ಮಂಡ್ಯ: ತಮಿಳುನಾಡಿಗೆ ಹದಿನೈದು ದಿನಗಳ ವರೆಗೆ ಪ್ರತೀ ದಿನ 5 ಸಾವಿರ ಕ್ಯೂಸೆಕ್ ನೀರು (5 thousand Cusec water) ಹರಿಸಲು ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ (Cauvery Water Management Authority) ಆದೇಶ ನೀಡಿದೆ. ಕಾವೇರಿ ನೀರು ನಿರ್ವಹಣಾ ಸಮಿತಿ (Cauvery Water Regulatory Committee) ನೀಡಿದ ಆದೇಶವನ್ನೇ ಅದು ಎತ್ತಿಹಿಡಿದಿದೆ. ರಾಜ್ಯ ಸರ್ಕಾರ ಈ ಆದೇಶವನ್ನು ತಕ್ಷಣಕ್ಕೆ ಪಾಲಿಸಬೇಕಾಗಿಲ್ಲ. ಸೆಪ್ಟೆಂಬರ್ 1ರಂದು ಸುಪ್ರೀಂಕೋರ್ಟ್‌ನ ಕಾವೇರಿ ಪೀಠದಲ್ಲಿ ನಡೆಯಲಿರುವ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ತನ್ನ ನಿಲುವನ್ನು ಸ್ಪಷ್ಟಪಡಿಸಬಹುದಾಗಿದೆ.
ನಿಜವೆಂದರೆ, ರಾಜ್ಯದಲ್ಲಿ ಮಳೆ ಇಲ್ಲದೆ ನೀರೇ ಇಲ್ಲ. ಹಾಗಿರುವಾಗ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕು ಎಂಬ ಆದೇಶವನ್ನು ಪಾಲಿಸುವುದು ಕಷ್ಟ ಸಾಧ್ಯ. ಇದನ್ನು ಸರ್ಕಾರ ಸಮರ್ಥವಾಗಿ ವಿವರಿಸಿದರೆ ಮಾತ್ರ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಬಹುದು. ಇಲ್ಲವಾದರೆ ಅಲ್ಲೂ ನೀರು ಬಿಡುಗಡೆಯ ಆದೇಶವೇ ಹೊರಬೀಳಬಹುದು.
ನಿಜಕ್ಕೂ ನಮ್ಮ ಅಣೆಕಟ್ಟಿನ ಪರಿಸ್ಥಿತಿ ಹೇಗಿದೆ, ಕಾವೇರಿ ಪ್ರಾಧಿಕಾರ ಬಿಡಲು ಹೇಳಿದಷ್ಟು ನೀರು ನಮ್ಮ ಬಳಿ ಇದೆಯಾ? ಇಲ್ಲಿದೆ ಕೆಆರ್‌ಎಸ್‌ನ ಪರಿಸ್ಥಿತಿ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರೊ ಕೆ ಆರ್ ಎಸ್ ಡ್ಯಾಂನಲ್ಲಿ ಈಗ ಒಳಹರಿವು ಇರುವುದು ಕೇವಲ 1891 ಕ್ಯೂಸೆಕ್. ಅದೇ ಹೊರ ಹರಿವು 2343 ಕ್ಯುಸೆಕ್ ಇದೆ.
ಅಣೆಕಟ್ಟಿನ ಗರಿಷ್ಠ ಮಟ್ಟ 124.80 ಅಡಿ
ಇಂದಿನ (ಆಗಸ್ಟ್ 29) ಮಟ್ಟ 101.82 ಅಡಿ
ಟಿಎಂಸಿ ಲೆಕ್ಕದಲ್ಲಿ ಗರಿಷ್ಠ 49.452 ಟಿಎಂಸಿ
ಇಂದು (ಆಗಸ್ಟ್ 29) ಇರುವ ನೀರು 24.27 ಟಿಎಂಸಿ
ಒಟ್ಟು ನೀರಿನ ಪೈಕಿ 4.40 tmc ನೀರು ಡೆಡ್ ಸ್ಟೋರೇಜ್
ಬಳಕೆಗೆ ಯೋಗ್ಯವಿರುವುದು ಕೇವಲ 20 ಟಿಎಂಸಿ ಮಾತ್ರ
ಈಗ ಕೆಆರ್‌ಎಸ್ ಡ್ಯಾಂನಿಂದ 2293 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.
ಒಂದು ವೇಳೆ ಪ್ರಾಧಿಕಾರದ ಆದೇಶದ ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ಹದಿನೈದು ದಿನಗಳ ವರೆಗೆ ಹರಿಸಿದ್ದೇ ಆದರೆ ಒಟ್ಟು 6.25 ಟಿಎಂಸಿ ನೀರು ಬಿಟ್ಟ ಹಾಗೆ ಆಗುತ್ತದೆ. ಈಗಿನ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಆಗ ಕೆಆರ್‌ಎಸ್‌ನಲ್ಲಿನ ನೀರಿನ ಪ್ರಮಾಣ ತಳ ಹಿಡಿಯುವುದು ಗ್ಯಾರಂಟಿ. ರಾಜ್ಯಕ್ಕೆ ಬೆಳೆಗೆ ಬಿಡಿ ಕುಡಿಯುವ ನೀರಿಗೂ ತತ್ವಾರ ಎದುರಾಗಲಿದೆ.
ಪ್ರಾಧಿಕಾರದ ಆದೇಶದ ವಿರುದ್ಧ ಮಂಡ್ಯ ರೈತರ ಆಕ್ರೋಶ
ಈ ನಡುವೆ ಕಾವೇರಿ ಪ್ರಾಧಿಕಾರದ ಆದೇಶದ ವಿರುದ್ಧ ಮಂಡ್ಯದ ರೈತರು ಸಿಟ್ಟಿಗೆದಿದ್ದಾರೆ. ʻʻಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿನ ಒತ್ತಡಕ್ಕೆ ಮಣಿಯಬಾರದು. ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಸರ್ಕಾರದ ಜೊತೆಗೆ ನಾವು ಇರುತ್ತೇವೆ. ಒಂದು ವೇಳೆ ನೀರು ಬಿಟ್ಟಿದ್ದೇ ಆದ್ರೆ ಉಗ್ರ ಹೋರಾಟ ಮಾಡುತ್ತೇವೆʼʼ ಎಂದು ರೈತರು ಹೇಳಿದ್ದಾರೆ.
ʻʻಹೋರಾಟದ ರೂಪು ರೇಷೆಗಳ ಬಗೆಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ. ಆದರೆ, ಯಾವ ಕಾರಣಕ್ಕೂ ಯಾವುದೇ ಕಾರಣಕ್ಕೂ ನೀರು ಬಿಡಬಾರದುʼʼ ಎಂದು ರೈತ ನಾಯಕರಾದ ಹನಿಯಂಬಾಡಿ ನಾಗರಾಜು,
ಇಂಡುವಾಳು ಸಿದ್ದೇಗೌಡ, ಜಯರಾಮು ಮತ್ತು ಅಣ್ಣಯ್ಯ ಅವರು ಹೇಳಿದ್ದಾರೆ.
ಇದನ್ನೂ ಓದಿ: Cauvery Dispute : 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಕಡ್ಡಾಯ; ಕಾವೇರಿ ಪ್ರಾಧಿಕಾರ ಆದೇಶ, ರಾಜ್ಯಕ್ಕೆ ಮತ್ತೆ ಹಿನ್ನಡೆ
ಒಂದೇ ಒಂದು ಕ್ಯೂಸೆಕ್ ನೀರು ಬಿಡಬಾರದು ಎಂದ ಶಾಸಕ
ಕಾವೇರಿ ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡಬಾರದು. 5000 ಅಲ್ಲ, ಒಂದೇ ಒಂದು ಕ್ಯೂಸೆಕ್ ನೀರು ಕೂಡಾ ಬಿಡುಗಡೆ ಮಾಡಬಾರದು ಎಂದು ಶಾಸಕ ರವಿ ಕುಮಾರ್ ಆಗ್ರಹಿಸಿದ್ದಾರೆ.
ʻʻಬೆಳಗಾದ್ರೆ ಜನರಿಂದ ಪೋನ್ ಬರುತ್ತದೆ. ಒಂದು ಇಂಚು ನೀರನ್ನು ಬಿಡಬಾರದು ಎಂದು ಜನ ಒತ್ತಾಯಿಸುತ್ತಿದ್ದಾರೆ. ಸಿ ಎಂ ಅವರು ತಮಿಳುನಾಡಿನ ಒತ್ತಡಕ್ಕೆ ಮಣಿಯಬಾರದು. ಅದೇನಾಗುತ್ತೊ ನೋಡೋಣʼʼ ಎಂದು ರವಿಕುಮಾರ್ ಹೇಳಿದ್ದಾರೆ.
ʻʻತಮಿಳುನಾಡಿನ ಮೆಟ್ಟೂರ್ ಡ್ಯಾಂ ನಲ್ಲಿ ನೀರು ಎಷ್ಟಿದೆ ಎಂಬುದನ್ನು ಮೊದಲು ಅರಿಯಬೇಕುʼʼ ಎಂದು ಸಲಹೆ ನೀಡಿರುವ ಅವರು, ನಾನು ಮೈಸೂರಿಗೆ ತೆರಳಿ ಸಿಎಂ ಮತ್ತು ಡಿಸಿಎಂ ಜೊತೆ ಮಾತನಾಡುತ್ತೇನೆʼʼ ಎಂದಿದ್ದಾರೆ.
ʻʻಜನ ನಮಗೆ ಓಟ್ ಹಾಕಿರೋದಕ್ಕೆ ನಾನು ಎಂ ಎಲ್ ಎ ಆಗಿರೋದು. ನಾನು ಯಾವಾಗಲೂ ಜನಪರವಾಗಿರ್ತೀನಿʼʼ ಎಂದು ಅವರು ಹೇಳಿದರು.