Site icon Vistara News

Karnataka Election 2023: 80 ವರ್ಷ ಮೇಲ್ಪಟ್ಟ ನಾಗರಿಕರು, ವಿಶೇಷಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ; ಹೇಗಿರಲಿದೆ ಪ್ರಕ್ರಿಯೆ?

CEC rajiv kumar

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೂತ್‌ಗೆ ಬಂದು ಮತದಾನ ಮಾಡಲು ಆಗದ 80 ವರ್ಷ ದಾಟಿದ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಮನೆಯಿಂದಲೇ ಮತ ಚಲಾಯಿಸಲು ಈ ಬಾರಿಯ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ದೇಶದಲ್ಲೇ ಮೊದಲ ಬಾರಿ ಕರ್ನಾಟಕದಲ್ಲಿ ಈ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್‌ ಕುಮಾರ್‌ ತಿಳಿಸಿದ್ದಾರೆ.

ಮನೆಯಲ್ಲೇ ಮತದಾನ ಹೇಗಿರಲಿದೆ?

ಚುನಾವಣಾ ನೋಟಿಫಿಕೇಶನ್‌ ಬಿಡುಗಡೆಯಾಗಿ 5 ದಿನಗಳ ಒಳಗೆ 12D ಅರ್ಜಿಯನ್ನು ಆನ್‌ಲೈನ್‌ ಹಾಗೂ ಆಫ್‌ಲೈನ್‌ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಈ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಅರ್ಹರು ಅದನ್ನು ಸೂಚನೆಯನುಸಾರ ಸಲ್ಲಿಸಬೇಕಿದೆ. ಚುನಾವಣಾ ಆಯೋಗದಿಂದ ಒಪ್ಪಿಗೆ ದೊರೆತ ಬಳಿಕ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತದಾನ ಮಾಡಬಹುದಾಗಿದೆ. ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಿಕೊಡಲಾಗುತ್ತದೆ ಎಂದು ಹೇಳಿದರು.

ನಗರದ ವಿಕಾಸಸೌಧದಲ್ಲಿ ಶನಿವಾರ (ಮಾ. 11) ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 80 ವರ್ಷ ದಾಟಿದ ಹಿರಿಯ ನಾಗರಿಕ ಮತದಾರರ ಸಂಖ್ಯೆ 12.15 ಲಕ್ಷ ಇದೆ. ಹಾಗೆಯೇ ವಿಶೇಷಚೇತನ ಮತದಾರರ ಸಂಖ್ಯೆ 5.55 ಲಕ್ಷ ಇದೆ. ಈ ಮತದಾರರು ಬಯಸಿದರೆ ಮನೆಯಲ್ಲೇ ಮತ ಚಲಾಯಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಸಬಹುದು

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಸಬಹುದು, ಚುನಾವಣಾ ಸಭೆ ಮತ್ತು ರ‍್ಯಾಲಿ ಮಾಡಲು ಆನ್‌ಲೈನ್‌ನಲ್ಲಿ ಅನುಮತಿ ಕೇಳಬಹುದು. ಅಭ್ಯರ್ಥಿಯ ಮೇಲೆ ಆರೋಪಗಳು ಇದ್ದರೆ ಪತ್ರಿಕೆಗಳಲ್ಲಿ ಪ್ರಕಟಣೆ ಕೊಡಬೇಕು. ಪಕ್ಷಗಳು ಸಹ ತಮ್ಮ ಅಭ್ಯರ್ಥಿಯ ವಿರುದ್ಧ ಇರುವ ಆರೋಪಗಳ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಇದನ್ನೂ ಓದಿ | NITI Aayog Task Force: ಗೋಮೂತ್ರ, ಸಗಣಿಯಿಂದ ಮಣ್ಣಿನ ಫಲವತ್ತತೆ ಹೆಚ್ಚಳ; ನೀತಿ ಆಯೋಗ ವರದಿ

ರಾಜ್ಯದಲ್ಲಿ ಒಟ್ಟು 6.1 ಕೋಟಿ ಜನಸಂಖ್ಯೆ ಇದೆ. ಮೇ 24ರ ಒಳಗೆ ಹೊಸ ಸರ್ಕಾರ ಬರಬೇಕಿದೆ. ರಾಜ್ಯದಲ್ಲಿ ಒಟ್ಟು ಮತದಾರರು 5,21,73,599 ಇದ್ದು, 2.62 ಕೋಟಿ ಪುರುಷ, 2.92 ಕೋಟಿ ಮಹಿಳಾ ಮತದಾರರು ಇದ್ದಾರೆ. ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರು 9,17,241, ಲಿಂಗತ್ವ ಅಲ್ಪಸಂಖ್ಯಾತರು 42,312 ಹಾಗೂ ಸರ್ಕಾರಿ ನೌಕರ ಮತದಾರರು 47,779 ಇದ್ದಾರೆ ಎಂದು ಮಾಹಿತಿ ನೀಡಿದರು.

ಒಟ್ಟು 58,282 ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತದೆ. ನಗರ ಪ್ರದೇಶದಲ್ಲಿ 24,063 ಮತಗಟ್ಟೆಗಳ ಸ್ಥಾಪನೆ, ಗ್ರಾಮಾಂತರ ಪ್ರದೇಶದಲ್ಲಿ 34,219 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಒಂದು ಮತಗಟ್ಟೆಯಲ್ಲಿ 883 ಮಂದಿ ಮತ ಚಲಾವಣೆ ಮಾಡಬಹುದು ಎಂದು ತಿಳಿಸಿದರು.

ಗುಜರಾತ್‌ ಚುನಾವಣೆಯಲ್ಲಿ ಇವಿಎಂ ಟ್ಯಾಂಪರಿಂಗ್‌ ಆರೋಪ ತಳ್ಳಿಹಾಕಿದ ಅವರು, ಆ ರೀತಿಯ ಯಾವುದೇ ಸಮಸ್ಯೆ ಆಗಿಲ್ಲ. ಇವಿಎಂಗಳಿಗೆ ಮೂರು ಸುತ್ತಿನ ಭದ್ರತೆ ಒದಗಿಸಲಾಗಿರುತ್ತದೆ. ನಾವು ಯಾವುದೇ ರಾಜ್ಯದ ಚುನಾವಣೆಗೆ ಹೋದಾಗ ಕೆಲ ಸವಾಲುಗಳು ಇರುತ್ತವೆ. ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಕರ್ನಾಟಕದಲ್ಲೂ ಶಾಂತಿಯುತ ಮತದಾನವಾಗುತ್ತದೆ. ಇಲ್ಲೂ ಸಹ ಹಣದ ಹೊಳೆ ಹರಿಯುತ್ತಿರುವುದು ನಮ್ಮ ಗಮನಕ್ಕೆ ಇದೆ. ಅದರ ಕಡಿವಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ | Balija Development Corporation: ಬಲಿಜ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ

ಜೇನು ಕುರುಬ ಮತ್ತು ಕೊರಗ ಬುಡಕಟ್ಟು ಜನರು ಮತದಾನದಲ್ಲಿ ಭಾಗವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಗರ ಪ್ರದೇಶಗಳಲ್ಲಿ ಬಾರಿ ಪ್ರಮಾಣದಲ್ಲಿ ಮತದಾನ ಕಡಿಮೆಯಾಗಿದೆ. ಗ್ರಾಮಾಂತರದಲ್ಲಿ ಶೇಕಡ 80ಕ್ಕೂ ಅಧಿಕ ಮತದಾನವಾಗುತ್ತದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ ಶೇ.62 ಆಗಿದೆ. ಈ ಬಾರಿ ಬಿಬಿಎಂಪಿ ವ್ಯಾಪ್ತಿಯಲ್ಲೂ ಮತದಾನ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತದಾನ ಪ್ರಾಮುಖ್ಯತೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.

ನೀತಿ ಸಂಹಿತೆ ಉಲ್ಲಂಘಿಸಿದರೆ 3 ವರ್ಷ ಜೈಲು

ಚುನಾವಣಾ ಅವ್ಯವಹಾರ ಆಗಲು ಬಿಡುವುದಿಲ್ಲ. ಪ್ರತಿ ಬ್ಯಾಂಕ್ ವ್ಯವಹಾರ ಸಹ ಗಮನಿಸುತ್ತೇವೆ. ಸರಕು ಸಾಗಣೆ ಬಗ್ಗೆ ಗಮನ ಹಿಡುತ್ತೇವೆ. ಯಾವುದೇ ಹಣದ ಆಮಿಷ ಕೊಟ್ಟರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಯಾರೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದರೂ ಮೂರು ವರ್ಷಗಳ ಕಾಲ ಶಿಕ್ಷೆಗೆ ಒಳಗಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಏಪ್ರಿಲ್ ತಿಂಗಳಿಗೆ 18 ವರ್ಷ ಪೂರೈಸುವ ಹೊಸ ಮತದಾರರಿಗೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ. 17 ವರ್ಷ ಪೂರೈಸಿ ಏಪ್ರಿಲ್‌ಗೆ 18 ವರ್ಷ ತುಂಬುತ್ತಿರುವ ಹಾಗೂ ಅರ್ಜಿ ಸಲ್ಲಿಕೆ ಮಾಡಿರುವವರಿಗೆ ಮತದಾನ ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

Exit mobile version