Site icon Vistara News

Byndoor Election Results: ಬೈಂದೂರಿನಲ್ಲಿ ಬರಿಗಾಲ ಕಾರ್ಯಕರ್ತ ಗುರುರಾಜ ಗಂಟಿಹೊಳೆ ಭರ್ಜರಿ ಗೆಲುವು

Byndoor karnataka Election results winner Gururaj Gantihole

ಬೈಂದೂರು: ಉದ್ಯಮಿಗಳ ಜಿದ್ದಾಜಿದ್ದಿನ ಕಣವಾಗಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ (Byndoor Election Results) ಹೊರಬಿದ್ದಿದ್ದು, ಬಿಜೆಪಿ ಪಕ್ಷದಿಂದ ಬರಿಗಾಲ ಸೇವಕ ಖ್ಯಾತಿಯ ಗುರುರಾಜ ಗಂಟಿಹೊಳೆ ಅವರು ಜಯಭೇರಿ ಬಾರಿಸಿದ್ದಾರೆ.

ಭರ್ಜರಿ ಜಯ ಕಂಡ ಗಂಟಿಹೊಳೆ

ಬಿಜೆಪಿಯಲ್ಲಿ ಈ ಬಾರಿ ಹಾಲಿ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ನೀಡದೆ ಸಾಮಾನ್ಯ ಕಾರ್ಯಕರ್ತರಾದ, ಬರಿಗಾಲ ಸೇವಕ, ಪದವೀಧರ ಗುರುರಾಜ ಶೆಟ್ಟಿ ಗಂಟಿಹೊಳೆ ಅವರಿಗೆ ಟಿಕೆಟ್ ನೀಡಿದ್ದು ಪ್ಲಸ್‌ ಆಗಿದೆ. ಅಲ್ಲದೆ, ಸಂಘದ ಶಾಖೆಯಲ್ಲಿ ಪಳಗಿದ ಗುರುರಾಜ ಗಂಟಿಹೊಳೆ ಅವರಿಗೆ ಕ್ಷೇತ್ರದಲ್ಲಿ ದೊಡ್ಡ ಯುವ ಅಭಿಮಾನಿ ಬಳಗವಿದೆ. ಜತೆಗೆ ಬಂಟ ಸಮುದಾಯಕ್ಕೆ ಸೇರಿದ ಅವರಿಗೆ ಬಂಟ ಸಮುದಾಯದ ಮತಗಳು ಕೈಹಿಡಿದಿವೆ. ಇನ್ನು ಸರಳ ಜೀವನಕ್ಕೆ ಹೆಸರುವಾಸಿಯಾಗಿರುವ ಗುರುರಾಜ ಗಂಟಿಹೊಳೆಯವರ ನಡೆಯು ಗ್ರಾಮೀಣ ಜನರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಂಥ ಆದರ್ಶ, ಪ್ರಾಮಾಣಿಕ ವ್ಯಕ್ತಿ ಗೆಲ್ಲಬೇಕು ಎಂಬ ಮಾತು ಕ್ಷೇತ್ರಾದ್ಯಂತ ಕೇಳಿ ಬಂದಿದ್ದರಿಂದ ಗೆಲುವು ಸುಲಭವಾಗಿದೆ.

ಸೆಣಸಿ ಸೋತ ಗೋಪಾಲ ಪೂಜಾರಿ

ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಈ ಬಾರಿ ಸ್ಪರ್ಧೆ ಮಾಡಿದ್ದ ಅನುಭವಿ, ಮಾಜಿ ಶಾಸಕ ಗೋಪಾಲ ಪೂಜಾರಿ ಅವರು ಭಾರೀ ಪೈಪೋಟಿಯನ್ನು ನೀಡಿದರಾದರೂ ಗೆಲುವು ಮಾತ್ರ ಸಾಧ್ಯವಾಗಲಿಲ್ಲ. ಇವರು ಕ್ಷೇತ್ರದ ಹಿಂದುಳಿದ ಸಮುದಾಯಗಳಲ್ಲಿ ಒಂದಾದ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಈ ಮತಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದರು. ಆದರೆ, ಬಿಜೆಪಿ ಪರವಾದ ಅಲೆ ಇವರ ಸೋಲಿಗೆ ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ಚುನಾವಣೆ ಫಲಿತಾಂಶ
ಸುಕುಮಾರ ಶೆಟ್ಟಿ (ಬಿಜೆಪಿ): 96,029 | ಕೆ. ಗೋಪಾಲ ಪೂಜಾರಿ (ಕಾಂಗ್ರೆಸ್): 71,636 | ಗೆಲುವಿನ ಅಂತರ: 24,393

ಈ ಚುನಾವಣೆ ಫಲಿತಾಂಶ
ಗುರುರಾಜ ಗಂಟಿಹೊಳೆ (ಬಿಜೆಪಿ): 98628| ಕೆ. ಗೋಪಾಲ ಪೂಜಾರಿ (ಕಾಂಗ್ರೆಸ್): 82475 | ನೋಟಾ: 1199 | ಗೆಲುವಿನ ಅಂತರ 16,153

ಉದ್ಯಮಿಗಳಿಗೇ ಟಿಕೆಟ್‌!

ಬೈಂದೂರು ವಿಧಾನಸಭಾ ಕ್ಷೇತ್ರ ಮೊದಲು ಜಾತಿವಾರು ಲೆಕ್ಕಾಚಾರದಲ್ಲಿ ಬ್ರಾಹ್ಮಣರು ಮತ್ತು ಬಂಟರಿಗೆ ಕಾಯ್ದಿರಿಸಿದ ಕ್ಷೇತ್ರವೆಂದು ಗುರುತಿಸಿಕೊಂಡಿತ್ತು. ಆದರೆ, 1994ರ ಬಳಿಕ ಕ್ಷೇತ್ರದಲ್ಲಿ ಧನವಂತರಿಗೆ ಟಿಕೆಟ್ ನೀಡುವ ಪರಿಪಾಠ ಪ್ರಾರಂಭವಾಗಿ, ಬೈಂದೂರು ಎಂದರೆ ಉದ್ಯಮಿಗಳಿಗೆ ಅವಕಾಶ ನೀಡುವ ಕ್ಷೇತ್ರ ಎನ್ನುವ ಪರಿಪಾಠವು ಬೆಳೆದು ಬಂದಿತ್ತು.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version