ಗುಂಡ್ಲುಪೇಟೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆ ಕಾಂಗ್ರೆಸ್ ಪಕ್ಷಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಟ್ಟಾಗುವುದು ಅನಿವಾರ್ಯ ಎಂಬ ಸಂದೇಶವನ್ನು ನೀಡಲು ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಯತ್ನ ನಡೆಸಿದ್ದಾರೆ.
ಗುಂಡ್ಲುಪೇಟೆಯಿಂದ ಶುಕ್ರವಾರ ಆರಂಭವಾದ ಭಾರತ್ ಜೋಡೋ ಪಾದಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಈ ಪ್ರಯತ್ನ ಮಾಡಿದರು. ವೇದಿಕೆಯಲ್ಲಿದ್ದ ಇಬ್ಬರೂ ನಾಯಕರನ್ನು ಕರೆದು ಒಟ್ಟಿಗೆ ಡೋಲು ಬಾರಿಸುವುದರ ಮೂಲಕ ಈ ಸಂದೇಶ ನೀಡಲು ಮುಂದಾದರು.
ಬೃಹತ್ ವೇದಿಕೆಯ ಮೇಲೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮೂವರಿಗೂ ಮೂರು ಡೋಲುಗಳನ್ನು ಇರಿಸಲಾಗಿತ್ತು. ಮೊದಲಿಗೆ ಎಲ್ಲರೂ ಬಡಿಯುವ ಮೂಲಕ ಚಾಲನೆ ನೀಡಿದರು. ನಂತರ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಮತ್ತೆ ಕರೆದ ರಾಹುಲ್ ಗಾಂಧಿ, ಎಡಗೈಯಲ್ಲಿ ಶಿವಕುಮಾರ್, ಬಲಗೈಯಲ್ಲಿ ಸಿದ್ದರಾಮಯ್ಯ ಕೈ ಹಿಡಿದು ಒಂದೇ ಡೋಲನ್ನು ಮತ್ತೆ ಬಡಿದರು.
ಕಾಂಗ್ರೆಸ್‌ನೊಳಗೆ ಇರುವ ಭಿನ್ನಾಭಿಪ್ರಾಐಗಳನ್ನೂ ನಿವಾರಿಸಿಕೊಂಡು ಕಾಂಗ್ರೆಸ್ ಜೋಡೋ ಕಾರ್ಯಕ್ರಮವೂ ಹೌದು ಎಂಬುದು ಮತ್ತೆ ಸಾಬೀತಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಪ್ರಯತ್ನವನ್ನು ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ರಾಹುಲ್ ಗಾಂಧಿ ನಡೆಸಿದ್ದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಸಿದ್ದರಾಮಯ್ಯ ಅವರಿಗೆ ಶಾಲು ಹೊದಿಸಿ, ಇಂದಿರಾ ಗಾಂಧಿಯವರ ಪುಸ್ತಕವೊಂದನ್ನು ಶಿವಕುಮಾರ್ ನೀಡಿದರು. ಈ ವೇಳೆಯಲ್ಲಿ ಪಕ್ಕ ಕುಳಿತಿದ್ದ ರಾಹುಲ್ ಗಾಂಧಿ ಕೈ ಸನ್ನೆ ಮಾಡಿ, ತಬ್ಬಿಕೊಳ್ಳುವಂತೆ ಶಿವಕುಮಾರ್‌ಗೆ ಹೇಳಿದರು. ಇದನ್ನು ನೋಡಿದ ಶಿವಕುಮಾರ್, ಒಂದಲ್ಲ ಎರಡು ಬಾರಿ ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡು, ನಾವಿಬ್ಬರೂ ಒಟ್ಟಾಗಿದ್ದೇವೆ ಎಂದು ಸಂದೇಶ ನೀಡುವ ಪ್ರಯತ್ನ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಇದನ್ನೂ ಓದಿ | ಇಂದು ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶ, 21 ದಿನ ಹೆಜ್ಜೆ ಹಾಕಲಿರುವ ರಾಹುಲ್ ಗಾಂಧಿ