ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಕಾರ್ಯಕರ್ತರ ನಿರೀಕ್ಷೆಯಂತೆ ನಡೆಯುತ್ತಿಲ್ಲ ಎಂದು ಟೀಕಿಸುವ ಭರದಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಟ್ವಿಟರ್‌ನಲ್ಲಿ ಪುನೀತ್ ರಾಜಕುಮಾರ್ ಕುರಿತು ಆಡಿದ ಮಾತು ಇದೀಗ ವಿವಾದವಾಗಿದೆ.
ಬಿಜೆಪಿ ಸರ್ಕಾರದ ವಿರುದ್ಧ ಸೋಮವಾರ 21 ಸರಣಿ ಟ್ವೀಟ್ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ, ಕಾರ್ಯಕರ್ತರ ವಿಚಾರದಲ್ಲಿ, ಅಭಿವೃದ್ಧಿ ವಿಚಾರದಲ್ಲಿ ಹೇಗೆ ಸರ್ಕಾರ ಸ್ಪಂದನೆ ನೀಡುತ್ತಿಲ್ಲ ಎಂದು ಇಂಗ್ಲಿಷ್‌ನಲ್ಲಿ ವಿವರಿಸಿದ್ದರು. ಇದರಲ್ಲಿನ 14ನೇ ಟ್ವೀಟ್‌ನಲ್ಲಿ ಬರೆದಿದ್ದ ಸೂಲಿಬೆಲೆ, ʻಮುಖ್ಯಮಂತ್ರಿಯವರು ಫೈಲ್‌ಗಳಿಗೂ ಸಹಿ ಮಾಡುವುದಿಲ್ಲ, ಬಹುಶಃ ಅವರಿಗೆ ಸಮಯದ ಕೊರತೆ ಇರಬಹುದು ಎಂದು ಶಾಸಕರು ದೂರುತ್ತಾರೆ. ಆದರೆ ಒಂದು ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಿ ಕಣ್ಣೀರು ಸುರಿಸಲು ಅವರಿಗೆ ಸಾಕಷ್ಟು ಸಮಯ ಇರುತ್ತದೆ. ಒಬ್ಬ ನಟ ಮೃತಪಟ್ಟಿದ್ದಾಗ ಅವರು ಮೂರು ದಿನ ಸಮಯ ನೀಡಿ ತೊಡಿಸಿಕೊಂಡಿದ್ದರು. ಈಗ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಸಿಡಿದೇಳದಿದ್ದರೆ ಖಂಡಿತವಾಗಿ ಅವರು ವಿಕ್ರಾಂತ್ ರೋಣ ಸಿನಿಮಾ ವೀಕ್ಷಿಸಲು ತೆರಳುತ್ತಿದ್ದರುʼ ಎಂದು ಟೀಕಿಸಿದ್ದರು.
ಈ ಟ್ವೀಟ್‌ನಲ್ಲಿ ಒಟ್ಟು ಮೂರು ವಿಷಯದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಉಲ್ಲೇಖಿಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಅವರು 777 ಚಾರ್ಲಿ ಸಿನಿಮಾ ವೀಕ್ಷಿಸಿ ಕಣ್ಣೀರು ಹಾಕಿದ್ದರು, ಎರಡನೆಯದು ನಟ ಪುನೀತ್ ರಾಜಕುಮಾರ್ ಕುರಿತು ಹಾಗೂ ಮೂರನೆಯದ್ದು ಇತ್ತೀಚೆಗಷ್ಟೆ ಬಿಡುಗಡೆ ಆಗಿರುವ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ್ದು.
ಆದರೆ ಮುಖ್ಯವಾಗಿ ಪುನೀತ್ ರಾಜಕುಮಾರ್ ಕುರಿತು ಆಡಿರುವ ಮಾತಿಗೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಮೃತ ನಟನ ಬಗ್ಗೆ ಹೀಗೆ ಹೀಯಾಳಿಸಿ ಮಾತನಾಡುವುದು ಸರಿಯಲ್ಲ ಎಂದು ಅನೇಕರು ಆಕ್ಷೇಪಿಸಿದ್ದಾರೆ. ಬಹಳಷ್ಟು ಜನರು ಅವಾಚ್ಯ ಶಬ್ದಗಳಿಂದಲೂ ಚಕ್ರವರ್ತಿ ಸೂಲಿಬೆಲೆ ಅವರನ್ನು ನಿಂದನೆ ಮಾಡಿದ್ದಾರೆ.
ತಮ್ಮ ಟ್ವೀಟ್ ವಿವಾದಕ್ಕೆ ತಿರುಗುತ್ತಿರುವುದನ್ನು ಗಮನಿಸಿದ ಚಕ್ರವರ್ತಿ ಸೂಲಿಬೆಲೆ, ಮತ್ತೊಂದು ಟ್ವೀಟ್ ಮೂಲಕ ಕ್ಷಮೆ ಯಾಚಿಸಿದ್ದಾರೆ. ʻಈ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದುʼ ಎಂದಿದ್ದಾರೆ. ಈ ಹಿಂದೆ ತಮ್ಮ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜಕುಮಾರ್ ಕುರಿತು ಆಡಿದ ಶ್ಲಾಘನೆಯ ಮಾತುಗಳ ವಿಡಿಯೊವನ್ನು ಅಪ್‌ಲೋಡ್ ಮಾಡಿ, ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ | ಲಾಲ್ಬಾಗ್ ಪುಷ್ಪ ಪ್ರದರ್ಶನ | ಪುನೀತ್ ರಾಜಕುಮಾರ್ ಸ್ಮರಣೆಗೆ ಸರ್ಕಾರದ ಸಿದ್ಧತೆ