ಬೆಂಗಳೂರು: ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಹಾಗೂ ಕೋವಿಡ್ (Covid 19) ಸಂದರ್ಭದಲ್ಲಿ ನಡೆದ ಕೆಲವು ಸಂಗತಿಗಳ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ 2021ರಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ (Chamarajanagar oxygen tragedy) ಪ್ರಕರಣದ ಮರು ತನಿಖೆಗೆ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಾತನಾಡಿ, ಈ ಘಟನೆಯು ಎರಡು ಇಲಾಖೆಗೆ ಒಳಪಡುತ್ತದೆ. ಹಾಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ (Health Department) ಸಮನ್ವಯತೆ ಇರುವುದರಿಂದ ತನಿಖೆಯನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಈ ಹಿಂದಿನ ಸರ್ಕಾರ ತನಿಖೆಗೆ ಕೆಲವರನ್ನು ನೇಮಕ ಮಾಡಿತ್ತು. ಆದರೆ, ಆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಹೊಸ ಸರ್ಕಾರ ಬಂದಿರುವುದರಿಂದ ನಾವು ಮರು ತನಿಖೆಗೆ ನಿರ್ಧಾರ ಮಾಡಿದ್ದೇವೆ. ಮರು ತನಿಖೆಗೆ ಸರ್ಕಾರಕ್ಕೆ ಹೇಳಿದ್ದೇನೆ. ಅದಕ್ಕೆ ಡಿಪಿಆರ್ ಕೂಡ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗಿ 36 ಕೊರೊನಾ ರೋಗಿಗಳು ಮೃತಪಟ್ಟಿದ್ದರು. ಈ ಬಗ್ಗೆ ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್, ಈ ಪ್ರಕರಣವನ್ನು ತನಿಖೆಗೆ ಆದೇಶಿಸಿತ್ತು. ಈಗ ಅಧಿಕಾರಕ್ಕೆ ಬಂದೊಡನೆ ಈ ಪ್ರಕರಣದ ತನಿಖೆಗೆ ಮುಂದಾಗಿದೆ.
ಇದನ್ನೂ ಓದಿ: Electricity Bill: ನೇಕಾರರಿಗೆ ಶಾಕ್! 90 ರೂಪಾಯಿ ಮಿನಿಮಮ್ ಚಾರ್ಜ್ 140ಕ್ಕೆ ಏರಿಕೆ; ಇದು ಗ್ಯಾರಂಟಿ ಎಫೆಕ್ಟಾ?
ದಕ್ಷಿಣ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕ ಆಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಪ್ರಜ್ಞಾವಂತ ಜಿಲ್ಲೆಯಾಗಿದೆ. ನಾನು ಯಾವ ಜಿಲ್ಲೆಗೂ ಬೇಡಿಕೆ ಇಟ್ಟಿರಲಿಲ್ಲ. ಇದು ಮುಖ್ಯಮಂತ್ರಿಗಳ ನಿರ್ಧಾರವಾಗಿದೆ. ಯಾವ ಜಿಲ್ಲೆಗೆ ಹೋದರೂ ಕೆಲಸ ಮಾಡಬೇಕು. ದಕ್ಷಿಣ ಕನ್ನಡದಲ್ಲಿ ಜನ ಸಹೋದರತೆಯಿಂದ ಬದುಕಿ ಬಾಳಬೇಕು. ನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕಬೇಕಿದೆ. ಅಲ್ಲಿ ಶಾಂತಿ ಸೌಹರ್ದತೆ ನೆಲೆಸಬೇಕಿದೆ. ಅ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕೋವಿಡ್ ಅವಧಿಯ ಟೆಂಡರ್‌ಗಳ ಮರು ಪರಿಶೀಲನೆ ಮಾಡಲಾಗುತ್ತದೆ. ಅನುಮಾನ ಬಂದ ಟೆಂಡರ್‌ಗಳ ತನಿಖೆ ಮಾಡುತ್ತೇವೆ. ಹೆಚ್ಚು ಬಿಡ್ ಮಾಡಿರುವ ಟೆಂಡರ್‌ಗಳನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈ ಹಿಂದೆ ಕರೆಯಲಾಗಿದ್ದ 108 ಆಂಬ್ಯುಲೆನ್ಸ್ ಟೆಂಡರ್ ಮತ್ತು ಡಯಾಲಿಸಿಸ್ ಟೆಂಡರ್ ಅನ್ನು ರದ್ದುಪಡಿಸಿದ್ದು, ಮರು ಟೆಂಡರ್ ಕರೆಯುತ್ತೇವೆ. ಜಿವಿಕೆ ಮೇಲೆ ಆರೋಪ ಬಂದಿರುವ ಕಾರಣ ಈ ಕ್ರಮ ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಟೆಂಡರ್ ಕರೆಯುತ್ತೇವೆ ಎಂದು ಹೇಳಿದರು.
ಅಧಿಕಾರಿಗಳಿಗೆ ತರಾಟೆ
ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳ ಜತೆ ಸಭೆ ಮುಂದುವರಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವೇಳೆ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಗಳಲ್ಲಿ ಸಾವಾದರೆ ನಾನು ಸಹಿಸೋದಿಲ್ಲ. ಯಾರದ್ದೇ ತಪ್ಪು ಕಂಡುಬಂದರೂ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಈ ವಿಚಾರವಾಗಿ ಯಾವುದೇ ರಾಜಕೀಯ ಒತ್ತಡ ತಂದರೂ ಪ್ರಯೋಜನ ಇಲ್ಲ. ರಾಜಕೀಯ ಒತ್ತಡ ತಂದರೆ ಅದರ ಮುಂದಿನ ಪರಿಣಾಮವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್ ಜಾಸ್ತಿ ಮಾಡ್ಬೇಡಿ; BPL ಕಾರ್ಡ್‌ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!
ಈ ಹಿಂದೆ ಡಯಾಬಿಟಿಕ್ ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ ಜಿರೋ ಡಯಾಬಿಟಿಕ್ ಎಂದು ಯಾದಗಿರಿ ಜಿಲ್ಲೆಯಲ್ಲಿ ವರದಿ ನೀಡಲಾಗಿದೆ. ಆದರೆ, ಇಂತಹ ತಪ್ಪು ಮಾಹಿತಿಗಳನ್ನು ಕೊಡಬಾರದು ಎಂದು ಇದೇ ವೇಳೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.