ಹಾವೇರಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಪ್ರಕರಣದಲ್ಲಿ (Sedition Case) ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರಿ ಮೊಹಮ್ಮದ್ ಶಫಿ ನಾಶಿಪುಡಿ ಸೇರಿ ಮೂವರ ಬಂಧನವಾಗಿದೆ. ಹೀಗಾಗಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿರುವ ನಾಶಿಪುಡಿ ಮನೆಯಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರು ಕಣ್ಣೀರು ಹಾಕುತ್ತಿರುವುದು ಕಂಡುಬಂದಿದೆ.
ಮನೆಯಿಂದ ಹೊರಗೆ ಬಾರದ ಕುಟುಂಬ ಸದಸ್ಯರು, ಗೇಟ್‌ಗೆ ಬೀಗ ಹಾಕಿಕೊಂಡು ಮನೆಯ ಒಳಗಡೆ ಇರುವುದು ಕಂಡುಬಂದಿದ್ದು, ಮನೆಯ ಲೈಟ್ ಆಫ್ ಮಾಡಿಕೊಂಡು ಕುಟುಂಬದಲ್ಲಿ ಸದಸ್ಯರು ಕತ್ತಲೆಯಲ್ಲಿ ಕುಳಿತಿದ್ದಾರೆ. ಸಹೋದರ ಬಂಧನ ವಿಚಾರ ತಿಳಿದು ನಾಶಿಪುಡಿ ಸಹೋದರಿ ಕಣ್ಣೀರು ಹಾಕಿದ್ದಾರೆ.
ಏನಿದು ಘಟನೆ?
ಫೆ. 27ರಂದು ರಾಜ್ಯಸಭಾ ಚುನಾವಣೆಯ (Rajya Sabha Election) ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಸಂತಸ ಮುಗಿಲು ಮುಟ್ಟಿತ್ತು. ಗೆಲುವು ಸಾಧಿಸಿದ ಕಾಂಗ್ರೆಸ್‌ನ ಮೂವರು ಸದಸ್ಯರ ಪೈಕಿ ನಾಸಿರ್ ಹುಸೇನ್ ಬೆಂಬಲಿಗರು ಶತ್ರು ರಾಷ್ಟ್ರ ಪಾಕಿಸ್ತಾನ ಪರ ಜೈಕಾರ ಕೂಗಿ ಉದ್ಧಟತನ ಮೆರೆದಿದ್ದರು. ಭಾರತದ ಸೌರ್ವಭೌಮತ್ವವನ್ನು ಧಿಕ್ಕರಿಸಿ ಪಾಕ್ ಪರ ಘೋಷಣೆ ಕೂಗಿರುವ ಬಗ್ಗೆ ರಾಜ್ಯ ಸೇರಿ ದೇಶಾದ್ಯಂತ ಭಾರಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇಂಥದ್ದೊಂದು ಪಾಪಿ ಕೃತ್ಯ, ಅಕ್ಷಮ್ಯ ಅಪರಾಧ ವಿಧಾನಸೌಧದೊಳಗೆ ನಡೆದಿತ್ತು. ಇದಕ್ಕೆ ಬಿಜೆಪಿ ಸೇರಿದಂತೆ ನಾಗರಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದಲ್ಲದೆ, ಆರೋಪಿಗಳ ಬಂಧನಕ್ಕೆ ಒತ್ತಾಯಗಳು ಕೇಳಿಬಂದಿದ್ದವು.
ಇದನ್ನೂ ಓದಿ | FSL Report: ಬಿಜೆಪಿ ಯುವ ಮೋರ್ಚಾದಿಂದ ತಿರಂಗಾ ಯಾತ್ರೆ; ಧ್ವಜ ಕಸಿದ ಪೊಲೀಸರ ಕ್ರಮಕ್ಕೆ ಖಂಡನೆ
ಘಟನೆ ನಡೆದ ವೇಳೆ ವಿಧಾನ ಸೌಧದಲ್ಲಿ ಬ್ಯಾಡಗಿಯ ಮೆಣಸಿನಕಾಯಿ ವರ್ತಕ ಮೊಹಮ್ಮದ್ ಶಫಿ ನಾಶಿಪುಡಿ ಇದ್ದರು. ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ ಪಾಸ್ ಪಡೆದು ವಿಧಾನ ಸೌಧದ ಒಳಗೆ ಹೋಗಿದ್ದರು. ನಾಸಿರ್ ಹುಸೇನ್ ಬೆಂಬಲಿಗರ ವಿಜಯೋತ್ಸವ ವೇಳೆ ಶಫಿ ನಾಶಿಪುಡಿ ವಿರುದ್ಧ ಪಾಕ್ ಪರ ಘೋಷಣೆ ಕೂಗಿದ ಆರೋಪ ಕೇಳಿಬಂದಿತ್ತು. ಹೀಗಾಗಿ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮುಖಂಡರು, ಬ್ಯಾಡಗಿ ಠಾಣೆಗೆ ದೂರು ನೀಡಿದ್ದರು. ಇದಕ್ಕೂ ಮುನ್ನ ಘಟನೆ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿತ್ತು.
ವಿಧಾನಸೌಧದೊಳಗೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ದೃಢ; ಮೂವರು ಅರೆಸ್ಟ್
ಬೆಂಗಳೂರು: ನಾಸಿರ್ ಹುಸೇನ್ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ವೇಳೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ (Pakistan Zindabad slogans) ಘೋಷಣೆ ಕೂಗಿದ್ದ ದೇಶದ್ರೋಹದ ಪ್ರಕರಣಕ್ಕೆ (Sedition Case) ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಎಫ್‌ಎಸ್‌ಎಲ್ ವರದಿಯಲ್ಲಿ ದೃಢವಾದ ಬಳಿಕ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ವಿಧಾನಸೌಧ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದು, ಅಶೋಕನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಇಲ್ತಾಜ್, ಮುನಾವರ್ ಹಾಗೂ ಮೊಹಮದ್ ಶಫಿ ನಾಶಿ ಪುಡಿ ಬಂಧಿತರು ಎನ್ನಲಾಗಿದೆ. ದೆಹಲಿ ಮೂಲದ ಇಲ್ತಾಜ್, ಆರ್.ಟಿ. ನಗರದ ಮುನಾವರ್ ಹಾಗೂ ಮೊಹಮ್ಮದ್ ಶಫಿ ನಾಶಿ ಪುಡಿ ಬ್ಯಾಡಗಿಯವನಾಗಿದ್ದಾನೆ.
ಆರೋಪವನ್ನು ತಳ್ಳಿಹಾಕಿದ್ದ ಕಾಂಗ್ರೆಸ್
ಆದರೆ, ಈ ಆರೋಪವನ್ನು ಕಾಂಗ್ರೆಸ್ ತಳ್ಳಿ ಹಾಕಿದ್ದು, ಪೊಲೀಸರು ವಿಡಿಯೊವನ್ನು ನೋಡಿದ್ದು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಲೇ ಇಲ್ಲ ಎಂದು ಹೇಳಿತ್ತು. ಈ ಬಗ್ಗೆ ಸ್ವತಃ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದರು. ಸದನದಲ್ಲೂ ಪ್ರಸ್ತಾಪವಾದಾಗ ಉತ್ತರ ನೀಡಿದ್ದ ಪರಮೇಶ್ವರ್, ವಿಡಿಯೊವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. ತಪ್ಪು ನಡೆದಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ಎಫ್‌ಎಸ್‌ಎಲ್ ವರದಿ ಬಗ್ಗೆ ಗಮನ ಸೆಳೆದಿದ್ದ ವಿಸ್ತಾರ ನ್ಯೂಸ್
“ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ನಿಜ” ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ (FSL Expert) ಡಾ.ಬಿ.ಎನ್.ಫಣೀಂದ್ರ (Dr B N Phaneendar) ಅವರು ಮಾ. 1ರಂದು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದರು. ಎಫ್‌ಎಸ್‌ಎಲ್ ವರದಿಯಲ್ಲೂ (FSL Report) ಇದನ್ನೇ ಉಲ್ಲೇಖಿಸಿರುವುದಾಗಿ ಫಣೀಂದ್ರ ತಿಳಿಸಿದ್ದಾರೆ. ಅಲ್ಲದೆ, ಬಿಜೆಪಿ ಸಹ ಇದೇ ವರದಿಯನ್ನು ಉಲ್ಲೇಖಿಸಿ, ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಡಿಜಿಪಿ ಅಲೋಕ್ ಮೋಹನ್‌ಗೆ ಮನವಿಯನ್ನೂ ಸಲ್ಲಿಸಿತ್ತು. ಈಗ FSL ವರದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅನ್ನು ಕೂಗಿರುವುದು ದೃಢಪಟ್ಟಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.