Site icon Vistara News

BY Vijayendra: ಚತುರ ಸಂಘಟಕ, ನಿಪುಣ ರಾಜಕೀಯ ತಂತ್ರಗಾರ ಬಿ ವೈ ವಿಜಯೇಂದ್ರ

BY Vijayendra is tasted political strategist and well organizer

ಲೋಕಸಭೆ ಚುನಾವಣೆಗೆ (Lok Sabha Election) ಕೆಲವೇ ತಿಂಗಳು ಬಾಕಿ ಇರುವಾಗಲೇ ಭಾರತೀಯ ಜನತಾ ಪಾರ್ಟಿ(BJP)ಯು, ಕರ್ನಾಟಕದ ರಾಜ್ಯಾಧ್ಯಕ್ಷ (BJP State President) ಸ್ಥಾನಕ್ಕೆ ಯುವ ನಾಯಕ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ (BY Vijayendra) ಅವರನ್ನು ತಂದುಕೂರಿಸಿದೆ. ಆ ಮೂಲಕ ಚುನಾವಣೆಗೆ ಭರ್ಜರಿ ದಾಳ ಉರುಳಿಸಿದೆ. ರಾಜಕೀಯ ಕುಟುಂಬದ ಹಿನ್ನೆಲೆ ಇದ್ದರೂ ವಿಜಯೇಂದ್ರ ಅವರು ಪಕ್ಷದಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಏರುವ ಮೂಲಕ, ಉನ್ನತ ಹುದ್ದೆಯವರೆಗೆ ತಲುಪಿದ್ದಾರೆ. ಪಕ್ಷದ ಉಪಾಧ್ಯಕ್ಷರಾಗಿ, ಹಲವು ಬೈ ಎಲೆಕ್ಷನ್ ಮತ್ತು ಚುನಾವಣೆಗಳು ಸೇರಿದಂತೆ ಮಹತ್ವದ ಟಾಸ್ಕ್ ನಿರ್ವಹಿಸಿ ಹೈಕಮಾಂಡ್‌ನಿಂದಲೂ ಭೇಷ್ ಎನಿಸಿಕೊಂಡಿದ್ದಾರೆ. ಅಲ್ಲದೇ, ಯುಡಿಯೂರಪ್ಪ ನಂತರ, ತಾನೊಬ್ಬ ಅವರಿಗೆ ಸಮರ್ಥ ಉತ್ತರಾಧಿಕಾರಿ ಎಂಬುದನ್ನು ನಿರೂಪಿಸಿದ್ದಾರೆ. ಅದರ ಪರಿಣಾಮವೇ ಈಗ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ.

ದೀಪಾವಳಿಗೆ ಮುನ್ನವೇ ಬಿಜೆಪಿ ಹೈಕಮಾಂಡ್‌ ರಾಜ್ಯ ಬಿಜೆಪಿ ಮತ್ತು ಬಿಎಸ್‌ವೈ ಕುಟುಂಬಕ್ಕೆ ವಿಶೇಷ ಕೊಡುಗೆಯನ್ನು ನೀಡಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಇದರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರು ಯಾರಾಗುತ್ತಾರೆ ಎಂಬ ಬಹುಕಾಲದ ಕಾತರಕ್ಕೆ ತೆರೆ ಬಿದ್ದಿದೆ. ನಳಿನ್‌ ಕುಮಾರ್‌ ಕಟೀಲ್‌ ಅವರು ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷರಾಗಿದ್ದು, ಅವರ ಅಧಿಕಾರಾವಧಿ ಒಂದು ವರ್ಷದ ಹಿಂದೆಯೇ ಮುಕ್ತಾಯವಾಗಿದೆ.

ಶಿಕಾರಿಪುರದಿಂದ ಮೊದಲ ಬಾರಿಗೆ ಆಯ್ಕೆ

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ಕ್ಷೇತ್ರಗಳಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರವೂ ಒಂದಾಗಿತ್ತು. ಕಾರಣ, ನಾಲ್ಕೂವರೆ ದಶಕಗಳ ಕಾಲ ಶಿಕಾರಿಪುರ ಕ್ಷೇತ್ರವನ್ನಾಳಿದ ಮಾಜಿ ಸಿಎಂ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಪುತ್ರ ಬಿ.ವೈ ವಿಜಯೇಂದ್ರ ಅವರು ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರಿಂದ ಸಾಕಷ್ಟು ಕುತೂಹಲ ಮೂಡಿಸಿತ್ತು. ಬಿ.ವೈ. ವಿಜಯೇಂದ್ರ ಅವರು ಈ ಕ್ಷೇತ್ರದಿಂದ ಜಯ ಸಾಧಿಸಿದ್ದರು. ಈ ಮೂಲಕ ಬಿಜೆಪಿ ಪಾರುಪತ್ಯ ಈ ಕ್ಷೇತ್ರದಲ್ಲಿ ಮುಂದುವರಿದಿತ್ತು. ಬಿ.ವೈ. ವಿಜಯೇಂದ್ರ ಈ ಬಾರಿ ಸ್ವತಃ ಅಖಾಡಕ್ಕೆ ಇಳಿದಿದ್ದರು. ಅಲ್ಲದೆ, ಭರ್ಜರಿ ಪ್ರಚಾರವನ್ನೂ ಮಾಡಿದ್ದರು.

ಬಿ ವೈ ವಿಜಯೇಂದ್ರ ಸಾಗಿ ಬಂದ ಹಾದಿ

-1973 ಆಗಸ್ಟ್ 6ರಂದು ವಿಜಯೇಂದ್ರ ಜನಿಸಿದರು. ಅವರಿಗೆ ಈಗ 50 ವರ್ಷ.
-ತಂದೆ ಬಿ ಎಸ್ ಯಡಿಯೂರಪ್ಪ. ಮಾಜಿ ಸಿಎಂ. ಬಿಜೆಪಿಯ ಅಗ್ರಗಣ್ಯ ನಾಯಕ.
-ಸಹೋದರ ಬಿ ವೈ ರಾಘವೇಂದ್ರ ಶಿವಮೊಗ್ಗ ಕ್ಷೇತ್ರದ ಸಂಸದರಾಗಿದ್ದಾರೆ.
-ತಂದೆ 1983ರಿಂದಲೂ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಿಂದಲೇ 2023ರ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ
-ಶಾಸಕರಾಗುವ ಮುಂಚೆ ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
-ಹಲವು ಬೈ ಎಲೆಕ್ಷನ್ ಮತ್ತು ಚುನಾವಣೆಗಳಲ್ಲಿ ಪಕ್ಷವು ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
-ವಿಜೇಯಂದ್ರ ಅವರು ಕಾನೂನು ಪದವಿ ಓದಿದ್ದಾರೆ. ಒಂದಿಷ್ಟು ದಿನಗಳ ಕಾಲ ವಕೀಲಿಕಿ ಕೂಡ ಮಾಡಿದ್ದಾರೆ.
-ಪಕ್ಷದ ಉಪಾಧ್ಯಕ್ಷರಾಗುವ ಮುಂಚೆ ವಿಜಯೇಂದ್ರ ಅವರು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.
-ಕಾಲೇಜು ಅಧ್ಯಯನ ವೇಳೆ ವಿಜಯೇಂದ್ರ ಅವರು ಎಬಿವಿಪಿ ಕಾರ್ಯಕರ್ತರಾಗಿಯೂ ಕೆಲಸ ಮಾಡಿದ್ದಾರೆ.
-ಕಳೆದ ವಿಧಾನಸಭೆ ಚುನಾವಣೆ ವೇಳೆ ವಿಜಯೇಂದ್ರ ಅವರು 25 ಸದಸ್ಯರ ಚುನಾವಣಾ ಪ್ರಚಾರ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
-2020ರಲ್ಲಿ ಕೆ ಆರ್ ಪೇಟೆ ಮತ್ತು ಶಿರಾ ಉಪ ಚುನಾವಣೆಯ ಉಸ್ತುವಾರಿಯನ್ನು ಹೊತ್ತಿದ್ದರು. ಅಲ್ಲದೇ, ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದರು.
-ಈ ಹಿಂದಿನ ಅವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವಲ್ಲಿ ವಿಜಯೇಂದ್ರ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.
-ಉತ್ತಮ ಸಂಘಟಕ, ತಂತ್ರಗಾರ ಎಂಬ ಅಭಿದಾನಗಳು ವಿಜಯೇಂದ್ರ ಅವರಿಗೆ ಸಂದಿವೆ.
-ರಾಜ್ಯದ ಪ್ರಮುಖ ಲಿಂಗಾಯತ ಸಮುದಾಯಕ್ಕೆ ಸೇರಿರುವ ವಿಜಯೇಂದ್ರ ಅವರ ಮೇಲೆ ಈ ಜವಾಬ್ದಾರಿಗಳು ಹೆಚ್ಚಾಗಿವೆ.

ಈ ಸುದ್ದಿಯನ್ನೂ ಓದಿ: BY Vijayendra: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕ; ಯುವ ನಾಯಕನಿಗೆ ಪಟ್ಟ

Exit mobile version