್ನು ಸಮಗ್ರವಾಗಿ ಅಡಕಗೊಳಿಸಿ ಈ ಟ್ವೀಟ್‌ ಮಾಡಿದ್ದಾರೆ. ಇದನ್ನು ಬಿಜೆಪಿ ಹಿರಿಯ ನಾಯಕರಾದ ಅಮಿತ್‌ ಶಾ, ಅರುಣ್‌ ಸಿಂಗ್‌, ಜೆ.ಪಿ. ನಡ್ಡಾ, ಪ್ರಹ್ಲಾದ್‌ ಜೋಶಿ, ಸಿ.ಟಿ. ರವಿ ರಾಷ್ಟ್ರೀಯ ಬಿಜೆಪಿ ಮತ್ತು ರಾಜ್ಯ ಬಿಜೆಪಿಗೆ ಟ್ಯಾಗ್‌ ಮಾಡಿದ್ದಾರೆ.

Exit mobile version