ಬೆಂಗಳೂರು: ಬರ ಘೋಷಣೆಯನ್ನು ನಾವು ವಿಳಂಬ ಮಾಡಿಯೇ ಇಲ್ಲ. ನಮ್ಮ ಸರ್ಕಾರವೇ ಬೇಗ ಘೋಷಣೆ ಮಾಡಿದೆ. ಅದೇ ಬಿಜೆಪಿಯವರಾಗಿದ್ದರೆ ಇನ್ನೂ ಒಂದು ತಿಂಗಳು ಘೋಷಣೆ ಮಾಡಲು ಆಗುತ್ತಿರಲಿಲ್ಲ. ಬರ ಘೋಷಣೆಯನ್ನು ಮಾಡುತ್ತಲೂ ಇರಲಿಲ್ಲ. 195 ಅಲ್ಲ 100 ತಾಲೂಕನ್ನೂ ಬರಪೀಡಿತ ಎಂದು ಬಿಜೆಪಿಯವರಿಂದ ಘೋಷಣೆ ಮಾಡಲು ಆಗುತ್ತಿರಲಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (Agriculture Minister N Chaluvarayaswamy) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಬಿಜೆಪಿಯವರ ವಿರೋಧಕ್ಕೆ ಏನು ಮಾಡುವುದು? ನಮ್ಮ ಬಗ್ಗೆ ಹೇಳಲು ಅವರಿಗೆ ಏನೂ ಇಲ್ಲದೇ ಇರುವುದರಿಂದ ಇಂತಹ ಆರೋಪ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಸರ್ಕಾರ ಯಾವಾಗ ಅಧಿಕಾರಕ್ಕೆ ಬರುತ್ತದೋ ಆವಾಗೆಲ್ಲ ಬರ ಬರುತ್ತದೆ. ಎಸ್ ಎಂ ಕೃಷ್ಣ ಕಾಲದಲ್ಲೂ ಹೀಗೇ ಆಯಿತು, ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೂ ಬರ ಕಾಡಿತು ಎಂದು ಟೀಕೆ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಚಲುವರಾಯಸ್ವಾಮಿ, ಬಿಜೆಪಿಯವರಿಗೆ ಯಾವುದೇ ರೀತಿಯ ವಿಷಯ ಇಲ್ಲ. ಮುಂದೆ ಚುನಾವಣೆ ಸಹ ಇರುವುದರಿಂದ ಹೀಗೆಲ್ಲಾ ಹೇಳುತ್ತಿದ್ದಾರೆ. ಅವರಿಗೆ ವಿರೋಧ ಪಕ್ಷದ ನಾಯಕನನ್ನು ಮಾಡಲು ಆಗಿಲ್ಲ. ಪಕ್ಷದ ಅಧ್ಯಕ್ಷರ ಬದಲಾವಣೆ ಆಗಿಲ್ಲ. ಒಂದು ಕಡೆ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಅವಲಂಬಿಸುತ್ತಾರೆ. ಕುಮಾರಸ್ವಾಮಿಯವರೂ ಇನ್ನೊಮ್ಮೆ ಬಿಜೆಪಿಯವರನ್ನು ಅಬಲಂಬಿಸುತ್ತಾರೆ. ಆದರೆ, ವಿರೋಧ ಪಕ್ಷಗಳು ಏನಾದರೂ ಹೇಳಬೇಕು ಎಂಬ ಕಾರಣಕ್ಕೆ ಹೀಗೆ ಆರೋಪ ಮಾಡುತ್ತಿವೆ ಎಂದು ಎನ್. ಚಲುವರಾಯಸ್ವಾಮಿ ಹೇಳಿದರು.
ರೈತರ ಪರ ಇದ್ದಿದ್ದಕ್ಕೇ ಬರ ತಾಲೂಕು ಘೋಷಣೆ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ನಾನು ಸೇರಿದಂತೆ ನಮ್ಮ ರಾಜ್ಯ ಸರ್ಕಾರವು ರೈತರ ಪರ ಇರುವುದರಿಂದ ಮಾತ್ರ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲು ಸಾಧ್ಯವಾಯಿತು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಸಂಕಷ್ಟವನ್ನು ಪರಿಗಣಿಸಿದ್ದೇವೆ
195 ತಾಲೂಕುಗಳು ಬರಪೀಡಿತವಾಗಿದ್ದರೂ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ 161 ತಾಲೂಕುಗಳು ಮಾತ್ರ ಬರಪೀಡಿತ ಎಂದು ಘೋಷಣೆ ಮಾಡಲು ಸಾಧ್ಯವಾಯಿತು. ಇನ್ನು 34 ತಾಲೂಕುಗಳು ಕೇಂದ್ರದ ಅನುಸಾರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಬರುವುದಿಲ್ಲ. ಆದರೆ, ಅಲ್ಲಿ ಸಂಕಷ್ಟ ಇರುವುದನ್ನು ಅರಿತು ನಾವು ಇವುಗಳನ್ನೂ ಸೇರಿಸಿ ಘೋಷಣೆ ಮಾಡಿದ್ದೇವೆ. ಅಲ್ಲದೆ, ಇವುಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೂ ಕೊಡುತ್ತೇವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಇದನ್ನೂ ಓದಿ: Power Point with HPK : ಪುತ್ರ ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಉತ್ಸುಕನಾಗಿದ್ದಾನೆ!
ವರದಿ ಕೊಡಲು ಡಿಸಿಗಳಿಗೆ ಸೂಚಿಸಿದ್ದೇವೆ
ರಾಜ್ಯದ ಹಲವು ಕಡೆ ಮೇವು ಇದೆಯೇ? ಬೀಜದ ಕೊರತೆ ಇದೆಯೇ? ಮತ್ತೇನು ಸಮಸ್ಯೆಗಳಿವೆ ಎಂಬುದರ ಬಗ್ಗೆ ವರದಿ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಆ ವರದಿಯನ್ವಯ ಒಂದು ಮೆಮೋರಂಡಮ್ ಅನ್ನು ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸುತ್ತೇವೆ. ನಾವು ಸಹ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.