ಬೆಂಗಳೂರು: ತಮ್ಮನ್ನು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಾರೆ, ಕಾಂಗ್ರೆಸ್‌ನವರು ಮಾತ್ರ ತೆಗಳುತ್ತಾರೆ ಎಂಬುದನ್ನು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಅಲ್ಲಗಳೆದಿದ್ದಾರೆ. ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆಯವರೊಂದಿಗೆ ವಿಶೇಷ ಸಂದರ್ಶನದಲ್ಲಿ ಅನೇಕ ವಿಚಾರಗಳ ಕುರಿತು ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ.
ತಿ. ನರಸೀಪುರದಲ್ಲಿ ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಕುರಿತು ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಅವರು ದಲಿತ ಕುಟುಂಬಕ್ಕೆ ಸೇರಿದವರಲ್ಲ ನಾಯಕರ ಕುಟುಂಬಕ್ಕೆ ಸೇರಿದವರು ಎಂದು ಸಮಾಜ ಕಲ್ಯಾಣ ಸಚಿವರ ಪುತ್ರ ಸುನೀಲ್ ಬೋಸ್ ಹೇಳುತ್ತಾರೆ. ಅಂದರೆ ಬೇರೆಯವರನ್ನು ಹತ್ಯೆ ಮಾಡಬಹುದು ಎಂದೆ? ಹತ್ಯೆ ಮಾಡಿದವರೊಂದಿಗೆ ತಮಗೆ ಸಂಬಂಧವಿಲ್ಲ ಎಂದು ಸುನೀಲ್ ಬೋಸ್ ಹೇಳುತ್ತಾರೆಯೇ? ಹಿಂದಿನ ದಿನ ಚಿತ್ರಪಟವೊಂದರ ಕುರಿತು ಜಗಳವಾಗಿತ್ತು ಎನ್ನುವ ಸಿದ್ದರಾಮಯ್ಯ ಅವರೇ, ಇದು ಆಕಸ್ಮಿಕ ಕೃತ್ಯ ಎಂದಿದ್ದಾರೆ. ಅಂದರೆ ಹತ್ಯೆ ಮಾಡಿದವರಿಗೆ ರಕ್ಷಣೆ ನೀಡುವ ಕೆಲಸವನ್ನು ಸ್ವತಃ ಸಿಎಂ ಮಾಡಿದ್ದಾರೆ ಎಂದರು.
ಕಾಂಗ್ರೆಸ್‌ನವರು ಏಕೆ ನಿಮ್ಮನ್ನು ವಿರೋಧಿಸುತ್ತಾರೆ ಎಂಬ ಕುರಿತು ಪ್ರತಿಕ್ರಿಯಿಸಿ, ನನ್ನ ಪರವಾಗಿ ಬಿಜೆಪಿಯವರೂ ಇಲ್ಲ. ನಾನು ಬಹಳ ಡೇಂಜರ್ ಎನ್ನುವುದು ಇಬ್ಬರಿಗೂ ಗೊತ್ತು. ಕರ್ನಾಟಕಕ್ಕೆ ಬರಬೇಕಿದ್ದ ಪ್ರವಾಹದ ಹಣದ ಕುರಿತು ಪ್ರಶ್ನಿಸಿದ್ದಕ್ಕೆ ಪ್ರತಾಪ್ ಸಿಂಹ ರೇಗಿದರು. ಬೆಂಗಳೂರು ಉತ್ತರದ ಸಂಸದರು ನನ್ನ ವಿರುದ್ಧ ಆಡಬಾರದ ಮಾತನ್ನು ಆಡಿದರು. ಒಟ್ಟಾರೆಯಾಗಿ ಬಿಜೆಪಿಯವರು ನನ್ನೊಂದಿಗೆ ಇದ್ದಿದ್ದರೆ, ಎಂ.ಬಿ. ಪಾಟೀಲರು ನನ್ನನ್ನು ಒದ್ದು ಒಳಗೆ ಹಾಕುತ್ತೇವೆ ಎಂದಾಗ ಈ ಬಿಜೆಪಿ ನಾಯಕರು ಮಾತನಾಡಬೇಕಿತ್ತು. ಮೊದಲು ನನ್ನನ್ನು ಬಂಧಿಸಿ ಎನ್ನಬೇಕಿತ್ತು ಎಂದರು.
ನಾನು ಸರ್ದಾರ್ ಪಟೇಲರು, ಲಾಲ್ ಬಹದ್ದೂರ್ ಶಾಸ್ತ್ರಿಯವರ ಕುರಿತು ಹೆಚ್ಚು ಮಾತನಾಡಿದವನು ನಾನು. ಕಾಂಗ್ರೆಸ್‌ನವರಿಗೆ ರಾಷ್ಟ್ರೀಯವಾದಿಗಳನ್ನು ಹಿಡಿದಿಟ್ಟುಕೊಳ್ಳುವುದು ಬೇಕಾಗಿಲ್ಲ. ಹಾಗಾಗಿ ಅವರಿಗೆ ಭಗತ್‌ಸಿಂಗ್, ರಾಜಗುರು, ಸುಖದೇವ್ ಅವರನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಸಾವರ್ಕರ್ ಅವರನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಏಕೆಂದರೆ ರಾಷ್ಟ್ರೀಯವಾದಿಗಳು ಕಾಂಗ್ರೆಸ್‌ಗೆ ಬೇಕಾಗಿರಲಿಲ್ಲ ಎಂದರು.
ಇದನ್ನೂ ಓದಿ: Education News : ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಪಠ್ಯ ತೆಗೆದಿಲ್ಲ, ಕಿತ್ತು ಬಿಸಾಕಿದ್ದೇವೆ: ಮಧು ಬಂಗಾರಪ್ಪ
ಗೋಹತ್ಯೆ ನಿಷೇಧ ಹಿಂಪಡೆಯುವಿಕೆ
ಗೋಹತ್ಯೆ ನಿಷೇಧವನ್ನು ಹಿಂಪಡೆಯುತ್ತೇವೆ ಎಂಬ ಕಾಂಗ್ರೆಸ್ ಸರ್ಕಾರದ ಕುರಿತು ಪ್ರತಿಕ್ರಿಯಿಸಿದ ಚಕ್ರವರ್ತಿ ಸೂಲಿಬೆಲೆ, ಕೆಲವು ವಿಚಾರಗಳನ್ನು ಕಾಂಗ್ರೆಸ್‌ನವರು ಕಮ್ಯುನಿಸ್ಟರಿಂದ ಕೆಲವು ಪದಗಳನ್ನು ಆಮದು ಮಾಡಿಕೊಂಡಿದ್ದಾರೆ. ಸಂವಿಧಾನ ಉಳಿಸುವುದು, ಬಡತನ ಸೇರಿ ಅನೇಕ ವಿಚಾರಗಳನ್ನು ಇಟ್ಟುಕೊಂಡು ಮಾತನಾಡುತ್ತಾರೆ. ಫ್ರೀಬಿಗಳನ್ನು ಕೊಡುವುದು ಇಂದಿರಾಗಾಂಧಿ ಕಾಲದ ಯೋಜನೆಗಳು. ಆದರೆ ಕಾಂಗ್ರೆಸ್ ಈಗಲೂ ಫ್ರೀಬಿ ಬಗ್ಗೆ ಮಾತನಾಡುತ್ತಿದೆ. ಕಾಂಗ್ರೆಸ್‌ಗೆ ಅಭಿವೃದ್ಧಿ ಕಲ್ಪನೆಯೂ ಇಲ್ಲ, ಸಂವಿಧಾನದ ಕುರಿತ ಕಲ್ಪನೆಯೂ ಇಲ್ಲ ಎಂದರು.