Site icon Vistara News

Cauvery Dispute : 5 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಕಡ್ಡಾಯ; ಕಾವೇರಿ ಪ್ರಾಧಿಕಾರ ಆದೇಶ, ರಾಜ್ಯಕ್ಕೆ ಮತ್ತೆ ಹಿನ್ನಡೆ

cauvery water dispute

ನವದೆಹಲಿ: ಮುಂದಿನ ಹದಿನೈದು ದಿನಗಳ ಕಾಲ ತಮಿಳುನಾಡಿಗೆ ಪ್ರತಿ ನಿತ್ಯ ಐದು ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೋಮವಾರ ನೀಡಿದ್ದ ಆದೇಶವನ್ನು ಮಂಗಳವಾರ ದಿಲ್ಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ (CWMA) ಸಭೆ ಎತ್ತಿಹಿಡಿದಿದೆ. ಇದರೊಂದಿಗೆ ಕರ್ನಾಟಕ (karnataka State) ನೀರು ಬಿಡಲೇಬೇಕಾದ ಒತ್ತಡಕ್ಕೆ ಒಳಗಾಗಿದೆ. ಇದರ ಜತೆಗೆ ಸೆಪ್ಟೆಂಬರ್‌ 1ರಂದು ನಡೆಯುವ ಸುಪ್ರೀಂಕೋರ್ಟ್‌ನ (Supreme Court) ವಿಶೇಷ ಪೀಠದ ಮುಂದೆ ತನ್ನ ವಿವರಣೆಯನ್ನು (Cauvery Dispute) ನೀಡಬಹುದಾಗಿದೆ.

ಮಂಗಳವಾರ ದಿಲ್ಲಿಯಲ್ಲಿ ಎಸ್ ಕೆ ಹಲ್ದಾರ್ ನೇತೃತ್ವದಲ್ಲಿ ನಡೆದ ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ತಮ್ಮ ತಮ್ಮ ವಾದವನ್ನು ಮಂಡಿಸಿದವು. ಕರ್ನಾಟಕದ ಪರವಾಗಿ ಹಿರಿಯ ಅಧಿಕಾರಿ ರಾಕೇಶ್‌ ಸಿಂಗ್‌ ವರ್ಚುವಲ್‌ ಆಗಿ ಭಾಗವಹಿಸಿದ್ದರೆ, ತಮಿಳುನಾಡಿನ ಪರವಾಗಿ ಅಲ್ಲಿನ ಎಸಿಎಸ್‌ ಸಂದೀಪ್ ಸಕ್ಸೇನಾ ಭಾಗಿಯಾಗಿದ್ದರು.

ಕರ್ನಾಟಕವು ಜೂನ್ 1ರಿಂದ ಆಗಸ್ಟ್ 27ರ ವರೆಗೆ 80 ಟಿಎಂಸಿ ನೀರು ಬಿಡಬೇಕಾಗಿತ್ತು. ಆದರೆ, ಇದುವರೆಗೆ (ಆಗಸ್ಟ್‌ 27ರವರೆಗೆ) ಕರ್ನಾಟಕ 30.17 ಟಿಎಂಸಿ ನೀರು ಮಾತ್ರ ಬಿಟ್ಟಿದೆ. ಕಾವೇರಿ ಕಾವೇರಿ ನೀರು ನಿಯಂತ್ರಣ ಸಮಿತಿ ಪ್ರತಿ ನಿತ್ಯ 5000 ಕ್ಯೂಸೆಕ್‌ ನೀರು ಬಿಡುಗಡೆಗೆ ಸೂಚಿಸಿದೆ ಎಂದು ತಮಿಳುನಾಡಿನ ಅಧಿಕಾರಿಗಳು ವಿವರಿಸಿದರು. ಕರ್ನಾಟಕದ ಅಧಿಕಾರಿಗಳು ನೀರು ಬಿಡಲು ಸಾಧ್ಯವಾಗದ ಅಸಹಾಯಕತೆಯನ್ನು ವಿವರಿಸಿದರು. ಅಂತಿಮವಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೋಮವಾರ ಹೊರಡಿಸಿದ ಆದೇಶವನ್ನು ಪ್ರಾಧಿಕಾರ ಎತ್ತಿ ಹಿಡಿಯಿತು. ಮುಂದಿನ 15 ದಿನಕ್ಕೆ ಅನ್ವಯ ಆಗುವಂತೆ ದಿನಕ್ಕೆ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ಸೂಚಿಸಿತು.

ಕರ್ನಾಟಕ, ತಮಿಳುನಾಡು ಮಧ್ಯೆ ನೀರು ಸಂಕಷ್ಟ

ಸುಪ್ರೀಂ ಕೋರ್ಟ್ ಅಂತಿಮ ತೀರ್ಪಿನ ಪ್ರಕಾರ ವರ್ಷಕ್ಕೆ 177 ಟಿಎಂಸಿ ನೀರನ್ನು ರಾಜ್ಯ ತಮಿಳುನಾಡಿಗೆ ಹರಿಸಬೇಕು. ವಿಶೇಷವಾಗಿ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಿನ ನೀರು ಬಿಡುಗಡೆ ಆಗಬೇಕು. ಈ ಹಿನ್ನೆಲೆಯಲ್ಲಿ ತಮಿಳುನಾಡು ಪ್ರತಿನಿತ್ಯ 24000 ಕ್ಯೂಸೆಕ್ ನೀರು ಕೇಳಿತ್ತು. ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಈಗಾಗಲೇ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ಪ್ರಗತಿಯ ಹಂತದಲ್ಲಿದೆ.

ಆಗಸ್ಟ್ 10ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ 10000 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿತ್ತು. ಆದರೆ ಈ ಆದೇಶವನ್ನ ವಿರೋಧಿಸಿ, ಅವತ್ತು ನಡೆದಿದ್ದ ಸಭೆಯನ್ನು ತಮಿಳುನಾಡು ಬಹಿಷ್ಕರಿಸಿತ್ತು. ಅದಾದ ಬಳಿಕ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಈ ನಡುವೆ ಸುಪ್ರೀಂಕೋರ್ಟ್‌ ಕಾವೇರಿ ಪೀಠವೊಂದನ್ನು ಸ್ಥಾಪನೆ ಮಾಡಿದ್ದಲ್ಲದೆ, ಕಾವೇರಿ ಪ್ರಾಧಿಕಾರದಲ್ಲಿ ವಿವಾದವನ್ನು ತೀರ್ಮಾನ ಮಾಡಿಕೊಂಡು ಬನ್ನಿ ಎಂದು ಹೇಳಿ ವಿಚಾರಣೆಯನ್ನು ಸೆಪ್ಟೆಂಬರ್‌ 1ಕ್ಕೆ ಮುಂದೂಡಿತ್ತು.

ಈ ನಡುವೆ, ಸೋಮವಾರ ಸಭೆ ನಡೆಸಿದ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕವು ಮುಂದಿನ 15 ದಿನಗಳ ಕಾಲ ದಿನಕ್ಕೆ 5 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು ಎಂದು ಸೂಚಿಸಿತ್ತು. ಮಂಗಳವಾರ ನಡೆದ ಪ್ರಾಧಿಕಾರದ ಸಭೆ ಇದನ್ನು ಎತ್ತಿ ಹಿಡಿದಿದೆ.

ಹಿಂದಿನ ಸುದ್ದಿ: Cauvery dispute : ತ.ನಾಡಿಗೆ ನಿತ್ಯ 5000 ಕ್ಯೂಸೆಕ್‌ ನೀರು ಹರಿಸಲು CWRC ಆದೇಶ; Don’t worry, ಬಿಡಬೇಕೆಂದೇನೂ ಇಲ್ಲ!

ಕರ್ನಾಟಕಕ್ಕೆ ಈಗ ಉಳಿದಿರುವ ದಾರಿ ಏನು?

ಕಾವೇರಿ ನದಿ ಪ್ರಾಧಿಕಾರದ ಆದೇಶವೇ ಬಹುತೇಕ ಅಂತಿಮ ಎಂಬ ಪರಿಸ್ಥಿತಿ ಈಗ ಇದೆ. ಆದರೆ, ಈಗ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಸೆಪ್ಟೆಂಬರ್‌ 1ರಂದು ಕರ್ನಾಟಕ ಅಲ್ಲಿ ತನ್ನ ವಾದವನ್ನು ಮಂಡಿಸಲು ಅವಕಾಶವಿದೆ.

ರಾಜ್ಯದಲ್ಲಿ ಈಗ ಮಳೆಯೇ ಇಲ್ಲದೆ ಜಲಾಶಯಗಳು ಬರಿದಾಗಿವೆ. ತಮಿಳುನಾಡಿಗೆ ಬಿಡುವುದಕ್ಕಿಂತ ಕುಡಿಯುವ ನೀರಿಗೇ ಸಂಕಷ್ಟ ಎದುರಾಗುವ ಸ್ಥಿತಿ ಇದೆ. ಹೀಗಾಗಿ ಈ ಪರಿಸ್ಥಿತಿಯನ್ನು ಸುಪ್ರೀಂಕೋರ್ಟ್‌ ಮುಂದೆ ಮಂಡಿಸಿ ಅಧ್ಯಯನ ಸಮಿತಿ ರಚನೆಗೆ ಆಗ್ರಹಿಸಬಹುದಾಗಿದೆ. ಪ್ರಾಧಿಕಾರದ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿ ಅಲ್ಲಿ ಉತ್ತರ ನೀಡಬಹುದಾಗಿದೆ. ಹೀಗಾಗಿ ತಕ್ಷಣವೇ ನೀರು ಬಿಡುಗಡೆ ಮಾಡಬೇಕಾದ ಬಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

Exit mobile version