ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಟಿ. ರವಿ (CT Ravi) ಅವರು ಬಿಜೆಪಿ ಟಿಕೆಟ್ ಬಗ್ಗೆ ಹೇಳಿರುವುದು ಸರಿ ಇದೆ. ವಿಜಯೇಂದ್ರ ಆಗಲಿ ಅಥವಾ ಬಿಜೆಪಿಯ ಯಾವುದೇ ಶಾಸಕನಿರಲಿ, ಅವರಿಗೆ ಟಿಕೆಟ್ ಕೊಡಬೇಕೆಂದರೆ ಚುನಾವಣಾ ಸಮಿತಿ ತೀರ್ಮಾನ ಮಾಡುತ್ತದೆಯೇ ಹೊರತು ನಾವ್ಯಾರೂ ತೀರ್ಮಾನ ಮಾಡುವುದಕ್ಕೆ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yadiyurappa) ಹೇಳಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರಿಗೆ ಟಿಕೆಟ್ ಕೊಡುವ ವಿಚಾರವು ಅವರ ಮನೆಯಲ್ಲಿ ನಿರ್ಧಾರವಾಗುವಂಥದ್ದಲ್ಲ ಎಂಬ ಸಿ.ಟಿ. ರವಿ ಹೇಳಿಕೆಗೆ ಬಿಎಸ್‌ವೈ ಈ ರೀತಿ ಹೇಳಿದ್ದಾರೆ.
ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ಚುನಾವಣಾ ಸಮಿತಿಯೇ ನಿರ್ಧಾರ ಮಾಡುತ್ತದೆ. ನಾವು ಸಲಹೆ ಕೊಡಬಹುದು ಅಷ್ಟೇ. ಅಂತಿಮವಾಗಿ ಸಮಿತಿ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಸಿ.ಟಿ. ರವಿ ಹೇಳಿದ್ದೇನು?
ಬಿ.ವೈ. ವಿಜಯೇಂದ್ರ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಗಲಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿ.ಟಿ. ರವಿ, ನಮ್ಮ ಪಕ್ಷದಲ್ಲಿ ಟಿಕೆಟ್ ನಿರ್ಣಯವು ಅಡುಗೆ ಮನೆಯಲ್ಲಿ ಆಗುವುದಿಲ್ಲ. ಕೇವಲ ಮಕ್ಕಳು ಎನ್ನುವ ಕಾರಣಕ್ಕೆ ಟಿಕೆಟ್ ಸಿಗಲಾರದು. ಅವರ ಮನೆಯಲ್ಲಿಯೂ ತೀರ್ಮಾನವಾಗುಂಥದ್ದಲ್ಲ. ಈಗ ವಿಜಯೇಂದ್ರ ಅವರಿಗೇ ಟಿಕೆಟ್ ಕೊಡಬೇಕಾದರೂ ಪಾರ್ಲಿಮೆಂಟರಿ ಬೋರ್ಡ್ ನಿರ್ಧಾರವನ್ನು ಮಾಡುತ್ತದೆ. ಈ ಬೋರ್ಡ್ ಮೊದಲು ಗೆಲ್ಲುವಂತಹ ಸಾಮರ್ಥ್ಯವನ್ನು ನೋಡುತ್ತದೆ. ಜತೆಗೆ ಸರ್ವೇ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಆ ಸರ್ವೇ ಸಹ ಅವರವರ ಫ್ಯಾಮಿಲಿಯಿಂದ ನಡೆಯುವುದಿಲ್ಲ. ಇಡೀ ಪಾರ್ಟಿಯನ್ನೇ ಒಪ್ಪಿಸಿಬಿಡುವುದು, ಇಡೀ ಸರ್ಕಾರವನ್ನೇ ಒಪ್ಪಿಸುವ ಕೆಲಸ ನಮ್ಮ ಪಕ್ಷದಲ್ಲಿ ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: EPF Interest Credit : 98% ಕಂಪನಿಗಳ ಖಾತೆಗೆ ಇತ್ತೀಚಿನ ಪಿಎಫ್ ಬಡ್ಡಿ ಜಮೆ
ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ
ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಅಪೂರ್ಣವಾಗಿಲ್ಲ. ಕಾಂಗ್ರೆಸ್ ಆರೋಪದಲ್ಲಿ ಸತ್ಯಾಂಶ ಇಲ್ಲ. ಯಾವುದೋ ಎರಡು ಸಣ್ಣಪುಟ್ಟ ಬ್ರಿಡ್ಜ್ ಕೆಲಸ ನಡೆಯುತ್ತಿದೆ. ಅದು ಬಿಟ್ಟು ಯಾವುದೇ ಸಮಸ್ಯೆ ಇಲ್ಲ. ಈಗಾಗಲೇ ವಾಹನಗಳ ಓಡಾಟ ಮಾಡೋಕೆ ಶುರುವಾಗಿದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು. ಕಾಮಗಾರಿ ಅಪೂರ್ಣಗೊಂಡಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಉದ್ಘಾಟನೆಗಾಗಿ ಕರೆಸಲಾಗಿದೆ ಎಂಬ ಆರೋಪಕ್ಕೆ ಬಿಎಸ್‌ವೈ ಈ ಪ್ರತಿಕ್ರಿಯೆ ನೀಡಿದರು.