ನವ ದೆಹಲಿ: ಕಾವೇರಿ ಜಲವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ಮೊದಲೇ ನೀರಿಲ್ಲ ಎಂದು ಪರಿತಪಿಸುತ್ತಿರುವ ಹೊತ್ತಿನಲ್ಲಿ ಮತ್ತೆ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ – Cauvery Water Management Authority – CWMA) ಆದೇಶಿಸಿದೆ. ಮುಂದಿನ 15 ದಿನಗಳ ವರೆಗೆ ಈ ಆದೇಶ ಚಾಲ್ತಿಯಲ್ಲಿರಲಿದೆ.
ನವ ದೆಹಲಿಯಲ್ಲಿ ನಡೆಯುತ್ತಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ನಡೆಸಲಾಗಿದ್ದು, ಕೇರಳ ಮತ್ತು ತಮಿಳುನಾಡು ಅಧಿಕಾರಿಗಳು ಖುದ್ದು ಸಭೆಗೆ ಹಾಜರಾಗಿದ್ದರು. ಆದರೆ, ಕರ್ನಾಟಕ ಹಾಗೂ ಪುದುಚೆರಿ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.
ಈ ವೇಳೆ ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ಅಧಿಕಾರಿಗಳು ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ – CAUVERY WATER MANAGEMENT AUTHORITY) ನೀಡಿರುವ ಆದೇಶವನ್ನು ಕರ್ನಾಟಕ ಪಾಲನೆ ಮಾಡಿಲ್ಲ ಎಂದು ಆರೋಪ ಮಾಡಿದೆ. ತಮಗೆ ನಿತ್ಯ 12,500 ಕ್ಯೂಸೆಕ್ ನೀರು ಬಿಡುವಂತೆ ತಮಿಳುನಾಡು ಪಟ್ಟು ಹಿಡಿದಿತ್ತು.
ಈ ವೇಳೆ ವಿಡಿಯೊ ಕಾನ್ಫರೆನ್ಸ್‌ನಲ್ಲಿದ್ದ (Video conference meeting) ಕರ್ನಾಟಕದ ಅಧಿಕಾರಿಗಳು, ನಮ್ಮ ಕಾವೇರಿ ಕಣಿವೆಯಲ್ಲಿ ನೀರಿಲ್ಲ. ಬರ ಪರಿಸ್ಥಿತಿ ಬಂದೊದಗಿದೆ. ಈ ಕಾರಣಕ್ಕೆ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ವಾದವನ್ನು ಮಂಡಿಸಿದ್ದಾರೆ. ಆದರೆ, ತಮಿಳುನಾಡು ಅಧಿಕಾರಿಗಳು, ಕರ್ನಾಟಕದಿಂದ ಆದೇಶ ಪಾಲನೆ ಆಗಿಲ್ಲ ಎಂಬ ವಾದವನ್ನು ಪದೇ ಪದೇ ಮಂಡಿಸಿದ್ದಾರೆ. ಈಗಾಗಲೇ ನಿತ್ಯ 5 ಸಾವಿರ ಕ್ಯೂಸೆಕ್ ಬಿಡುವಂತೆ ಶಿಫಾರಸು ಮಾಡಲಾಗಿತ್ತು ಎಂದು ಸಹ ಉಲ್ಲೇಖಿಸಿದೆ.
ಮತ್ತೆ 15 ದಿನ 5 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ
ಈ ವೇಳೆ ವಾದ – ಪ್ರತಿವಾದವನ್ನು ಆಲಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿಯು ನೀಡಿದ್ದ ಆದೇಶವನ್ನು ಮುಂದುವರಿಸಿದೆ. ಮುಂದಿನ 15 ದಿನಗಳ ಕಾಲ 5000 ಕ್ಯೂಸೆಕ್ ನೀರು ಬಿಡುವಂತೆ ಆದೇಶದಲ್ಲಿ ಉಲ್ಲೇಖಿಸಿದೆ.
ಸೆಪ್ಟೆಂಬರ್ 13ರಿಂದಲೇ ಲೆಕ್ಕ
ಮುಂದಿನ 15 ದಿನದವರೆಗೆ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂಬ ಆದೇಶವನ್ನು ನೀಡಲಾಗಿದೆ. ಆದರೆ, ಈ ಲೆಕ್ಕವನ್ನು ಸೆ. 13ರಿಂದ ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: Murder Case : ತವರು ಮನೆ ಸೇರಿದ್ದ ಹೆಂಡ್ತಿಗೆ ಗುಂಡು ಹೊಡೆದು ಕೊಂದಿದ್ದ ಪಾಪಿ ಆತ್ಮಹತ್ಯೆಗೆ ಶರಣು!
ರಾಜ್ಯ ಸರ್ಕಾರದ ನಿರ್ಣಯ ಏನು?
ನಮ್ಮ ಕಾವೇರಿ ನದಿಯಲ್ಲಿಯೇ ನೀರಿಲ್ಲ, ಹೀಗಾಗಿ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಎರಡು ದಿನಗಳ ಹಿಂದಷ್ಟೇ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀರ್ಮಾನಿಸಿದ್ದರು. ಆದರೆ, ಈಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು 5 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚನೆ ನೀಡಿರುವುದನ್ನು ರಾಜ್ಯ ಸರ್ಕಾರ ಪಾಲನೆ ಮಾಡುತ್ತದೆಯೇ? ಅಥವಾ ಸೆಡ್ಡು ಹೊಡೆದು ನಿಲ್ಲುತ್ತದೆಯೇ ಎಂಬ ಕುತೂಹಲ ಮೂಡಿದೆ. ಅಲ್ಲದೆ, ಮಂಡ್ಯ ಭಾಗದ ರೈತರು, ವಿರೋಧ ಪಕ್ಷಗಳ ನಾಯಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಈಗಾಗಲೇ ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಂದಿನ ನಡೆ ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ.