ಬೆಳಗಾವಿ: ಐಸಿಸ್ ಸಂಘಟನೆ ಜತೆ ಮುಸ್ಲಿಂ ಮೌಲ್ವಿ ತನ್ವೀರ್ ಪೀರಾ (Moulvi thanveer Peera) ಸಂಪರ್ಕ ಹೊಂದಿದ್ದು, ಅವರ ಜತೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಮುಸ್ಲಿಂ ಸಮಾವೇಶದಲ್ಲಿ (Muslim conference) ಸಿಎಂ ಸಿದ್ದರಾಮಯ್ಯ (CM Siddaramaiah) ವೇದಿಕೆ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದ ಮಾಜಿ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ (Basanagowda Pateel Yatnal) ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಯತ್ನಾಳ ಒಬ್ಬ ಮಹಾನ್ ಸುಳ್ಳುಗಾರ. ತನ್ವೀರ್ ಪೀರಾ ಅವರ ಜತೆಗೆ ನನಗೆ ಬಹಳ ವರ್ಷಗಳ ಸಂಬಂಧ ಇದೆ. ಆಗೆಲ್ಲ ಯಾಕೆ ಸುಮ್ಮನಿದ್ದರು? ಎಂದು ಪ್ರಶ್ನೆ ಮಾಡಿದ್ದಾರೆ. ತನಿಖೆ ನಡೆಸಿ ಪ್ರೂವ್ ಮಾಡಿ ಎಂದು ಸವಾಲು ಹಾಕಿದ್ದಾರೆ.
ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಬಸನಗೌಡ ಪಾಟೀಲ್ ಯತ್ನಾಳ್ ಅವರು ದ್ವೇಷದ ರಾಜಕಾರಣಿಯಾಗಿದ್ದಾರೆ. ಅವರು ಅಲ್ಪಸಂಖ್ಯಾತರ ವಿರೋಧಿ ರಾಜಕಾರಣ ಮಾಡುತ್ತಾರೆ. ಅವರು ಚುನಾವಣೆ ಗೆಲ್ಲಲು ಈ ರೀತಿ ಮಾತನಾಡಬಾರದು. ಯತ್ನಾಳ್ ಒಬ್ಬ ಮಹಾನ್ ಸುಳ್ಳುಗಾರ ಎಂದು ಹೇಳಿದರು.
ಈ ಆರೋಪವನ್ನು ಬಸನಗೌಡ ಪಾಟೀಲ್ ಯತ್ನಾಳ್ ಮೊದಲು ಸಾಬೀತು ಪಡಿಸಲಿ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಈ ಆರೋಪವನ್ನು ಫ್ರೂವ್ ಮಾಡಲಿ. ಬರಿ ಆರೋಪ ಮಾಡುವುದಲ. ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂರಲು ಪ್ರಯತ್ನ ಮಾಡಿದರು. ಎರಡೂ ಸಿಗಲಿಲ್ಲ. ಅದಕ್ಕೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಾರೇ ಜಹಾಂ ಸೇ ಅಚ್ಛಾ ಹಾಡಿನ ಮೂಲಕ ತಿರುಗೇಟು ನೀಡಿದ ತನ್ವೀರ್ ಪೀರಾ
ಮುಸ್ಲಿಂ ಮೌಲ್ವಿ ತನ್ವೀರ್ ಪೀರಾ ಅವರು ಹೊಸ ರೂಪದೊಂದಿಗೆ ಎದ್ದು ಬಂದಿದ್ದಾರೆ. ಮೌಲ್ವಿ ತನ್ವೀರ್ ಪೀರಾ ಐಸಿಸ್ ಸಂಘಟನೆ ಜತೆ ಸಂಪರ್ಕ ಹೊಂದಿರುವ ದೇಶ ವಿರೋಧಿ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆರೋಪಕ್ಕೆ ಪ್ರತಿಕ್ರಿಯೆಯಾಗಿ ತಾನೂ ದೇಶಭಕ್ತ ಎಂಬುದನ್ನು ನಿರೂಪಿಸುವ ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು, ಸಾರೇ ಜಹಾಂ ಸೇ ಅಚ್ಛಾ ಹಾಡನ್ನು ಅವರು ತಾವೂ ಹಾಡುತ್ತಾರೆ, ಉಳಿದವರ ಮೂಲಕವೂ ಹಾಡಿಸುತ್ತಾರೆ.
ಸಿದ್ದರಾಮಯ್ಯ ಅವರು ಕಳೆದ ವಾರ ಹುಬ್ಬಳ್ಳಿಯಲ್ಲಿ ನಡೆದಿದ್ದ ಮುಸ್ಲಿಂ ಸಮಾವೇಶದಲ್ಲಿ ಭಾಗವಹಿಸುವ ವೇಳೆ ವಿಜಯಪುರ ಮೂಲದ ಮೌಲ್ವಿ ತನ್ವೀರ್ ಪೀರಾ ಕೂಡಾ ಜತೆಗಿದ್ದರು. ತನ್ವೀರ್ ಪೀರಾ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತಿರುವುದು ಮೊದಲೇನೂ ಅಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಅವರೇ ಬಂದು ಭೇಟಿ ಮಾಡಿದ್ದರು. ಆದರೆ, ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಬಿಜೆಪಿ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಮತ್ತು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಇದೊಂದು ಅಸ್ತ್ರವಾಗಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರು ತನ್ವೀರ್ ಪೀರಾ ಅವರು ಐಸಿಸ್ ಜತೆಗೆ ಸಂಬಂಧ ಹೊಂದಿದ್ದಾರೆ ಎಂದು ದೂರಿದ್ದಲ್ಲದೆ, ಅದಕ್ಕೆ ಸಂಬಂಧಿಸಿ ಹಲವು ಫೋಟೊ ಮತ್ತು ಮಾಹಿತಿಗಳನ್ನು ಬುಧವಾರ ಬಿಡುಗಡೆ ಮಾಡಿದ್ದರು. ಜತೆಗೆ ಮೌಲ್ವಿ ಬಗ್ಗೆ ಎನ್ಐಎ ತನಿಖೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಪತ್ರ ಬರೆದಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಆರೋಪಗಳೇನು?
- ತನ್ವೀರ್ ಪೀರಾ ಅನ್ನೋ ಐಸಿಸ್ ಉಗ್ರ ಸಂಘಟನೆಯ ಸಂಪರ್ಕ ಹೊಂದಿರುವ ವ್ಯಕ್ತಿ ಜತೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿರುವ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು. ಹೀಗಾಗಿ ಈ ಪ್ರಕರಣವನ್ನು ಎನ್ಐಗೆ ವಹಿಸುವುದು ಸೂಕ್ತ.
- ತನ್ವೀರ್ ಪೀರಾ ಎಂಬ ವ್ಯಕ್ತಿ ಐಸಿಸ್ ನಾಯಕರನ್ನು ಭೇಟಿ ಮಾಡಿದ ಉದ್ದೇಶವನ್ನು ಕಂಡುಹಿಡಿಯಲು, ಅವರ ಪ್ರಯಾಣದ ಖರ್ಚು ವೆಚ್ಚಗಳ ಮೂಲಗಳನ್ನು ಕಂಡುಕೊಳ್ಳಲು, ಹಣಕಾಸು ನಿರ್ವಹಣೆಯಲ್ಲಿ ಆ ವ್ಯಕ್ತಿಯ ಪಾತ್ರ ಏನು ಎಂಬ ಬಗ್ಗೆ ತಿಳಿಯಬೇಕಿದೆ.
- ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಲವಾರು ಸಭೆಗಳಲ್ಲಿ ಪೀರಾ ಕಾಣಿಸಿಕೊಂಡಿದ್ದು, ಎಲ್ಲ ವಿಷಯಗಳ ಬಗ್ಗೆ ತನಿಖೆ ನಡೆಸಲು ಪ್ರಕರಣವನ್ನು ಎನ್ಐಎಗೆ ವಹಿಸಬೇಕು.
- ಪೀರಾ ಈ ಹಿಂದೆ ಮಧ್ಯಪ್ರಾಚ್ಯ ದೇಶಗಳಲ್ಲಿನ ತೀವ್ರಗಾಮಿ ಇಸ್ಲಾಮಿಕ್ ಸಂಘಟನೆಯ ನಾಯಕರನ್ನು ಭೇಟಿಯಾಗಿರುವ ಬಗ್ಗೆ ನನಗೆ ತಿಳಿದಿದೆ.
- ನಮ್ಮ ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಉದ್ದೇಶದಿಂದ ಪೀರಾ ಮುಸ್ಲಿಂ ದೇಶಗಳಿಂದ ಹಣವನ್ನು ತರುತ್ತಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿಯೊಂದು ನನಗೆ ಸಿಕ್ಕಿದೆ.
- ಸಿಎಂ ತಮ್ಮ ವೈಯಕ್ತಿಕ ಭದ್ರತೆ ಮತ್ತು ಗುಪ್ತಚರ ಸಲಹೆಯನ್ನು ನಿರ್ಲಕ್ಷಿಸಿದ್ದಾರೆ. ಇಲ್ಲವೇ, ತಮ್ಮ ರಾಜಕೀಯ ಉದ್ದೇಶಕ್ಕಾಗಿ ಪೀರಾ ಅವರನ್ನು ಉದ್ದೇಶಪೂರ್ವಕವಾಗಿ ಭೇಟಿ ಮಾಡಲು ಅನುವು ಮಾಡಿಕೊಟ್ಟಿದ್ದಾರೆ.
- ಭಯೋತ್ಪಾದನೆಯ ಪರವಾಗಿ ಇರುವ ವ್ಯಕ್ತಿಗಳು ಉನ್ನತ ಮಟ್ಟದ ರಾಜಕೀಯ ನಾಯಕರನ್ನು ಭೇಟಿಯಾಗಲು ಸಾಧ್ಯವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಾಧ್ಯಮಗಳು ಮತ್ತು ನಾಗರಿಕರ ಸಮ್ಮುಖದಲ್ಲಿ ಈ ಭೇಟಿಗಳು ನಡೆಯುತ್ತವೆ.
- ಪೀರಾ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ನಮ್ಮ ಸ್ಥಳೀಯ ಪೊಲೀಸರು ಮುಂದಾಗುವುದಿಲ್ಲ. ಕಾರಣ, ಅವರು ರಾಜ್ಯ ಆಡಳಿತದೊಂದಿಗೆ ಶಾಮೀಲಾಗಿದ್ದಾರೆ ಎಂಬುದು ನನ್ನ ಅನುಮಾನವಾಗಿದೆ. ಹೀಗಾಗಿ ಪೀರಾ ಅವರನ್ನು ಎನ್ಐಎ ತನಿಖೆ ಆಗಲಿ.
ಯತ್ನಾಳ್ ಸುಳ್ಳುಗಾರ ಎಂದು ಸಿಎಂ ಸಿದ್ದರಾಮಯ್ಯ
ತಾನೂ ದೇಶಭಕ್ತ ಎಂದು ವಿಡಿಯೊ ಬಿಡುಗಡೆ ಮಾಡಿದ ಪೀರಾ
ಈ ನಡುವೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮಗೆ ಐಸಿಸ್ ನಂಟಿದೆ ಆರೋಪದ ಬೆನ್ನಲ್ಲೇ ಸಿಡಿದೆದ್ದ ಮೌಲ್ವಿ ತನ್ವೀರ್ ಪೀರಾ ಅವರು ದೇಶಭಕ್ತಿ ಗೀತೆಯ ಮೂಲಕ ತಿರುಗೇಟು ನೀಡಿದ್ದಾರೆ.
ತಾವು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ʻಸಾರೇ ಜಹಾಂಸೇ ಅಚ್ಛಾʼ ಹಾಡನ್ನು ಹಾಡಿದ್ದಲ್ಲದೆ ಅಲ್ಲಿದ್ದವರ ಮೂಲಕವೂ ಹಾಡಿಸಿದ್ದಾರೆ. ದೇಶ, ಹಿಂದೂ ಎಂಬ ಪದಗಳ ಬಗ್ಗೆ ಪ್ರೀತಿಯಿಂದ ಆಡಿದ ಮಾತುಗಳು ಇಲ್ಲಿವೆ. ದೇಶಭಕ್ತಿ ಗೀತೆ ಹಾಡಿ ತನ್ನ Hafiz Khwaja ಪೇಸ್ಬುಕ್ ಅಕೌಂಟ್ನಲ್ಲಿ ಅಪ್ಲೋಡ್ ಮಾಡಿದ ತನ್ವೀರ್ ಪೀರಾ ಅವರು ಯತ್ನಾಳ್ ಅವರಿಗೆ ಮೌನವಾಗಿ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: CM Siddaramaiah: ಸಿಎಂ ಪಕ್ಕ ಐಸಿಸ್ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!
ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?; ಇಲ್ಲಿದೆ ವಿಡಿಯೊ
Hafiz Khwaja ಅಕೌಂಟ್ನಲ್ಲಿ ಅವರು ಸಿದ್ದರಾಮಯ್ಯ ಸೇರಿದಂತೆ ಹಲವಾರು ರಾಜಕೀಯ ನಾಯಕರನ್ನು ಭೇಟಿ ಮಾಡಿದ ಮತ್ತು ಸ್ವಾಮೀಜಿಗಳ ಜತೆಗೆ ಇರುವ ಚಿತ್ರಗಳೂ ಇವೆ. ಜತೆಗೆ ಅವರು ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ಗೆಲುವನ್ನು ಸಂಭ್ರಮಿಸಿದ್ದು ಹಾಗೂ ಫೈನಲ್ನಲ್ಲಿ ಸೋತಾಗ ಸಾಂತ್ವನ ಹೇಳಿದ ಚಿತ್ರಗಳು ಇವೆ. ಇದಕ್ಕೆ ಯತ್ನಾಳ್ ಅವರು ಏನು ಹೇಳುತ್ತಾರೆ ಎಂದು ಕಾದು ನೋಡಬೇಕು.