Site icon Vistara News

High Beam Lights‌: ರಾತ್ರಿ ಹೈ ಬೀಮ್‌ ಲೈಟ್‌ ಹಾಕಿಕೊಂಡು ವಾಹನ ಚಲಾಯಿಸುತ್ತೀರಾ? ಕೇಸು ಬೀಳುತ್ತೆ ಎಚ್ಚರ!

high beam lights

ಬೆಂಗಳೂರು: ವಾಹನಕ್ಕೆ ಬೇಕಾಬಿಟ್ಟಿ ಎಕ್ಸ್‌ಟ್ರಾ ಲೈಟ್ ಅಳವಡಿಸಿಕೊಂಡು ಚಲಾಯಿಸುವ ವಾಹನ ಚಾಲಕರು ಇನ್ನು ಮುಂದೆ ಎಚ್ಚರ ವಹಿಸಬೇಕಿದೆ. ಹೈ ಬೀಮ್ ಲೈಟ್ (High Beam Lights‌) ಉಪಯೋಗಿಸುತ್ತಿದ್ದ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯಾದ್ಯಂತ 966 ಪ್ರಕರಣಗಳನ್ನು ಪೊಲೀಸರು (Traffic Police) ದಾಖಲಿಸಿದ್ದಾರೆ.

ರಾತ್ರಿ ವೇಳೆ ಹೈ ಬೀಮ್ ಲೈಟ್ ಉಪಯೋಗದಿಂದ ಅಪಘಾತ (Accidents) ಪ್ರಕರಣಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು, ಹೀಗೆ ಹಾಕಿಕೊಂಡು ಚಲಾಯಿಸಿದವರ ವಿರುದ್ಧ ಕೇಸು ಜಡಿದಿದ್ದಾರೆ. ಪಶ್ಚಿಮ ವಿಭಾಗ ಸಂಚಾರ ಪೊಲೀಸರಿಂದ 239 ಪ್ರಕರಣ, ದಕ್ಷಿಣ ವಿಭಾಗ ಸಂಚಾರ ಪೊಲೀಸರಿಂದ 104 ಹಾಗೂ ಪೂರ್ವ ವಿಭಾಗ ಸಂಚಾರ ಪೊಲೀಸರಿಂದ 102 ಪ್ರಕರಣ ದಾಖಲಾಗಿವೆ.

ನಂಬರ್ ಪ್ಲೇಟ್ ಅಳವಡಿಸದ ಹಾಗೂ ಮರೆ ಮಾಚಿಕೊಂಡು ಓಡಾಡುತ್ತಿದ್ದವರ ಮೇಲೂ ಕೇಸ್ ಬಿದ್ದಿದೆ. ಬೆಂಗಳೂರು ದಕ್ಷಿಣ ವಿಭಾಗ ಸಂಚಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ಸ್ಪೆಷಲ್ ಡ್ರೈವ್ ಮೂಲಕ ಇಂಥವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಂಬರ್ ಫ್ಲೇಟ್ ಅಳವಡಿಸಿಕೊಳ್ಳದೇ ಚಾಲನೆ ಮಾಡುತ್ತಿದ್ದ 100 ಪ್ರಕರಣ, ನಂಬರ್ ಫ್ಲೇಟ್ ಮರೆಮಾಚಿಕೊಂಡು ಸಂಚರಿಸುತ್ತಿದ್ದವರ ವಿರುದ್ಧ 104 ಪ್ರಕರಣ ದಾಖಲಾಗಿದೆ.

ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಸಂಚರಿಸುತ್ತಿದ್ದವರ ವಿರುದ್ಧ 62 ಪ್ರಕರಣ ದಾಖಲಾಗಿದೆ. ವಿಶೇಷ ಕಾರ್ಯಚರಣೆಯಲ್ಲಿ ಒಟ್ಟು 266 ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಾಗಿದೆ.

ಕರೆದ ಕಡೆ ಹೋಗದೆ ಉದ್ಧಟತನ ತೋರುತ್ತಿದ್ದ ಹಾಗೂ ನಿಗದಿತ ದರಕ್ಕಿಂತ ಹೆಚ್ಚಿನ ಬಾಡಿಗೆ ಪಡೆಯುತ್ತಿದ್ದ ಆಟೋ ಚಾಲಕರಿಗೂ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬಾಡಿಗೆಗೆ ಹೋಗಲು ನಿರಾಕರಿಸುತ್ತಿದ್ದ 11 ಆಟೋ ಚಾಲಕರು, ನಿಗದಿತ ದರಕ್ಕಿಂತ ಹೆಚ್ಚು ಬಾಡಿಗೆ ಪಡೆಯುತ್ತಿದ್ದ 6 ಜನ ಆಟೋ ಚಾಲಕರು, ಯೂನಿಫಾರ್ಮ್ ಧರಿಸದೇ ಆಟೋ ಚಾಲನೆ ಮಾಡುತ್ತಿದ್ದ 66 ಚಾಲಕರು, ಅನಧಿಕೃತವಾಗಿ ಆಟೋ ಪಾರ್ಕಿಂಗ್ ಮಾಡುತ್ತಿದ್ದ 11 ಜನ ಆಟೋ ಚಾಲಕರು ಹೀಗೆ ಒಟ್ಟು 94 ಆಟೋ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸ್ಮಾರ್ಟ್‌ ಟ್ರಾಫಿಕ್‌ ಸಿಸ್ಟಂ

ಬೆಂಗಳೂರು: ವಾಹನ ಸಂಚಾರ ನಿಯಮ ಉಲ್ಲಂಘನೆ ಹಾಗೂ ರಸ್ತೆ ಅಪಘಾತಗಳ ತಡೆಗಾಗಿ ಸಂಚಾರ ಪೊಲೀಸ್‌ ವಿಭಾಗ, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ. ಇದರ ಭಾಗವಾಗಿ ಇಂದಿನಿಂದ (ಜುಲೈ 1) ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ (Bangalore–Mysore Expressway) ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ (ITMS) ಜಾರಿಯಾಗಲಿದೆ. ಈ ಹೈವೇಯಲ್ಲಿ ಇನ್ನುಮುಂದೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರಿಗೆ ನೆರವಾಗಲಿದೆ.

ಜುಲೈ 1ರಿಂದ ಹೆದ್ದಾರಿಯಲ್ಲಿ ಈ ಸ್ಮಾರ್ಟ್‌ ಟ್ರಾಫಿಕ್‌ ಸಿಸ್ಟಂ ಜಾರಿ ಆಗಲಿದೆ. ಈ ಮಾರ್ಗದಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡವನ್ನು ನೇರವಾಗಿ ಫಾಸ್ಟ್ಯಾಗ್‌ ಖಾತೆಯಿಂದಲೇ ಕಡಿತಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಕ್ಯಾಮೆರಾಗಳು, ಸ್ಪೀಡ್‌ ಗನ್‌ಗಳು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲು ನೆರವಾಗಲಿವೆ.

ಜುಲೈ 1ರಿಂದ ಮೈಸೂರು-ಬೆಂಗಳೂರು ಹೆದ್ದಾರಿಯು ಸಂಪೂರ್ಣವಾಗಿ ಕ್ರಿಯಾತ್ಮಕ ಐಟಿಎಂಎಸ್ ಕಾರಿಡಾರ್ (ITMS Corridor) ಆಗಲಿದೆ ಎಂದು ಕರ್ನಾಟಕ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಎಡಿಜಿಪಿ ಅಲೋಕ್ ಕುಮಾರ್ ಇತ್ತೀಚೆಗೆ ತಿಳಿಸಿದ್ದರು.

ಐಟಿಎಂಎಸ್ ಅಥವಾ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಡಿಸೆಂಬರ್ 2022ರಲ್ಲಿ ಬೆಂಗಳೂರಿನಲ್ಲಿ ಚಾಲನೆಗೆ ತರಲಾಯಿತು. ಅದಕ್ಕಾಗಿ 250 ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್‌ಪಿಆರ್) ಕ್ಯಾಮೆರಾಗಳು ಮತ್ತು 80 ರೆಡ್ ಲೈಟ್ ಉಲ್ಲಂಘನೆ ಪತ್ತೆ (ಆರ್‌ಎರ್‌ವಿಡಿ) ಕ್ಯಾಮೆರಾಗಳನ್ನು ನಗರದ 50 ಜಂಕ್ಷನ್ ಗಳಲ್ಲಿ ಅಳವಡಿಸಲಾಗಿದೆ. ಈಗ ಐಟಿಎಂಎಸ್ ಅಡಿಯಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಮೈಸೂರಿನ ಪ್ರಮುಖ ರಸ್ತೆಗಳಲ್ಲಿ 8.5 ಕೋಟಿ ರೂ. ಅಂದರೆ ಮೈಸೂರು ನಗರಕ್ಕೆ ರೂಪಾಯಿ 4 ಕೋಟಿ ಮತ್ತು ಮೈಸೂರು ಜಿಲ್ಲೆಗೆ ರೂ.4.5 ಕೋಟಿ ಅಂದಾಜು ವೆಚ್ಚದಲ್ಲಿ ಅಳವಡಿಸಲಾಗಿದೆ. ಅಲ್ಲದೇ ಜುಲೈ 1ರಿಂದ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವಾಹನ ಚಾಲಕರಿಗೆ ಚಲನ್ ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದರು.

ಅಲ್ಲದೇ ಕ್ಯಾಮೆರಾಗಳನ್ನು ಮೈಸೂರು ಜಿಲ್ಲೆಯ ಹುಣಸೂರು, ಎಚ್ ಡಿ ಕೋಟೆ, ನಂಜನಗೂಡು ಮತ್ತು ಟಿ ನರಸೀಪುರದಂತಹ ಹಲವಾರು ಪ್ರದೇಶಗಳಲ್ಲಿ ಅಳವಡಿಸಲಾಗುವುದು. ಹಾಗಾಗಿ ರೂಲ್ಸ್ ಬ್ರೇಕ್ ಮಾಡಿದ ವಾಹನ ಚಾಲಕರಿಗೆ ಸರಿಯಾದ ಸಮಯಕ್ಕೆ ಎಸ್ ಎಂಎಸ್ ಕಳುಹಿಸಲಾಗುವುದು ಎಂದು ಅವರು ಹೇಳಿದ್ದರು.
ಹೆಚ್ಚುವರಿಯಾಗಿ ಈ ವರ್ಷ ಬೆಂಗಳೂರಿನಿಂದ ಹತ್ತಿರದ ತಾಲೂಕುಗಳು ಮತ್ತು ಜಿಲ್ಲೆಗಳಿಗೆ ಸಂಪರ್ಕಿಸುವ ನಾಲ್ಕು ಪ್ರಮುಖ ಹೆದ್ದಾರಿಗಳಲ್ಲಿ (ತುಮಕೂರು ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ ಮತ್ತು ಹೊಸಕೋಟೆ) ಐಟಿಎಂಎಸ್ ಕ್ಯಾಮೆರಾಗಳನ್ನು ಅಳವಡಿಸಲು ಎಡಿಜಿಪಿ ಪ್ರಸ್ತಾಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: Viral Video: ಕಾರು ತಡೆದ ಟ್ರಾಫಿಕ್‌ ಪೊಲೀಸ್‌ ಕ್ಯಾಬ್‌ ಡ್ರೈವರ್‌ ಮಾಡಿದ್ದೇನು ಗೊತ್ತಾ?

Exit mobile version