ಬೆಂಗಳೂರು: ಹೈಕೋರ್ಟ್‌ನ ಆದೇಶದಂತೆ ಲೋಕಾಯುಕ್ತ ಸಂಸ್ಥೆಯ ಬಲವರ್ಧನೆಗೆ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸಿಬಿಯನ್ನು ರದ್ದುಪಡಿಸಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಬೇಕೆಂದು ಹೈಕೋರ್ಟ್ ಆದೇಶವನ್ನು ಯಥಾವತ್ತಾಗಿ ಪಾಲಿಸಲು ನಿರ್ಧರಿಸಲಾಯಿತು. ಹೀಗಾಗಿ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸದಿರಲು ತೀರ್ಮಾನಿಸಲಾಗಿದೆ.
ಲೋಕಾಯುಕ್ತ ಸಂಸ್ಥೆಗೆ ಅಗತ್ಯವಿರುವ ಸಿಬ್ಬಂದಿ ನೇಮಕಾತಿ ವಿಚಾರಣೆಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಒಟ್ಟು 10 ಸ್ಥಾನಗಳಿದ್ದವು. ಇದರಲ್ಲಿ 7 ಸ್ಥಾನಗಳು ಖಾಲಿ ಇತ್ತು. ಇವುಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಲು ಸರ್ಕಾರ ತೀರ್ಮಾನಿಸಿದೆ ಇದರಲ್ಲಿ ಲೋಕಾಯುಕ್ತ ವಕೀಲರು ಸೇರಿದಂತೆ ಮತ್ತಿತರ ಸಿಬ್ಬಂದಿ ಇರಲಿದ್ದಾರೆ ಎಂದು ತಿಳಿದುಬಂದಿದೆ.
ಏಳು ಸ್ನಾತಕೋತ್ತರ ವಿವಿಗಳಿಗೆ ಅಸ್ತು
ರಾಜ್ಯದ 7 ಜಿಲ್ಲೆಗಳಲ್ಲಿ ಸ್ನಾತಕೋತ್ತರ ವಿವಿಗಳನ್ನು ಪ್ರಾರಂಭಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಬೀದರ್, ಹಾಸನ, ಕೊಡುಗು, ಕೊಪ್ಪಳ , ಬಾಗಲಕೋಟೆ ಜಿಲ್ಲೆಗಳಲ್ಲಿ ಸ್ನಾತಕೋತ್ತರ ವಿವಿಯು ಪ್ರಾರಂಭವಾಗಲಿದೆ. ಮಂಡ್ಯ ಜಿಲ್ಲೆಯ ವಿವಿ ಯ ವಿಸ್ತರಣೆಯನ್ನು ಜಿಲ್ಲಾ ಘಟಕಕ್ಕೆ ವಿಸ್ತರಣೆ ಮಾಡಲಾಗಿದೆ.
ವೈಟ್‍ಫೀಲ್ಡ್ ರೈಲ್ವೆ ನಿಲ್ದಾಣದ ಬಳಿ ಮೇಲ್ಸೇತುವೆ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಲು 24.27 ಕೋಟಿ ಅನುದಾನವನ್ನು ನೀಡಲಾಗಿದೆ. ಕೊಂಕಣ ರೈಲ್ವೆ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಶೇ. 15ರಷ್ಟು ಪಾಲು ನೀಡಬೇಕಾಗಿದ್ದು, ಸುಮಾರು 73.56 ಕೋಟಿ ಅನುದಾನವನ್ನು ನೀಡಲಾಗಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಬಾಣವಾರದಲ್ಲಿ ಶೈಕ್ಷಣಿಕ ಉದ್ದೇಶಕ್ಕೆ 3 ಎಕರೆ ಜಮೀನು ಮಂಜೂರಿಗೆ ಸಂಪುಟ ಸಭೆ ಅನುಮೋದನೆ ಕೊಟ್ಟಿದೆ. ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಮೆಕಾನಿಕಲ್ ಮತ್ತು ಚಾಲನೆ ತರಬೇತಿ ಕೇಂದ್ರ ನಿರ್ಮಾಣಕ್ಕೆ 15 ಕೋಟಿ ಅನುಮದೋನೆ ನೀಡಲಾಗಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ 190 ಕೋಟಿ ಬಿಡುಗಡೆ ಮಾಡಲಾಗಿದೆ. ಬಿಬಿಎಂಪಿಯ ಪಂಥರಪಾಳ್ಯದಲ್ಲಿ ಅರ್ಧಕ್ಕೆ ನಿಂತಿದ್ದ 150 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡಲು ಸಮ್ಮತಿಸಲಾಗಿದೆ.