ಹೊಸದಿಲ್ಲಿ: ಬಿಗಡಾಯಿಸಿರುವ ಕಾವೇರಿ ನದಿ ನೀರು ಹಂಚಿಕೆ (Cauvery Dispute) ವಿವಾದದ ಮಹತ್ವದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ (Supreme court) ವಿಚಾರಣೆಗೆ ಎತ್ತಿಕೊಳ್ಳಲಿದೆ. ಕರ್ನಾಟಕ – ತಮಿಳುನಾಡು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಇಂದು ನ್ಯಾ.ಬಿ.ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ.
ಬೆಳಿಗ್ಗೆ 10.30ಕ್ಕೆ ಪ್ರಕರಣದ ವಿಚಾರಣೆಯನ್ನು ಪೀಠ ನಡೆಸಲಿದ್ದು, ಸದ್ಯ ಕಾವೇರಿ ವಿಚಾರಣೆಯತ್ತ ಎಲ್ಲರ ಚಿತ್ತ ಹರಿದಿದೆ. ಇಂದಿನ ವಿಚಾರಣೆ ವೇಳೆ ಕರ್ನಾಟಕ ತನ್ನ ಬಿಕ್ಕಟ್ಟಿನ ಸ್ಥಿತಿಯನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಲು ಮುಂದಾಗಲಿದೆ. ಸೆ.26ರ ತನಕ ತಮಿಳುನಾಡಿಗೆ ದಿನಕ್ಕೆ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ CWMA ನೀಡಿರುವ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದೆ.
ಕಾವೇರಿ ಪ್ರಾಧಿಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು; ರಾಜ್ಯದಲ್ಲಿನ ವಸ್ತುಸ್ಥಿತಿ ಅರಿತುಕೊಳ್ಳುವಲ್ಲಿ ಪ್ರಾಧಿಕಾರ ವಿಫಲವಾಗಿದೆ. ಒಳಹರಿವು ಕಡಿಮೆಯಾಗಿರುವುದರಿಂದ ನೀರು ಹರಿಸುವುದು ಕಷ್ಟವಾಗುತ್ತಿದೆ. ಪ್ರಾಧಿಕಾರ ನೀಡಿರುವ ಹಿಂದಿನ ಎಲ್ಲಾ ಆದೇಶಗಳನ್ನು ನಾವು ಪಾಲಿಸಿದ್ದೇವೆ ಎಂದು ರಾಜ್ಯ ವಿವರಿಸಿದೆ.
CWMA ಆದೇಶ ಪಾಲನೆ ಮಾಡುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯ ಆಗಿದ್ದು, ಆದೇಶ ಪಾಲನೆಯನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ನೀರು ಬಿಡುಗಡೆಗೆ ಸಂಬಂಧಿಸಿ ಪ್ರಾಧಿಕಾರ ನೀಡಿರುವ ಎಲ್ಲಾ ಆದೇಶಗಳನ್ನು ಕರ್ನಾಟಕ ಪಾಲಿಸಿದೆ. ವಿಚಾರಣೆ ವೇಳೆ ಕರ್ನಾಟಕದ ಬಗ್ಗೆ ನ್ಯಾಯಪೀಠಕ್ಕೆ ನಕಾರಾತ್ಮಕ ಅಭಿಪ್ರಾಯ ಬರಬಾರದು ಎಂಬ ಉದ್ದೇಶದಿಂದಲೇ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಇಂದಿನ ವಿಚಾರಣೆ ಅತ್ಯಂತ ಹೆಚ್ಚು ಮಹತ್ವ ಪಡೆದುಕೊಂಡಿದೆ.