ಬೆಂಗಳೂರು: ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಇತರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 11,133 ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಸರ್ಕಾರಿ ನೌಕರರೆಂದು ತೀರ್ಮಾನಿಸಿ ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ತೀರ್ಮಾನಿಸಿ ಒಪ್ಪಿಗೆ ಪಡೆಯಲಾಗಿದೆ.
ಬಿಬಿಎಂಪಿಯ 3673 ನೌಕರರು, ನಗರಸಭೆ, ಪುರಸಭೆಗಳಲ್ಲಿ 5533 ಮತ್ತು ಮಹಾನಗರ ಪಾಲಿಕೆಗಳಲ್ಲಿನ 1927 ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಕಾಯಂ ನೇಮಕಾತಿ ಮಾಡುವುದರಿಂದ ಕನಿಷ್ಠ ವೇತನವೂ ಪಡೆಯದ ಪೌರಕಾರ್ಮಿಕರು ಈಗ 17000-28,980 ವೇತನ ಶ್ರೇಣಿ ಅಡಿಯಲ್ಲಿ ಸೇವೆ ಸಲ್ಲಿಸುವಂತೆ ಅವಕಾಶ ಕಲ್ಪಿಸಲಾಗಿದೆ. ಅನೇಕ ದಿನಗಳಿಂದ ವಿವಿಧ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಿದ್ದ ಪೌರಕಾರ್ಮಿಕರ ಹೋರಾಟಕ್ಕೆ ಸಂಪುಟ ಅನುಮೋದನೆಯಿಂದ ಜಯ ಸಿಕ್ಕಂತಾಗಿದ್ದು, ಸರ್ಕಾರಕ್ಕೆ ವರ್ಷಕ್ಕೆ 250 ಕೋಟಿ ರೂಪಾಯಿ ವ್ಯಯವಾಗಲಿದೆ.
ಇದನ್ನೂ ಓದಿ | Siddaramaiah : ಮತಾಂತರ ಕಾಯ್ದೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಹಲವು ಮಹತ್ವದ ವಿಧೇಯಕಗಳ ಮಂಡನೆಗೆ ಒಪ್ಪಿಗೆ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕ್ಕೆ ಒಪ್ಪಿಗೆ ನೀಡಲಾಗಿದ್ದು, ಇದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ಹಾಗೂ ಪಿಯು ಶಿಕ್ಷಣ ಮಂಡಳಿ ವಿಲೀನವಾಗಲಿವೆ. ಈ ಸಂಬಂಧ ಮಂಗಳವಾರ ಸದನದಲ್ಲಿ ವಿಧೇಯಕ ಮಂಡನೆಗೆ ಸರ್ಕಾರ ನಿರ್ಧರಿಸಿದೆ.
ಕರ್ನಾಟಕ ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ, ಶಿಕ್ಷಕರ ವರ್ಗಾವಣೆಯಲ್ಲಿ ಕೆಲ ಗೊಂದಲಗಳ ನಿವಾರಣೆ ಕುರಿತ ವಿಧೇಯಕ, ಎಸ್,ಎಸ್‌ಟಿ ಸಮುದಾಯದ ಬಿಪಿಎಲ್ ಕಾರ್ಡ್‌ದಾರರಿಗೆ 75 ಯೂನಿಟ್ ಉಚಿತ ವಿದ್ಯುತ್ ಕೊಡುವ ಸರ್ಕಾರದ ಆದೇಶಕ್ಕೆ ಘಟಾನೋತ್ತರ ಅನುಮೋದನೆ ನೀಡಲಾಗಿದೆ.
ಬೆಂಗಳೂರು ಮೆಟ್ರೋಪಾಲಿಟನ್ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ, ಮೀನುಗಾರರು ಮತ್ತು ಕೃಷಿಕರ ಮಕ್ಕಳಿಗೆ ಮುಖ್ಯಮಂತ್ರಿಗಳ ವಿದ್ಯಾನಿಧಿ ಯೋಜನೆ ವಿಸ್ತರಣೆ ಮಾಡಲು, ಬೆಳಗಾವಿಯಲ್ಲಿ ಪ್ರಾದೇಶಿಕ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಕಟ್ಟಲು 50 ಕೋಟಿ ರೂಪಾಯಿ ಘಟನೋತ್ತರ ಅನುಮೋದನೆಗೆ ಸಂಪುಟ ಒಪ್ಪಿಗೆ ನೀಡಿದೆ.
ಹಾಗೇಯೇ ರಾಜ್ಯಾದ್ಯಂತ ರೈತ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರ ಮೇಲೆ ದಾಖಲಾಗಿದ್ದ 35 ಕೇಸ್ ವಾಪಸ್ ಪಡೆದು ಸರ್ಕಾರಿ ಅಭಿಯೋಜನೆಯಿಂದ ಕೈಬಿಡಲು, ಕರ್ನಾಟಕ ವಿವಿ ಗಳ ತಿದ್ದುಪಡಿ ವಿಧೇಯಕ ಮಂಡನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಲಾಗಿದೆ.
ಬೊಮ್ಮಾಯಿ ಸರ್ಕಾರದಿಂದ ಸಾಮಾಜಿಕ ನ್ಯಾಯದ ದಿಗ್ವಿಜಯ ಯಾತ್ರೆ: ಕಟೀಲ್
ಬೆಂಗಳೂರು: ನಗರಸಭೆ, ಪುರಸಭೆ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 11,133 ಪೌರಕಾರ್ಮಿಕರಿಗೆ ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಸರ್ಕಾರಿ ನೌಕರರೆಂದು ನೇಮಕಾತಿ ಮಾಡುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ಕಾಮನ್ ಮ್ಯಾನ್ ಮುಖ್ಯಮಂತ್ರಿ ಎಂದೇ ಜನಮೆಚ್ಚುಗೆ ಪಡೆದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಬಡವರ ಪರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.
ಸಾಮಾಜಿಕ ನ್ಯಾಯದ ದಿಗ್ವಿಜಯ ಯಾತ್ರೆಯನ್ನು ಕರ್ನಾಟಕದ ಬಿಜೆಪಿ ಸರ್ಕಾರ ಮುಂದುವರಿಸಿದೆ. ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸದಸ್ಯರೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ. 11,133 ಪೌರ ಕಾರ್ಮಿಕರ ಕಾಯಮಾತಿಯಾಗಿರುವುದು ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಯಾಗಿದೆ. ಇದರಿಂದ ಸುದೀರ್ಘ ಕಾಲದಿಂದ ಹೋರಾಟ ಮಾಡುತ್ತಿದ್ದ ಪೌರಕಾರ್ಮಿಕರ ಹೋರಾಟಕ್ಕೆ ನ್ಯಾಯ ಒದಗಿಸಿದಂತಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Bengaluru Rain | ಕೆರೆ, ರಾಜಕಾಲುವೆ ನುಂಗಿದ್ದರ ತನಿಖೆಗೆ ಆಯೋಗ, ಅಭಿವೃದ್ಧಿಗೆ ಟಾಸ್ಕ್ ಫೋರ್ಸ್