Site icon Vistara News

Karnataka Politics: ದಿಲ್ಲಿಯಲ್ಲಿ ಸಂಪುಟ ಸರ್ಕಸ್‌; ಯಾರಿಗೆ ಅವಕಾಶ? ಯಾರಿಗೆ ಗೇಟ್‌ ಬಂದ್?

Siddaramaiah DKShivakumar in delhi

Siddaramaiah DKShivakumar in delhi

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ (Cabinet Expansion) ಸರ್ಕಸ್‌ ದಿಲ್ಲಿಯಲ್ಲಿ ಮುಂದುವರಿದಿದೆ. ಈಗಾಗಲೇ ಎಂಟು ಸಚಿವರೊಂದಿಗೆ ಪ್ರಾಥಮಿಕ ಸಂಪುಟ ರಚನೆಯಾಗಿದ್ದು, ಅದನ್ನು ವಿಸ್ತರಿಸುವ ಪ್ರಯತ್ನಕ್ಕೆ ಕೈಹಾಕಿರುವ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರು ದಿಲ್ಲಿಯಲ್ಲಿ ಹಿರಿಯ ನಾಯಕರ ಜತೆ ಮಾತುಕತೆಗೆ (Karnataka Politics) ಅಣಿಯಾಗಿದ್ದಾರೆ. ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ (KC Venugopal) ಅವರೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿ ಮುಂದಿನ ಹೆಜ್ಜೆ ಇಡಲಿದ್ದಾರೆ. ಸಿಎಂ ಮತ್ತು ಡಿಸಿಎಂ ಬುಧವಾರ ಸಂಜೆಯೇ ದಿಲ್ಲಿಗೆ ಬಂದಿದ್ದರೂ ಮಾತುಕತೆ ಮಾತ್ರ ಗುರುವಾರಕ್ಕೆ ನಿಗದಿಯಾಗಿದೆ. ಈ ನಡುವೆ ಸಚಿವ ಪದ ಆಕಾಂಕ್ಷಿಗಳು ದಿಲ್ಲಿಗೂ ಲಗ್ಗೆ ಇಟ್ಟಿದ್ದು ಅಲ್ಲಿಯೂ ಒತ್ತಡ ತಂತ್ರ ಮುಂದುವರಿಸಿದ್ದಾರೆ.

ಒಂದೇ ಹಂತದಲ್ಲಿ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಆರಂಭಿಕವಾಗಿ ಪ್ಲ್ಯಾನ್‌ ಇತ್ತಾದರೂ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎನ್ನುವ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕೇವಲ ಎಂಟು ಸಚಿವರಷ್ಟೇ ಮೊದಲ ಹಂತದಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಯಿತು. ಇದೀಗ ಎರಡನೇ ಹಂತದಲ್ಲಿ ಏನಾಗುತ್ತದೆ? ಅವರಿಬ್ಬರ ನಡುವೆ ಒಮ್ಮತ ಮೂಡುವಂತೆ ಹೈಕಮಾಂಡ್‌ ಯಾವ ಪ್ಲ್ಯಾನ್‌ ಮಾಡಲಿದೆ ಎಂಬ ಕುತೂಹಲ ಮೂಡಿದೆ.

ಇಬ್ಬರೂ ನಾಯಕರು ತಮ್ಮ ತಮ್ಮ ಆಕಾಂಕ್ಷಿಗಳ ಪಟ್ಟಿಯನ್ನು ಹಿಡಿದುಕೊಂಡು ಹೋಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಪಟ್ಟಿಯಲ್ಲಿ ಭೈರತಿ ಸುರೇಶ್, ಆರ್. ವಿ. ದೇಶಪಾಂಡೆ, ಎಚ್. ಸಿ. ಮಹದೇವಪ್ಪ, ದಿನೇಶ್ ಗುಂಡೂರಾವ್, ಬಸವರಾಜ ರಾಯರಡ್ಡಿ, ಎಂ. ಕೃಷ್ಣಪ್ಪ, ಕೆ.ಎನ್. ರಾಜಣ್ಣ, ಶಿವರಾಜ್ ತಂಗಡಗಿ, ಸಂತೋಷ ಲಾಡ್, ಎಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ, ಕೃಷ್ಣಭರೇಗೌಡ ಅವರ ಹೆಸರುಗಳಿವೆ ಎನ್ನಲಾಗಿದೆ.

ಡಿಸಿಎಂ ಡಿ.ಕೆ ಶಿವಕುಮಾರ್ ಪಟ್ಟಿಯಲ್ಲಿ ಎನ್.ಎ. ಹ್ಯಾರಿಸ್, ತನ್ವೀರ್ ಸೇಠ್, ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಕುಣಿಗಲ್ ರಂಗನಾಥ್, ಬಾಲಕೃಷ್ಣ, ಚಲುವರಾಯಸ್ವಾಮಿ ಸೇರಿದಂತೆ ಇನ್ನೂ‌ ಕೆಲವರು ಹೆಸರುಗಳಿವೆ.

ಹಿರಿಯರಿಗೆ ಅವಕಾಶ, ಎಲ್ಲ ಸಮುದಾಯ, ಜಿಲ್ಲಾವಾರು ಪ್ರಾತಿನಿಧ್ಯಕ್ಕೆ ಸಿದ್ದರಾಮಯ್ಯ ಒತ್ತು ನೀಡಿದ್ದರೆ, ಪಕ್ಷಕ್ಕಾಗಿ ದುಡಿದವರಿಗೆ ಸ್ಥಾನ ಸಿಗಬೇಕು, ಕಾಂಗ್ರೆಸ್‌ ಆಯೋಜಿಸಿದ ಹೋರಾಟಗಳಲ್ಲಿ ಸಕ್ರಿಯರಾಗಿದ್ದವರಿಗೆ ಅವಕಾಶ ಕೊಡಬೇಕು ಎನ್ನುವುದು ಶಿವಕುಮಾರ್‌ ವಾದ.

ಯಾರಿಗೆ ಅವಕಾಶ? ಏನೇನು ಲೆಕ್ಕಾಚಾರ?

ವಿವಿಧ ಸೂತ್ರದೊಂದಿಗೆ ಸಂಪುಟ ವಿಸ್ತರಣೆ ನಡೆಸಲು ಕಾಂಗ್ರೆಸ್ ನಾಯಕರು ಪ್ಲ್ಯಾನ್‌ ಮಾಡಿದ್ದಾರೆ. ವಿಧಾನಪರಿಷತ್ ನಿಂದ ಕನಿಷ್ಠ ಒಂದು, ಗರಿಷ್ಠ ಮೂರು ಸ್ಥಾನಕ್ಕೆ ಮಾತ್ರ ಅವಕಾಶ ಸಿಗುವ ನಿರೀಕ್ಷೆ ಇದೆ.

ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸಂಪುಟ ವಿಸ್ತರಣೆ ಮಾಡಬೇಕಾಗಿರುವುದರಿಂದ ಪಕ್ಷ ಸಂಘಟನೆಗೆ ಹೆಚ್ಚು ಮಹತ್ವ ನೀಡುವವರಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಲಿಂಗಾಯತ ಸಮುದಾಯದ ಹಿರಿಯರಿಗೆ ಹೆಚ್ಚಿನ ಸ್ಥಾನ ನೀಡಲು ಒಲವು ಇದೆ.

ಓರ್ವ ಮಹಿಳಾ ಶಾಸಕಿಗೆ ಸಂಪುಟದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಒಕ್ಕಲಿಗ ಸಮುದಾಯದ ಯುವ ಶಾಸಕರಿಗೆ ಮಣೆ ಹಾಕುವ ಲೆಕ್ಕಾಚಾರವೂ ಇದೆ.

ಯಾರಿಗೆ ಅವಕಾಶ ಇಲ್ಲ?

ಗಂಭೀರ ಸ್ವರೂಪದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವವರಿಗೆ ಅವಕಾಶ ಇಲ್ಲ ಎನ್ನಲಾಗುತ್ತಿದೆ. ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗಿಯಾಗದ ನಾಯಕರಿಗೆ ಸಚಿವ ಸ್ಥಾನ ಸಿಗುವುದು ಕಷ್ಟ ಎನ್ನಲಾಗುತ್ತಿದೆ. ಭಾರತ್ ಜೋಡೋ, ಮೇಕೆದಾಟು, ಪೇಸಿಎಂ ಹೋರಾಟದಲ್ಲಿ ನಿರಾಸಕ್ತಿ ತೋರಿರುವ ಶಾಸಕರಿಗೆ ಸಂಪುಟ ಪ್ರವೇಶ ಇಲ್ಲ ಎನ್ನುವ ಶಿವಕುಮಾರ್‌ ವಾದ ಗೆಲ್ಲುತ್ತದಾ ಎಂದು ಕಾದು ನೋಡಬೇಕಾಗಿದೆ.‌

ದಿಲ್ಲಿಗೆ ದೌಡಾಯಿಸಿ 35ಕ್ಕೂ ಅಧಿಕ ಶಾಸಕರು

ಈ ನಡುವೆ, ಶಾಸಕರ ಸಚಿವ ಸ್ಥಾನ ಲಾಬಿ ದಿಲ್ಲಿಗೆ ಶಿಫ್ಟ್‌ ಆಗಿದೆ. ಈಗಾಗಲೇ 35ಕ್ಕೂ ಅಧಿಕ ಶಾಸಕರು ದಿಲ್ಲಿಗೆ ದೌಡಾಯಿಸಿದ್ದಾರೆ.

ಶಾಸಕರಾದ ಭೈರತಿ ಸುರೇಶ್, ಅಶೋಕ್ ಪಟ್ಟಣ್, ಪ್ರಕಾಶ್ ರಾಠೋಡ್, ವಿಜಯಾನಂದ ಕಾಶಪ್ಪನವರ್,ವಿನಯ್ ಕುಲಕರ್ಣಿ, ಲಾಡ್, ಕಂಪ್ಲಿ ಗಣೇಶ್, ಡಾ ಶ್ರೀನಿವಾಸ್, ರಘುಮೂರ್ತಿ, ಎಂ ಕೆ ತಮ್ಮಣ್ಣನವರ್, ಅನೀಲ್ ಚಿಕ್ಕಮಾದು, ಡಿಎಂ ನಾಗರಾಜ್, ಸಂಡೂರ್ ತುಕಾರಾಮ್, ಹಿರಿಯೂರು ಶಾಸಕ ಸುಧಾಕರ್, ಅಜಯ್ ಸಿಂಗ್, ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ ಹಲವರು ದಿಲ್ಲಿಯಲ್ಲಿದ್ದಾರೆ. ಆರ್ ಬಿ ತಿಮ್ಮಾಪುರ,. ಗಣೇಶ್ ಹುಕ್ಕೇರಿ, ನಾಗೇಂದ್ರ, ಪುಟ್ಟರಂಗಶೆಟ್ಟಿ, ಟಿ ಬಿ ಜಯಚಂದ್ರ ಅವರೂ ಇದ್ದಾರೆ.

ಇವರಲ್ಲಿ ಹೆಚ್ಚಿನವರು ಕರ್ನಾಟಕ ಭವನದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಡ ಹೇರುತ್ತಿದ್ದಾರೆ.

ನೀನ್ಯಾಕಯ್ಯಾ ಬಂದಿದ್ದೀಯಾ?

ಸಚಿವ ಆಕಾಂಕ್ಷಿ ಪುಟ್ಟರಂಗಶೆಟ್ಟಿ ಅವರು ದಿಲ್ಲಿಗೆ ಬಂದು ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ʻʻನೀನ್ಯಾಕೆ ಬಂದಿದ್ದಿಯಾ..? ನೀನು ವಾಪಾಸ್ ಹೊಗಯ್ಯ.. ನಿಂದು ಸಚಿವ ಸ್ಥಾನ ಆಗುತ್ತೆ ಹೋಗಯ್ಯʼʼ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ : Karnataka Politics:‌ ಮತ್ತೊಂದು ಭಾರೀ ಹಗರಣ? ಬಿಜೆಪಿ ಕಾಲದ ಗಂಗಾ ಕಲ್ಯಾಣ ಅಕ್ರಮ ತನಿಖೆ ಹೊಣೆ ಸಿಐಡಿಗೆ; ಪೊಲೀಸ್‌ ಇಲಾಖೆಗೆ ಬಿಸಿ

Exit mobile version