ಮೈಸೂರು/ಚಾಮರಾಜನಗರ: ರೈತನ ಮೇಲೆ ಚಿರತೆಯೊಂದು (Leopard Attack) ದಾಳಿ ಮಾಡಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಸವಣ್ಣ ಚಿರತೆ ದಾಳಿಗೆ ಸಿಲುಕಿ ಗಾಯಗೊಂಡವರು.
ಬಸವಣ್ಣ ನಿನ್ನೆ ಶನಿವಾರ ಸಂಜೆ ಜಮೀನಿನಲ್ಲಿ ಮೇವು ಕಟಾವು ಮಾಡಲು ತೆರಳಿದ್ದರು. ಈ ವೇಳೆ ಏಕಾಏಕಿ ರೈತನ ಮೇಲೆ ಚಿರತೆ ದಾಳಿ ಮಾಡಿದೆ. ಬಳಿಕ ಬಸವಣ್ಣ ಜೋರಾಗಿ ಕೂಗಾಡಿದ್ದು, ಗಾಬರಿಗೆ ಚಿರತೆ ಅಲ್ಲಿಂದ ಓಡಿ ಹೋಗಿದೆ. ಗಾಯಾಳು ಬಸವಣ್ಣರನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಿಂಧುವಳ್ಳಿ ಗ್ರಾಮದ ಸುತ್ತಮುತ್ತ ಚಿರತೆ ಮತ್ತು ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದೆ. ಚಿರತೆ ದಾಳಿಯಿಂದ ಬಸವಣ್ಣ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: Robbery Case: ಬೆಂಗಳೂರಿನಲ್ಲಿ ಮಿತಿ ಮೀರಿದ ಕಳ್ಳರ ಹಾವಳಿ; ಆನ್‌ಲೈನ್ ಡೆಲಿವರಿ ಬಾಯ್‌ಗಳೇ ಇವರ ಟಾರ್ಗೆಟ್: Video ಇಲ್ಲಿದೆ
ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ
ಚಾಮರಾಜನಗರದ ಮಲೆ ಮಹದೇಶ್ವರ ವನ್ಯಜೀವಿ ವಲಯ ಪಿ.ಜಿ.ಪಾಳ್ಯ ವ್ಯಾಪ್ತಿಯ ಆಂಡಿಪಾಳ್ಯದಲ್ಲಿ ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಸುಮಾರು 7 ವರ್ಷದ ಗಂಡು ಚಿರತೆ ಬಿದ್ದಿದೆ. ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸುತ್ತ ಮುತ್ತ ಗ್ರಾಮಸ್ಥರಿಗೆ ಚಿರತೆಯು ಉಪಟಳ ನೀಡುತಿತ್ತು.
ಹೀಗಾಗಿ ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯಾಧಿಕಾರಿಗಳು ಕಳೆದ ನಾಲ್ಕೈದು ದಿನಗಳ ಹಿಂದೆ ಬೋನ್ ಇರಿಸಿದ್ದರು. ತಡರಾತ್ರಿ ಆಹಾರ ಅರಸಿ ಬಂದ ಚಿರತೆಯು ಬೋನಿಗೆ ಬಿದ್ದಿದೆ. ಸುಮಾರು ನಾಲ್ಕು ತಿಂಗಳಿಂದ ಪಿ.ಜಿ. ಪಾಳ್ಯ , ಆಂಟಿ ಪಾಳ್ಯ, ಬೂದಿಪಡಗ ಸುತ್ತ ಮುತ್ತ ಚಿರತೆ ಪ್ರತ್ಯಕ್ಷಗೊಂಡಿತ್ತು.
ಚಿರತೆಯನ್ನು ಸುರಕ್ಷಿತವಾಗಿ ಮತ್ತೆ ಅರಣ್ಯಕ್ಕೆ ಬಿಡಲಾಗಿದೆ. ಚಿರತೆ ಸೆರೆಯಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಚಾಮರಾಜನಗರದ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಲಯದಲ್ಲಿ ಘಟನೆ ನಡೆದಿದೆ.
ಶ್ರೀರಂಗಪಟ್ಟಣಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ, ಮೊತ್ತಹಳ್ಳಿ ಬಳಿ ಕಾಡಾನೆಗಳು ಲಗ್ಗೆ ಇಟ್ಟಿದ್ದವು. ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು ರೈತರ ಬೆಳೆ ನಾಶ ಮಾಡಿವೆ. ರೈತರು ಬೆಳೆದ ಬಾಳೆ ತೋಟ, ಭತ್ತ, ಕಬ್ಬು, ಟಮೋಟೋ, ಬೀನ್ಸ್, ಹಾಗಲಕಾಯಿ ಬೆಳೆ ನಾಶವಾಗಿದೆ. ಕಾಡಾನೆಗಳ ಕಾಟದಿಂದ ರೈತರಿಗೆ ಲಕ್ಷಾಂತರ ರೂ ನಷ್ಟ ವಾಗಿದೆ. ಬೆಳೆ ನಷ್ಟ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ರೈತರು ಮನವಿ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ