Site icon Vistara News

Cauvery dispute: ಇದೆಂಥಾ ಅನ್ಯಾಯ, ಮತ್ತೆ 15 ದಿನ 5000 ಕ್ಯೂಸೆಕ್‌ ನೀರು ಬಿಡಲು CWRC ಆದೇಶ; ಹೇಳೋರು ಕೇಳೋರು ಯಾರೂ ಇಲ್ವ?

Cauvery protest

ಬೆಂಗಳೂರು: ತಾನು ಮಳೆ ಇಲ್ಲದೆ ಬವಣೆಪಡುತ್ತಿದ್ದರೂ ಕಾನೂನು, ನಿಯಮಪಾಲನೆ ಹೆಸರಿನಲ್ಲಿ ಆದೇಶಗಳನ್ನು ಪಾಲಿಸುತ್ತಾ, ಹೇಳಿದಷ್ಟು ನೀರು ಬಿಡುತ್ತಾ ಬಂದಿದ್ದ ರಾಜ್ಯಕ್ಕೆ ಅತಿದೊಡ್ಡ ಅನ್ಯಾಯ ಮಾಡಲಾಗಿದೆ. ಬಗ್ಗಿದವನಿಗೆ ಗುದ್ದು ಹೆಚ್ಚು ಎಂಬಂತೆ ಮತ್ತೆ ಕರ್ನಾಟಕಕ್ಕೆ ತಾಳಿಕೊಳ್ಳಲಾಗದ (Cauvery dispute) ಹೊಡೆತ ನೀಡಲಾಗಿದೆ. ಈಗಾಗಲೇ ತಮಿಳುನಾಡಿಗೆ ನೀರು ಬಿಟ್ಟು ಸುಸ್ತಾಗಿರುವ ರಾಜ್ಯಕ್ಕೆ ಮತ್ತೆ 15 ದಿನಗಳ ಕಾಲ ಪ್ರತಿ ದಿನ 5000 ಕ್ಯೂಸೆಕ್‌ ನೀರು (5000 cusec water per day) ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water regulation Committee) ಆದೇಶ ನೀಡಿದೆ. ಮಂಗಳವಾರ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಕರ್ನಾಟಕದ (karnataka state) ಸಂಕಟವನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ.

ಕಳೆದ ಆಗಸ್ಟ್‌ 29ರಂದು ಇದೇ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮುಂದಿನ 15 ದಿನಗಳ ಕಾಲ ಪ್ರತಿ ದಿನ 5000 ಕ್ಯೂಸೆಕ್‌ ನೀರು ಬಿಡಬೇಕು ಎಂದು ಆದೇಶ ನೀಡಿತ್ತು. ಮರುದಿನ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority) ಅದನ್ನು ಎತ್ತಿಹಿಡಿದಿತ್ತು.

ಕರ್ನಾಟಕ ತನ್ನಲ್ಲೇ ನೀರಿಲ್ಲದಿದ್ದರೂ, ತಾನೇ ಸಮಸ್ಯೆಯಲ್ಲಿದ್ದರೂ ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದ ಆದೇಶವನ್ನು ಪಾಲಿಸಿತ್ತು. ಮಂಗಳವಾರ (ಸೆಪ್ಟೆಂಬರ್‌ 11) ನಡೆಯುವ ಸಭೆಯಲ್ಲಾದರೂ ನೀರು ಬಿಡುಗಡೆಯನ್ನು ನಿಲ್ಲಿಸಲು ಆದೇಶ ಬರಬಹುದು, ಕರ್ನಾಟಕದ ಕಣ್ಣೀರಿಗೆ ಬೆಲೆ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಕೂಡಾ ಹುಸಿಯಾಗಿದೆ.

ಹೇಳುವವರೇ ಇಲ್ಲ, ಕೇಳುವವರೇ ಇಲ್ಲದಂತಾಗಿದೆ ಪರಿಸ್ಥಿತಿ

ರಾಜ್ಯದಲ್ಲಿ ಈ ಬಾರಿ ಮಳೆ ಇಲ್ಲದೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವನದಿ ಕಾವೇರಿ ಸಾಮಾನ್ಯವಾಗಿ ಈ ಹೊತ್ತಲ್ಲಿ ಉಕ್ಕಿ ಹರಿಯಬೇಕಿತ್ತು. ಆದರೆ, ಕೆಲವು ಕಡೆ ನೀರೇ ಹರಿಯುತ್ತಿಲ್ಲ. 124 ಅಡಿಗಳ ಗರಿಷ್ಠ ಮಿತಿಯಲ್ಲಿ ತುಂಬಿ ತುಳುಕಬೇಕಾಗಿದ್ದ ಕೆ.ಆರ್‌.ಎಸ್‌ ಜಲಾಶಯದಲ್ಲಿ ಈಗ ಇರುವುದು ಕೇವಲ 97 ಅಡಿ ನೀರು ಮಾತ್ರ. ಟಿಎಂಸಿ ಲೆಕ್ಕಾಚಾರದಲ್ಲಿ ನೋಡಿದರೆ ಕೇವಲ 21 ಟಿಎಂಸಿ.

ಆದರೂ ಕೂಡಾ ತಮಿಳುನಾಡು ಸರ್ಕಾರ ತನ್ನ ಪಾಲಿನ ನೀರು ಎಂದು ಹಠ ಹಿಡಿಯುತ್ತಿದೆ. ಕಳೆದ ಒಂದು ತಿಂಗಳಿನಿಂದ ಜೀವ ಹಿಂಡುತ್ತಿದೆ. ಸಂಕಷ್ಟ ಕಾಲದಲ್ಲಿ ಹೇಗೆ ನೀರು ಬಿಡಬೇಕು ಎನ್ನುವ ಎಲ್ಲ ಸೂತ್ರಗಳೂ ಗಾಳಿಗೊಡ್ಡಿದ ಸೂತ್ರಪಟದಂತಾಗಿವೆ. ಎಲ್ಲ ಸಮಿತಿಗಳು, ಪ್ರಾಧಿಕಾರಗಳು, ತಮಿಳುನಾಡಿನ ಪರವೇ ನಿಂತು ಕರ್ನಾಟಕವನ್ನು ಸತಾಯಿಸುತ್ತಿವೆ.

ಆರಂಭದಿಂದಲೂ ಕಾಡುತ್ತಿರುವ ತಮಿಳುನಾಡು

ನಿಜವೆಂದರೆ ತಮಿಳುನಾಡು ಕಳೆದ ಆಗಸ್ಟ್‌ 20ರಿಂದಲೇ ನೀರಿಗಾಗಿ ಕರ್ನಾಟಕವನ್ನು ಕಾಡುತ್ತಿದೆ. ಮೆಟ್ಟೂರು ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ತನ್ನ ಪಾಲಿನ ಹಕ್ಕು ಎಂಬ ನೆಲೆಯಲ್ಲಿ ಅದು ಕರ್ನಾಟಕವನ್ನು ನೀರಿಗಾಗಿ ಕಾಡುತ್ತಿದೆ. ತನಗೆ ಕರ್ನಾಟಕ ಪ್ರತಿ ದಿನ 20000 ಕ್ಯೂಸೆಕ್‌ ನೀರು ಬಿಡಬೇಕಾಗಿತ್ತು. ಆದರೆ, ಬಿಡುತ್ತಿಲ್ಲ ಎಂದು ಮೊದಲ ತಗಾದೆ ತೆಗೆದಿತ್ತು ತಮಿಳುನಾಡು. ಅದಕ್ಕೆ ಸಾಥ್‌ ನೀಡಿದ ಕಾವೇರಿ ನೀರು ನಿಯಂತ್ರಣ ಮಂಡಳಿ 24000 ಕ್ಯೂಸೆಕ್‌ ಅಲ್ಲದಿದ್ದರೆ 15000 ಕ್ಯೂಸೆಕ್‌ ಆದರೂ ಕೊಡಬೇಕು ಎಂದು ಆದೇಶ ನೀಡಿತ್ತು.

ಆದರೆ, ಕರ್ನಾಟಕ ಇದು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದಾಗ ತಮಿಳುನಾಡು ಸುಪ್ರೀಂಕೋರ್ಟ್‌ ಮೊರೆ ಹೊಕ್ಕಿತ್ತು. ಆದರೆ, ದುರ್ದೈವ. ಸುಪ್ರೀಂಕೋರ್ಟ್‌ ಕೂಡಾ ಕರ್ನಾಟಕದ ವಾದವನ್ನು ಕೇಳಿಸಿಕೊಳ್ಳಲೇ ಇಲ್ಲ. ಕಾವೇರಿ ವಿಚಾರದಲ್ಲಿ ಪ್ರಾಧಿಕಾರದ ನಿಲುವೇ ಅಂತಿಮ ಎಂಬರ್ಥದಲ್ಲಿ ಹೇಳಿಕೆಯೊಂದನ್ನು ನೀಡಿ ಇದರ ವಿಚಾರಣೆ ನಡೆಸಲು ನ್ಯಾಯಮೂರ್ತಿ ಗವಾಯಿ ನೇತೃತ್ವದಲ್ಲಿ ಪೀಠವನ್ನು ರಚನೆ ಮಾಡಿತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ವಸ್ತುಸ್ಥಿತಿ ಅಧ್ಯಯನ ಮಾಡಿ ತನಗೆ ಅಫಿಡವಿಟ್‌ ಸಲ್ಲಿಸಬೇಕು ಎಂದು ಸೂಚಿಸಿತು.

ಮತ್ತೆ ಹೊಡೆತ ನೀಡಿದ ನಿಯಂತ್ರಣ ಸಮಿತಿ

ಈ ನಡುವೆ, ಕಾವೇರಿ ನೀರು ನಿರ್ವಹಣಾ ಸಮಿತಿ ಆಗಸ್ಟ್‌ 29ರಂದು ಆದೇಶವೊಂದನ್ನು ಹೊರಡಿಸಿ 15 ದಿನಗಳ ಕಾಲ ತಲಾ 5000 ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ಸೂಚಿಸಿತು. ಇದನ್ನು ಪ್ರಾಧಿಕಾರ ಎತ್ತಿಹಿಡಿಯಿತು. ತಮಿಳುನಾಡಿನ ದಾಕ್ಷಿಣ್ಯಕ್ಕೆ ಬಿದ್ದ ಕರ್ನಾಟಕ ಅಂದಿನಿಂದ ಪ್ರತಿ ದಿನವೂ 5000 ಕ್ಯೂಸೆಕ್‌ ನೀರು ಬಿಡುತ್ತಲೇ ಇದೆ. ಇತ್ತ ಆಗಸ್ಟ್‌ 31ರಂದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ನೀಡಿದ ಪ್ರಾಧಿಕಾರ, ಕರ್ನಾಟಕಕ್ಕೆ ನೀರಿನ ಸಮಸ್ಯೆ ಇದೆ. ಆದರೂ ನೀರು ಹರಿಸುತ್ತಿದೆ ಎಂಬ ಪಾಸಿಟೀವ್‌ ನೋಟ್‌ನ್ನು ಇಟ್ಟಿತು.

ಸುಪ್ರೀಂಕೋರ್ಟ್‌ ವಿಚಾರಣೆ ನಡೆಯಲೇ ಇಲ್ಲ!

ದುರಂತವೆಂದರೆ ಕರ್ನಾಟಕ ಈ ಎಲ್ಲ ಸಮಸ್ಯೆಗಳಿಗೆ ಸುಪ್ರೀಂಕೋರ್ಟ್‌ನಲ್ಲಿ ಒಂದು ಪರಿಹಾರ ಸಿಗಬಹುದು. ನ್ಯಾಯ ಕೊಡಬಹುದು ಎಂಬ ನಿರೀಕ್ಷೆಯಲ್ಲಿತ್ತು. ಆದರೆ, ವಿಚಾರಣೆ ಎರಡು ಬಾರಿ ಮುಂದೂಡಲ್ಪಟ್ಟಿದ್ದು, ದೊಡ್ಡ ಹೊಡೆತವಾಗಿ ಪರಿಣಮಿಸಿತು

ಸೆ. 1ರಂದು ವಿಚಾರಣೆ ನಡೆಯಬೇಕಾಗಿತ್ತು. ಆದರೆ, ಅಂದು ಸಂವಿಧಾನದ 370ನೇ ವಿಧಿ ರದ್ದತಿ ಕುರಿತ ವಾದ ವಿವಾದಗಳನ್ನು ಆಲಿಸುವ ಪೀಠದ ಕಲಾಪವೂ ಇತ್ತು. ಕಾವೇರಿ ಪೀಠದಲ್ಲಿರುವ ನ್ಯಾ. ಗವಾಯಿ ಅವರು ಅದರಲ್ಲೂ ಇರುವುದರಿಂದ ವಿಚಾರಣೆಯನ್ನು ಸೆ. 6ಕ್ಕೆ ಮುಂದೂಡಲಾಯಿತು.

ಸೆಪ್ಟೆಂಬರ್‌ ಆರಕ್ಕೆ ಮತ್ತೆ ವಿಚಾರಣೆ ನಡೆಯುತ್ತದೆ ಎಂಬ ನಿರೀಕ್ಷೆ ಇದ್ದರೆ, ಅಂದು ಪೀಠದಲ್ಲಿರುವ ಇನ್ನೊಬ್ಬ ನ್ಯಾಯಮೂರ್ತಿ ನರಸಿಂಹ ಅವರು ಗೈರುಹಾಜರಾಗಿದ್ದರು. ಹೀಗಾಗಿ ವಿಚಾರಣೆಯನ್ನು ಸೆಪ್ಟೆಂಬರ್‌ 21ಕ್ಕೆ ಮುಂದೂಡಲಾಗಿದೆ. ಹೀಗಾಗಿ ನ್ಯಾಯ ಕೊಡುವವರೇ ಇಲ್ಲದೆ ಕರ್ನಾಟಕಕ್ಕೆ ಮತ್ತೆ ಅನ್ಯಾಯವಾಗಿದೆ.

ಯಾವ ಮಾತನ್ನೂ ಕೇಳಿಸಿಕೊಳ್ಳದ ನೀರು ನಿಯಂತ್ರಣ ಸಮಿತಿ

ಮಂಗಳವಾರ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯಿತು. ಕಾವೇರಿ ನಿಗಮದ ಹಿರಿಯ ಅಧಿಕಾರಿಗಳು, ಎಂಜಿನಿಯರ್‌ಗಳು ಭಾಗಿಯಾದರು. CWRC ಅಧ್ಯಕ್ಷರು ದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್‌ ನಡೆಸಿದರು.

ಕರ್ನಾಟಕದಿಂದ ಈ ಬಾರಿ ನೀರು (Cauvery Water) ಬಿಡುವುದು ಕಷ್ಟ ಸಾಧ್ಯ. ಕಳೆದ ಎರಡು ಬಾರಿಯೂ ಕಾವೇರಿ ನೀರು ಪ್ರಾಧಿಕಾರ (CWMA) ನೀಡಿದ ಆದೇಶಗಳನ್ನು ಚಾಚು ತಪ್ಪದೇ ಕರ್ನಾಟಕ ಪಾಲಿಸಿದೆ. ಆದರೆ ಕರ್ನಾಟಕದಲ್ಲಿ ಮುಂಗಾರು ಮಳೆಯಾಗಿಲ್ಲದಿರುವುದರಿಂದ ಈಗ ಕುಡಿಯುವ ನೀರಿಗೂ ತೊಂದರೆ ಇದೆ. ಕರ್ನಾಟಕದ ಸ್ಥಿತಿಯನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ಮನವಿ ಮಾಡಿದರೂ ಯಾವುದಕ್ಕೂ ಸೊಪ್ಪು ಹಾಕದೆ ನೀರು ಬಿಡಲೇಬೇಕು ಎಂಬ ಆದೇಶವನ್ನು ನೀಡಲಾಗಿದೆ.

ಈ ಬಾರಿ ನೀರು ಬಿಟ್ಟರೆ ಅಷ್ಟೆ: ರೈತರ ಎಚ್ಚರಿಕೆ

ಕಳೆದ ಬಾರಿ ಪ್ರತಿ ದಿನ ಐದು ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಮಾಡಿ ಎಂದಾಗಲೇ ಪ್ರತಿರೋಧ ಒಡ್ಡದೆ ಪಾಲನೆ ಮಾಡಿದ್ದು ಕರ್ನಾಟಕಕ್ಕೆ ಮುಳುವಾಗಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷವಾಗಿರುವ ಡಿಎಂಕೆ ಆಡಳಿತದಲ್ಲಿರುವುದರಿಂದ ಅದರ ಹಿತಾಸಕ್ತಿಗಾಗಿ ರಾಜ್ಯದ ರೈತರ ಹಿತಾಸಕ್ತಿಯನ್ನು ಬಲಿ ಕೊಟ್ಟು ನೀರು ಬಿಡಲಾಗುತ್ತಿದೆ ಎಂಬ ಆರೋಪ ಕಾಂಗ್ರೆಸ್‌ ಸರ್ಕಾರಕ್ಕೆ ಎದುರಾಗಿತ್ತು.

ಮಂಡ್ಯ ಜಿಲ್ಲೆಯ ರೈತರ ಸಿಡಿದೆದ್ದು ಪ್ರತಿಭಟನೆ ನಡೆಸಿದ್ದರು. ಈ ಬಾರಿ ಏನಾದರೂ ಮತ್ತೆ ಆದೇಶ ಪಾಲನೆ ಹೆಸರಲ್ಲಿ ನೀರು ಬಿಟ್ಟರೆ ದೊಡ್ಡ ಪ್ರಮಾಣದ ಗಲಭೆ ಹುಟ್ಟಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. ಮಂಡ್ಯದ ಜನ ನೀರು ನಿಯಂತ್ರಣ ಸಮಿತಿ ಆದೇಶವನ್ನು ಅದಕ್ಕೆ ಸರ್ಕಾರ ನೀಡುವ ಪ್ರತಿಕ್ರಿಯೆಯನ್ನು ನೋಡಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದರು. ಹೀಗಾಗಿ ಈ ಬಾರಿ ದೊಡ್ಡ ಮಟ್ಟದ ಹೋರಾಟ ನಡೆಯುವುದು ಖಚಿತವಾಗಿದೆ. ರಾಜ್ಯ ಸರ್ಕಾರ ಈ ಬಾರಿ ಸೆಟೆದು ನಿಲ್ಲದೆ ಹೋದರೆ ಜನ ರೊಚ್ಚಿಗೇಳುವುದು ಖಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

Exit mobile version