ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಈ ಹಿಂದೆ ಬಿಜೆಪಿಯಲ್ಲಿದ್ದು ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಸೇರಿ, ಬಳಿಕ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಹಿರಿಯ ನಾಯಕ ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ರಾಜ್ಯ ವಿಧಾನ ಪರಿಷತ್ ಸದಸ್ಯರನ್ನಾಗಿ (Member of Legislative assembly) ಮಾಡಲು ಕೈ ಪಾಳಯ ನಿರ್ಧರಿಸಿದೆ.
ಗುರುವಾರ ನವ ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಕಾಂಗ್ರೆಸ್ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರ ನಡುವೆಯೇ ರಾಜ್ಯ ಸಚಿವ ಸಂಪುಟ ಸೇರಲಿರುವ 23 ಮಂದಿ ನಾಯಕರ ಪಟ್ಟಿಯೂ ಬಹುತೇಕ ಫೈನಲ್ ಆಗಿದೆ.
ರಾಜ್ಯ ಸಚಿವ ಸಂಪುಟದ ಬಲ 34 ಆಗಿದ್ದು, ಈಗಾಗಲೇ ಸಿಎಂ, ಡಿಸಿಎಂ ಹಾಗೂ ಎಂಟು ಮಂತ್ರಿಗಳ ಪ್ರಮಾಣವಚನದಿಂದ 10 ಸ್ಥಾನಗಳು ತುಂಬಿವೆ. ಇದೀಗ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ (Cabinet Epansion) ಮೇ 27ರ ಶನಿವಾರ ಬೆಳಗ್ಗೆ 11.45ರ ಮುಹೂರ್ತವನ್ನು ಫಿಕ್ಸ್ ಮಾಡಲಾಗಿದೆ. ಇದರ ನಡುವೆ ಸಂಪುಟಕ್ಕೆ ಸೇರಲಿರುವ 23 ಮಂದಿಯ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದ್ದು, ಒಂದು ಸ್ಥಾನ ಖಾಲಿ ಬಿಡುವ ನಿರೀಕ್ಷೆ ಇದೆ.
ಬೋಸರಾಜು ಅವರಿಗೂ ಎಂಎಲ್ಸಿ
ಈಗ ಬಿಡುಗಡೆಯಾಗಿರುವ ಪಟ್ಟಿಯಲ್ಲಿ 22 ಮಂದಿ ಶಾಸಕರಿದ್ದಾರೆ. ರಾಯಚೂರಿನ ಹಿರಿಯ ಕಾಂಗ್ರೆಸ್ ಮುಖಂಡ ಬೋಸರಾಜು ಅವರ ಹೆಸರು ಕೂಡಾ ಅಂತಿಮವಾಗಿದ್ದು, ಅವರು ಪ್ರಸಕ್ತ ಯಾವುದೇ ಸದನದ ಸದಸ್ಯರಲ್ಲ. ಹೀಗಾಗಿ ಅವರನ್ನು ಈಗ ಮಂತ್ರಿ ಮಾಡಿ ಆರು ತಿಂಗಳ ಒಳಗಾಗಿ ವಿಧಾಣ ಪರಿಷತ್ ಸದಸ್ಯರನ್ನಾಗಿ ಮಾಡಲು ನಿರ್ಧರಿಸಲಾಗಿದೆ.
ಜಗದೀಶ್ ಶೆಟ್ಟರ್‌ಗೆ ಮಂತ್ರಿ ಹುದ್ದೆ ಇದೆಯಾ?
ಕಾಂಗ್ರೆಸ್ ಜಗದೀಶ್ ಶೆಟ್ಟರ್ ಅವರನ್ನು ಎಂಎಲ್‌ಸಿ ಮಾಡಲು ನಿರ್ಧರಿಸಿದೆ. ಆದರೆ, ಇದೇ ವಿಸ್ತರಣೆಯಲ್ಲಿ ಅವರಿಗೆ ಮಂತ್ರಿ ಸ್ಥಾನವನ್ನು ನೀಡುತ್ತದೆಯೇ ಎನ್ನುವುದರ ಸ್ಪಷ್ಟತೆ ಇಲ್ಲ. ಬೋಸರಾಜು ಅವರನ್ನು ಸಚಿವರನ್ನಾಗಿ ಮಾಡಿ ಬಳಿಕ ಎಂಎಲ್‌ಸಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಮೂಲಗಳ ಪ್ರಕಾರ, ಜಗದೀಶ್ ಶೆಟ್ಟರ್ ಅವರನ್ನು ಮೊದಲು ಎಂಎಲ್‌ಸಿ ಮಾಡಿ ಬಳಿಕ ಮಂತ್ರಿ ಮಾಡಲಾಗುತ್ತದೆ. ಅಂದರೆ ಈ ವಿಸ್ತರಣೆಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಸಚಿವ ಪದ ಸಿಗುವುದು ಡೌಟ್ ಎನ್ನಲಾಗುತ್ತಿದೆ.
ಇದು ಸಂಭವನೀಯ ಸಚಿವರ ಪಟ್ಟಿ
ಬೆಂಗಳೂರು: ಕೃಷ್ಣಬೈರೇಗೌಡ, ಬೈರತಿ ಸುರೇಶ್, ದಿನೇಶ್ ಗುಂಡೂರಾವ್
ತುಮಕೂರು: ಕೆ.ಎನ್ ರಾಜಣ್ಣ
ಮಂಡ್ಯ: ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ
ಹುಬ್ಬಳ್ಳಿ ಧಾರವಾಡ: ಸಂತೋಷ್ ಲಾಡ್, ಶರಣಬಸಪ್ಪ ದರ್ಶನಾಪುರ
ಕೊಪ್ಪಳ: ಬಸವರಾಜ ರಾಯರೆಡ್ಡಿ, ಶಿವರಾಜ್ ತಂಗಡಗಿ
ರಾಯಚೂರು: ಬೋಸರಾಜು
ಬೆಳಗಾವಿ: ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ
ಚಿತ್ರದುರ್ಗ : ಹಿರಿಯೂರು ಸುಧಾಕರ್
ಚಿಕ್ಕಬಳ್ಳಾಪುರ: ಚಿಂತಾಮಣಿ ಸುಧಾಕರ್
ದಾವಣಗೆರೆ: ಎಸ್ ಎಸ್ ಮಲ್ಲಿಕಾರ್ಜುನ
ಮೈಸೂರು: ವೆಂಕಟೇಶ್, ಎಚ್ ಸಿ ಮಹಾದೇವಪ್ಪ
ಕಲಬುರಗಿ: ಅಜೇಯ್ ಸಿಂಗ್
ಬೀದರ್: ಈಶ್ವರ್ ಖಂಡ್ರೆ
ಉತ್ತರ ಕನ್ನಡ: ಮಾಂಕಾಳು ವೈದ್ಯ
ಶಿವಮೊಗ್ಗ: ಮಧು ಬಂಗಾರಪ್ಪ
ಚಾಮರಾಜನಗರ: ಪುಟ್ಟರಂಗಶೆಟ್ಟಿ
ಈ ಪಟ್ಟಿಯ ಪ್ರಮುಖ ಅಂಶವೆಂದರೆ, ಉತ್ತರ ಕನ್ನಡ ಜಿಲ್ಲೆಯ ಕೋಟಾದಲ್ಲಿ ಆರ್.ವಿ ದೇಶಪಾಂಡೆ ಅವರ ಬದಲು ಮಾಂಕಾಳು ವೈದ್ಯ ಅವರು ಸ್ಥಾನ ಪಡೆದಿದ್ದಾರೆ. ಸಂಪುಟದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರೊಬ್ಬರೇ ಮಹಿಳೆಯಾಗಿ ಅವಕಾಶ ಪಡೆದಿದ್ದಾರೆ.