Site icon Vistara News

Cauvery Dispute: ಪ್ರಾಧಿಕಾರದಲ್ಲೂ ರಾಜ್ಯಕ್ಕೆ ಮತ್ತೆ ಹಿನ್ನಡೆ, 3000 ಕ್ಯೂಸೆಕ್‌ ನೀರು ಬಿಡುಗಡೆ ಕಡ್ಡಾಯ

CWMA Meeting

ನವದೆಹಲಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery water Management Authority) ಶುಕ್ರವಾರ ನಡೆಸಿದ ಸಭೆಯಲ್ಲೂ ರಾಜ್ಯಕ್ಕೆ ಹಿನ್ನಡೆಯಾಗಿದೆ. ಸೆ. 28ರಿಂದ ಅಕ್ಟೋಬರ್‌ 15ರವರೆಗೆ ತಮಿಳುನಾಡಿಗೆ ಪ್ರತಿ ದಿನವೂ 3000 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water regulation Committee) ಆದೇಶವನ್ನೇ ಪ್ರಾಧಿಕಾರವೂ ಎತ್ತಿ ಹಿಡಿದಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಸೆಪ್ಟೆಂಬರ್‌ 26ರಂದು ಬೆಂಗಳೂರು ಬಂದ್‌ ಮತ್ತು ಶುಕ್ರವಾರ ಕರ್ನಾಟಕ ಬಂದ್‌ ನಡೆಯುತ್ತಿದೆ. ರಾಜ್ಯದಲ್ಲಿ ಇಷ್ಟೊಂದು ಆಕ್ರೋಶವಿದೆ. ಮತ್ತು ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ, ಬರ ಪರಿಸ್ಥಿತಿ ತೀವ್ರವಾಗಿದೆ ಎಂಬ ರಾಜ್ಯದ ಯಾವ ವಾದವನ್ನೂ ಲೆಕ್ಕಿಸದೆ ಕಾವೇರಿ ಪ್ರಾಧಿಕಾರ ತನ್ನದೇ ಹಠಮಾರಿ ನಿಲುವನ್ನು ಮುಂದುವರಿಸಿದೆ. ಈ ಕಾರಣದಿಂದಾಗಿಯೇ ತಮಿಳುನಾಡಿಗೆ ನೀರು ಬಿಡಬೇಕು ಎಂಬ CWRCಯ ಆದೇಶವನ್ನು ಮತ್ತೆ ಎತ್ತಿ ಹಿಡಿದಿದೆ. CWRC ಕಳೆದ ಸೆ. 26ರಂದು ನಡೆಸಿದ ಸಭೆಯಲ್ಲಿ ತಮಿಳುನಾಡಿಗೆ ಸೆ. 28ರಿಂದ ಅ. 15ರವರೆಗೆ ಪ್ರತಿ ದಿನವೂ 3000 ಕ್ಯೂಸೆಕ್‌ ನೀರು ಬಿಡಬೇಕು ಎಂದು ಆದೇಶಿಸಿತ್ತು.

ಇದೀಗ ಕರ್ನಾಟಕವು ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವೊಂದೇ ಬಾಕಿ ಉಳಿದಿದೆ. ಇತ್ತ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ನ್ಯಾಯಮೂರ್ತಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಮುಂದಿನ ಹೆಜ್ಜೆಯ ಬಗ್ಗೆ ಚರ್ಚೆಗೆ ಮುಂದಾಗಿದ್ದಾರೆ.

ಕಾವೇರಿ ಪ್ರಾಧಿಕಾರದ ಸಭೆಗೂ ಮುನ್ನವೇ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಬಹುದು ಎಂದು ವಿರೋಧ ಪಕ್ಷಗಳು ಸಲಹೆ ನೀಡಿದ್ದವು. ಆದರೆ, ಸರ್ಕಾರ ಪ್ರಾಧಿಕಾರದ ಆದೇಶಕ್ಕಾಗಿ ಕಾಯುತ್ತಿತ್ತು. ಈಗ ಕಾವೇರಿ ನದಿ ಪ್ರಾಧಿಕಾರದ ಆದೇಶವೂ ಕರ್ನಾಟಕಕ್ಕೆ ಹಿನ್ನಡೆಯಾಗಿರುವುದರಿಂದ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಬಹುದಾಗಿದೆ.

ತಮಿಳುನಾಡಿನ ಮೊಂಡುವಾದ

ಕಾವೇರಿ ಪ್ರಾಧಿಕಾರದ ಶುಕ್ರವಾರದ ಸಭೆಯಲ್ಲೂ ತಮಿಳುನಾಡು ತನ್ನ ಮೊಂಡುವಾದವನ್ನೇ ನಡೆಸಿತು. ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ ಆದೇಶವೇ ಸರಿಯಿಲ್ಲ. ನಮಗೆ ಕೊಡಬೇಕಾಗಿರುವುದು 3000 ಕ್ಯೂಸೆಕ್‌ ನೀರಲ್ಲ. 12500 ಕ್ಯೂಸೆಕ್‌ ನೀಡಬೇಕು ಎಂದೇ ವಾದಿಸಿತು. ಕರ್ನಾಟಕವು ರಾಜ್ಯದ ಪರಿಸ್ಥಿತಿ ಜಲಾಶಯದಲ್ಲಿರುವ ನೀರಿನ ಮಟ್ಟವನ್ನು ವಿವರಿಸಿದರೂ ವಾದಕ್ಕೆ ಬೆಲೆ ಸಿಗಲಿಲ್ಲ.

ಇದನ್ನೂ ಓದಿ: Cauvery water dispute : ಕಾವೇರಿ ಪ್ರಾಧಿಕಾರದ ಆದೇಶ ಕರ್ನಾಟಕಕ್ಕೆ ಮರಣ ಶಾಸನವೆಂದ ಬಿಎಸ್‌ವೈ

ಪ್ರಾಧಿಕಾರ ಯಾವತ್ತು ರಾಜ್ಯದ ಪರ ಇರಲಿಲ್ಲ.

ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರವು ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಮಾಡುತ್ತಿರುವುದು ಇದು ಮೂರನೇ ಬಾರಿ. ಮೊದಲು ಆಗಸ್ಟ್‌ 26ರಂದು 5000 ಕ್ಯೂಸೆಕ್‌, ಬಳಿಕ ಸೆ. 12ರಂದು ಮತ್ತೆ ಐದು ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಆದೇಶ ಮಾಡಿದ್ದ ಸಮಿತಿ ಇದೀಗ ಮೂರನೇ ಸಲ ಆದೇಶ ನೀಡಿದೆ. ಹಿಂದಿನ ಎರಡೂ ಸಂದರ್ಭದಲ್ಲೂ ಅದು ಕರ್ನಾಟಕದ ವಾದಗಳಿಗೆ ಮನ್ನಣೆ ನೀಡಿಲ್ಲ. ಬದಲಾಗಿ CWRC ಹೇಳಿದ್ದೇ ಸರಿ ಎಂದಿತ್ತು. ಸುಪ್ರೀಂಕೋರ್ಟ್‌ ಪ್ರಾಧಿಕಾರ ಹೇಳಿದ್ದು ಸರಿ ಇರುತ್ತದೆ ಎಂದಿತ್ತು. ಸಮಿತಿ ಏನು ಹೇಳುತ್ತದೋ ಅದನ್ನೇ ಪಾಲಿಸುವ ಪ್ರಾಧಿಕಾರದ ನಡೆಯನ್ನು ಈಗ ಸುಪ್ರೀಂಕೋರ್ಟ್‌ ನಲ್ಲಿ ಪ್ರಶ್ನಿಸಬೇಕಾಗಿದೆ.

ಎರಡೂ ರಾಜ್ಯಗಳಿಗೆ ಸೇರದ ಸ್ವತಂತ್ರ ಸಮಿತಿಯೊಂದನ್ನು ರಚಿಸಿ ರಾಜ್ಯಗಳ ನೀರಿನ ಪರಿಸ್ಥಿತಿಯ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಲು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಬೇಕಾಗಿದೆ.

Exit mobile version