Site icon Vistara News

Karnataka Election 2023: ಶಿಕಾರಿಪುರದಲ್ಲಿ ಬಿ.ವೈ. ವಿಜಯೇಂದ್ರ ನಾಮಪತ್ರ ಸಲ್ಲಿಕೆ; ಊರ ಹಬ್ಬದಂತೆ ಸಂಭ್ರಮಿಸಿದ ಜನ

BY Vijayendra files nomination in shikaripura and Grand Rath Yatra Karnataka Election 2023 updates

ಶಿಕಾರಿಪುರ (ಶಿವಮೊಗ್ಗ): ರಾಜ್ಯ ರಾಜಕೀಯದಲ್ಲಿ ಯುವ ನಾಯಕ ಎಂದು ಗುರುತಿಸಿಕೊಂಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತಮ್ಮ ಚೊಚ್ಚಲ ವಿಧಾನಸಭಾ ಚುನಾವಣಾ (Karnataka Election 2023) ಸ್ಪರ್ಧೆಗೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಇಷ್ಟು ವರ್ಷ ತಂದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ಸ್ಪರ್ಧೆ ಮಾಡುತ್ತಿದ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗ ಪುತ್ರ ವಿಜಯೇಂದ್ರ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕ್ಷೇತ್ರದಲ್ಲಿ ತಮ್ಮದೇ ಆದ ರಣತಂತ್ರವನ್ನು ರೂಪಿಸುತ್ತಾ ಬಂದಿದ್ದಾರೆ. ಬುಧವಾರ (ಏಪ್ರಿಲ್‌ 19) ಭರ್ಜರಿ ಬಲಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದರು.

ಬಿ.ಎಸ್.‌ ಯಡಿಯೂರಪ್ಪ ನೇತೃತ್ವದಲ್ಲಿ ರಥ ಸಂಚಾರ

ಮುಂಜಾನೆಯಿಂದಲೇ ತಯಾರಿ ಮಾಡಿಕೊಂಡಿದ್ದ ಬಿ.ಎಸ್.‌ ಯಡಿಯೂರಪ್ಪ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ವಿಜಯೇಂದ್ರ ಅವರು ಮನೆ ದೇವರಿಗೆ ಪತ್ನಿ ಪ್ರೇಮಾ ಜತೆ ಪೂಜೆ ಸಲ್ಲಿಸಿದರು. ದೇವರ ಮನೆಯಲ್ಲಿ ಬಿಜೆಪಿ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಬಳಿಕ ಕುಟುಂಬದ ಹೆಣ್ಣು ಮಕ್ಕಳೆಲ್ಲ ಸೇರಿ ವಿಜಯೇಂದ್ರ ಅವರಿಗೆ ಆರತಿ ಎತ್ತಿ ಶುಭ ಕೋರಿದರು.ನಾಮಪತ್ರ ಸಲ್ಲಿಕೆಗೆ ಮನೆಯಿಂದ ಹೊರಡುವ ಮೊದಲು ತಮ್ಮ ತಂದೆ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.

ತಂದೆ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂದ ವಿಜಯೇಂದ್ರ ಪತ್ನಿ ಪ್ರೇಮಾ ಜತೆಗಿದ್ದರು.

ಅಲ್ಲಿಂದ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ರಾಘವೇಂದ್ರ ಮಠಕ್ಕೆ ಆಗಮಿಸಿದರು. ವಿಜಯೇಂದ್ರ ಅವರಿಗೆ ಪತ್ನಿ ಪ್ರೇಮಾ, ತಂದೆ ಬಿ.ಎಸ್. ಯಡಿಯೂರಪ್ಪ, ಸಹೋದರ ಬಿ.ವೈ. ರಾಘವೇಂದ್ರ, ನಟಿ ಶೃತಿ, ಶಾಸಕ ಪಿ ರಾಜೀವ್, ಸಚಿವ ಎಂಟಿಬಿ ನಾಗರಾಜ್, ಕೇಂದ್ರ ಸಚಿವ ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಎಸ್. ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮೊದಲಾದವರು ಭಾಗಿಯಾಗಿದ್ದರು.ಕಳೆದ ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ವಿಜಯೇಂದ್ರ. ಬುಧವಾರ ಮತ್ತೊಮ್ಮೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: Karnataka Elections : ಸಿದ್ದು ಮೊಮ್ಮಗನ ನೋಡಲು ಮನೆಗೆ ಜನರ ಲಗ್ಗೆ; ಮುಂದೆ ರಾಜಕೀಯ ಬರ್ತೀನಿ ಅಂದ ಧವನ್‌ ರಾಕೇಶ್‌!

ಮನೆ ದೇವರಿಗೆ ಪೂಜೆ ಸಲ್ಲಿಸಿದ ವಿಜಯೇಂದ್ರ ದಂಪತಿ

ನಾಮಪತ್ರ ಸಲ್ಲಿಸಿದ ವಿಜಯೇಂದ್ರ

ಹುಚ್ಚರಾಯಸ್ವಾಮಿ ದೇವಸ್ಥಾನ ಹಾಗೂ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ್ದರಿಂದ ನಾಮಪತ್ರ ಸಲ್ಲಿಕೆಯ ಸಮಯ ಮೀರಲು ಬಂದಿತ್ತು. ಈ ಹಿನ್ನೆಲೆಯಲ್ಲಿ ರಥಯಾತ್ರೆ ಮೂಲಕ ಚುನಾವಣಾ ಅಧಿಕಾರಿ ಕಚೇರಿಗೆ ಆಗಮಿಸಬೇಕಿದ್ದ ವಿಜಯೇಂದ್ರ ಅವರು ಅಲ್ಲಿಂದ ನೇರವಾಗಿ ಕಾರಿನ ಮೂಲಕ ಚುನಾವಣಾ ಅಧಿಕಾರಿ ಕಚೇರಿಗೆ ಧಾವಿಸಿದರು. ಅಲ್ಲಿ ನಿಗದಿತ ಸಮಯಕ್ಕೆ ನಾಮಪತ್ರ ಸಲ್ಲಿಸಿದರು.

ಚುನಾವಣಾ ಅಧಿಕಾರಿ ಕಚೇರಿಗೆ ಧಾವಿಸಿದ ವಿಜಯೇಂದ್ರ

ಭರ್ಜರಿ ಪ್ರಚಾರ – ರಥ ಸಂಚಾರ

ವಿಜಯೇಂದ್ರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಶಿಕಾರಿಪುರದಲ್ಲಿ ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಇದಕ್ಕಾಗಿ ವಿಶೇಷ ರಥವನ್ನು ತಯಾರಿಸಲಾಗಿದ್ದು, ರಥಕ್ಕೆ ಸಿಂಗಾರ ಮಾಡಲಾಗಿತ್ತು. ಮಾರ್ಗದುದ್ದಕ್ಕೂ ಮಹಿಳೆಯರಿಂದ ರಂಗೋಲಿ ಮೂಲಕ ಸ್ವಾಗತವನ್ನು ಬರೆಯಲಾಗಿತ್ತು.

ಯಡಿಯೂರಪ್ಪ ನೇತೃತ್ವದಲ್ಲಿ ಮೆರವಣಿಗೆ

ಪುತ್ರ ವಿಜಯೇಂದ್ರ ಅವರನ್ನು ನಾಮಪತ್ರ ಸಲ್ಲಿಕೆಗೆ ಕಳುಹಿಸಿದ ಯಡಿಯೂರಪ್ಪ ಅವರು ಇನ್ನಿತರ ಮುಖಂಡರ ಜತೆಗೆ ಶಿಕಾರಿಪುರದ ಪ್ರಮುಖ ಬೀದಿಗಳಲ್ಲಿ ರಥದ ಮೂಲಕ ಮೆರವಣಿಗೆ ಪ್ರಾರಂಭಿಸಿದರು. ಈ ವೇಳೆ ಎಲ್ಲ ಕಡೆ ಬಿಜೆಪಿಯ ಕೇಸರಿ ಬಾವುಟಗಳು ರಾರಾಜಿಸಿದವು.

ನಮ್ಮ ಶಕ್ತಿ ಕಾರ್ಯಕರ್ತರ ಪಡೆ- ವಿಜಯೇಂದ್ರ

ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ವಿಜಯೇಂದ್ರ, ಹುಚ್ಚರಾಯಸ್ವಾಮಿಗೆ ಪೂಜೆ ಸಲ್ಲಿಸಿ, ರಾಯರ ಮಠದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದ್ದೇನೆ. ಮೆರವಣಿಗೆ ನಂತರ ಬೃಹತ್ ಬಹಿರಂಗ ಸಮಾವೇಶ ನಡೆಯಲಿದೆ. ಬಹಿರಂಗ ಸಮಾವೇಶದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ,‌ ಕುಡಚಿ ಶಾಸಕ ರಾಜೀವ್ ಸೇರಿದಂತೆ ಹಲವರು ಭಾಗವಹಿಸುತ್ತಿದ್ದಾರೆ. ನಮ್ಮ ಶಕ್ತಿ ಕಾರ್ಯಕರ್ತರ ಪಡೆ. ಕಾರ್ಯಕರ್ತರು ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರ ಪಡೆ ದೊಡ್ಡ ಶಕ್ತಿ ತಂದುಕೊಟ್ಟಿದೆ ಎಂದು ಹೇಳಿದರು.

ಯುವಕರ ಹೊಸ ಪಡೆ ನಮ್ಮೊಂದಿಗೆ ಸೇರಿಕೊಂಡಿದೆ. ಅವರೆಲ್ಲರೂ ಮೋದಿ ಅಭಿವೃದ್ಧಿ ಮೆಚ್ಚಿ ನಮ್ಮ ಜತೆ ಸೇರಿದ್ದಾರೆ. ಕ್ಷೇತ್ರದಲ್ಲಿ ಮತದಾರರು ಯಡಿಯೂರಪ್ಪ ಅವರಿಗೆ, ಸಂಸದ ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದಾರೆ. ನನಗೂ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಶಿಕಾರಿಪುರದಲ್ಲಿ‌ ಪ್ರಚಾರ ಮಾಡುವ ಜತೆಗೆ ರಾಜ್ಯದಲ್ಲಿ ಬೇರೆ ಬೇರೆ ಕಡೆ ಒಂದು ವಾರ ಪ್ರಚಾರ ಮಾಡುತ್ತೇನೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ.‌ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Karnataka Elections : ಐದು ವರ್ಷ ಪಾಲಿಟಿಕ್ಸ್‌ ಮಾಡಿ ಮತ್ತೆ ಪೊಲೀಸ್‌ ಇಲಾಖೆ ಸೇರಿಕೊಂಡ ಅಧಿಕಾರಿ! ಅದು ಹೇಗೆ ಸಾಧ್ಯ?

ಅಂಬಾಸಿಡರ್‌ ಕಾರು ಮತ್ತು ಯಡಿಯೂರಪ್ಪ ಪ್ರೀತಿ

ಯಡಿಯೂರಪ್ಪ ಅವರು ಅಂಬಾಸಿಡರ್ ಕಾರಿನಲ್ಲಿ ಪ್ರಯಾಣಿಸಿದ ವಿಚಾರದ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಅವರಿಗೆ ಅಂಬಾಸಿಡರ್ ಕಾರಿನ ಮೇಲೆ ಬಹಳ ಪ್ರೀತಿ ಇದೆ. ಈ ಹಿಂದೆ ಈ ಕಾರನ್ನು ಅವರು ಬಳಸುತ್ತಿದ್ದರು. ಅಂಬಾಸಿಡರ್ ಕಾರು ನಂಬರ್ ಸಿಕೆಆರ್ 454 ಆಗಿದೆ. ಆ ಕಾರಿನ ನಂಬರ್ ಮೇಲೆ ಅವರಿಗೆ ಬಹಳ ಪ್ರೀತಿ ಇದೆ ಎಂದು ಹೇಳಿದರು.

Exit mobile version