Site icon Vistara News

CBI FIR: ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಹಿಂದಿನ ಮಂಡಳಿ ವಿರುದ್ಧ ಸಿಬಿಐ ಎಫ್‌ಐಆರ್‌

CBI registers FIR against erstwhile board of South India Hindi Prachar Sabha in Dharwad

ಧಾರವಾಡ: ಹಿಂದಿ ಭಾಷೆ ಉತ್ತೇಜನಕ್ಕೆ ಕೇಂದ್ರ ಸರ್ಕಾರ ನೀಡಿದ್ದ ಅನುದಾನ ದುರ್ಬಳಕೆ ಆರೋಪ ಕೇಳಿಬಂದಿದ್ದು, ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಹಿಂದಿನ ಮಂಡಳಿ ವಿರುದ್ಧ ಸಿಬಿಐ ಎಫ್‌ಐಆರ್ (CBI FIR) ದಾಖಲು ಮಾಡಿದೆ.

ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಹಿಂದಿನ ಮಂಡಳಿಗೆ ಕಾರ್ಯಾಧ್ಯಕ್ಷರಾಗಿದ್ದ ಶಿವಯೋಗಿ ನೀರಲಕಟ್ಟಿ ಮತ್ತು ಇತರರ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ 5.78 ಕೋಟಿ ರೂಪಾಯಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಇವರ ಮೇಲೆ ಕೇಳಿಬಂದಿದೆ.

ಹಿಂದೆ ಭಾಷೆ ಕಲಿಕಾ ಉತ್ತೇಜನಕ್ಕೆ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಈ ಹಣದಲ್ಲಿ ಹಿಂದಿ ಭಾಷೆಗೆ ಸಂಬಂಧಪಟ್ಟಂತೆ ಕಲಿಕೆ ಹಾಗೂ ತಿಳಿವಳಿಕೆ ಕಾರ್ಯಕ್ರಮಗಳನ್ನು ರೂಪಿಸಿ ಸೂಕ್ತ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕಿತ್ತು. ಆದರೆ, ಆ ಹಣವನ್ನು ಅನ್ಯ ಉದ್ದೇಶಕ್ಕೆ ಮಂಡಳಿಯು ಬಳಸಿಕೊಂಡಿದೆ ಎಂಬ ಆರೋಪ ಕೇಳಿಬಂದಿತ್ತು.

ಶಿಕ್ಷಣ ಸಚಿವಾಲಯದ ಜಾಗೃತ ಅಧಿಕಾರಿ ನೀತಾ ಪ್ರಸಾದ್‌ ಅವರು ಧಾರವಾಡ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಹಿಂದಿನ ಮಂಡಳಿಯವರ ಮೇಲೆ ದೂರು ಸಲ್ಲಿಕೆ ಮಾಡಿದ್ದರು. ಕಳೆದ ವರ್ಷದ ಫೆಬ್ರವರಿಯಲ್ಲಿಯೇ ಅವರು ಸಿಬಿಐಗೆ ದೂರು ನೀಡಿದ್ದರು. ಬಳಿಕ ಇದರ ತನಿಖಾ ಹೊಣೆಯನ್ನು ಮಧುರೈ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಲಾಗಿತ್ತು.

ಇದನ್ನೂ ಓದಿ: Republic Day Tableau : ಯಾವ ಪಕ್ಷದ ಅವಧಿಯಲ್ಲಿ ಹೆಚ್ಚು ಸ್ತಬ್ಧಚಿತ್ರಗಳು ತಿರಸ್ಕೃತ ಆಗಿದ್ದವು? ಇಲ್ಲಿದೆ ಮಾಹಿತಿ

ಮಧುರೈ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಧಾರವಾಡಕ್ಕೆ ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದ್ದರು. ಬಳಿಕ ತನಿಖಾ ವರದಿಯನ್ನು ಸಿದ್ಧಪಡಿಸಿ ನೀಡಿತ್ತು. ಈ ತನಿಖಾ ವರದಿ ಆಧರಿಸಿ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿದೆ. ಈ ಹಿಂದೆ ಸಂಸ್ಥೆಯ ಅಧ್ಯಕ್ಷರಾಗಿದ್ದ ಆರ್‌.ಎಫ್. ನೀರಲಕಟ್ಟಿ, ಕಾರ್ಯಾಧ್ಯಕ್ಷರಾಗಿದ್ದ ಶಿವಯೋಗಿ ನೀರಲಕಟ್ಟಿ ಮೇಲೆ ದೂರು ದಾಖಲಾಗಿದೆ. ಆದರೆ, ಮಾಜಿ ಅಧ್ಯಕ್ಷರು ಈಗಾಗಲೇ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಾಧ್ಯಕ್ಷನ ಮೇಲೆ ದೂರು ದಾಖಲು ಮಾಡಿಕೊಳ್ಳಲಾಗಿದೆ.

Exit mobile version