Site icon Vistara News

ಚಾಮರಾಜನಗರದಿಂದ ದೂರಾಗಲಿಲ್ಲ ಶಾಪಗ್ರಸ್ತ ಹಣೆಪಟ್ಟಿ: ಮುಂದುವರಿದ ಮೂಢನಂಬಿಕೆ

Chamaraja nagar

ಸಾಗರ್ ಕುಮಚಹಳ್ಳಿ ಚಾಮರಾಜನಗರ
ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾಗಿರುವ, ಪವಾಡ ಪುರುಷ ಮಲೆ ಮಾದಪ್ಪನ ಕರ್ಮಭೂಮಿ, ಜಾನಪದ ಕ್ಷೇತ್ರದಲ್ಲಿ ಮಂಟೇಸ್ವಾಮಿ ಹಾಡುಗಳ ಮೂಲಕ ಗುರುತರ ಹೆಗ್ಗುರುತು ಮೂಡಿಸಿರುವ ರಾಜ್ಯದ ಗಡಿ ಭಾಗದ ಚಾಮರಾಜನಗರ ಇಂದಿಗೂ ಶಾಪಗ್ರಸ್ತ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಕಳಚಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಚಾಮರಾಜನಗರ ಜಿಲ್ಲೆಯಾಗಿ 25 ವರ್ಷ ಪೂರ್ಣಗೊಂಡಿದ್ದರೂ ರಾಜಕಾರಣಿಗಳ ಪಾಲಿಗೆ ದೂರದ ಬೆಟ್ಟವೇ ಆಗಿದೆ.

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮುಖ್ಯಮಂತ್ರಿ ಸೇರಿ ಇತರ ಸಚಿವರ ಭೇಟಿ ಈ ಜಿಲ್ಲೆಗೆ ತೀರಾ ಕಡಿಮೆ. ಪಕ್ಕದ ಮೈಸೂರಿಗೆ ಬರುವ ಜನಪ್ರತಿನಿಧಿಗಳು ಪಕ್ಕದ ಚಾಮರಾಜನಗರ ಕಡೆಗೆ ತಲೆ ಹಾಕಿ ಮಲಗಲೂ ಹಿಂದೇಟು ಹಾಕುತ್ತಾರೆ. ಇದಕ್ಕೆ ಮುಖ್ಯ ಕಾರಣ ಇಲ್ಲಿಗೆ ಭೇಟಿ ನೀಡಿದರೆ ಅಧಿಕಾರ ತಪ್ಪುತ್ತದೆ ಎಂಬ ನಂಬಿಕೆ ಅಥವಾ ಅಪಪ್ರಚಾರ.

25ನೇ ವರ್ಷದ ಆಚರಣೆ

ಚಾಮರಾಜನಗರ ಜಿಲ್ಲೆ ಘೋಷಣೆಯಾಗಿ ಇದೇ ಆಗಸ್ಟ್ 15ಕ್ಕೆ 25 ವರ್ಷ ಪೂರ್ಣಗೊಳ್ಳಲಿದೆ. ಆದರೆ ಅಭಿವೃದ್ಧಿಯಲ್ಲಿ ಮಾತ್ರ ಹಿಂದುಳಿದೆ. 1997ರ ಆಗಸ್ಟ್‌ 15ರಂದು ಚಾಮರಾಜನಗರ ಹೊಸ ಜಿಲ್ಲೆ­ಯಾಗಿ ಅಸ್ತಿತ್ವಕ್ಕೆ ಬಂತು. ಅದಕ್ಕೂ ಮೊದಲು ಮುಖ್ಯಮಂತ್ರಿಗಳಾಗಿದ್ದ ಎಸ್‌. ನಿಜಲಿಂಗಪ್ಪ, ಡಿ. ದೇವರಾಜ ಅರಸು, ಆರ್. ಗುಂಡೂರಾವ್‌, ರಾಮಕೃಷ್ಣ ಹೆಗಡೆ ಅವರು ಚಾಮರಾಜನಗರ ಕೇಂದ್ರಕ್ಕೆ ಭೇಟಿ ನೀಡಿದ್ದರು. ಹಾಗೆಯೇ 1992ರಲ್ಲಿ ವೀರೇಂದ್ರ ಪಾಟೀಲ ಅವರು ಕಾವೇರಿ ಕುಡಿಯುವ ನೀರು ಪೂರೈಕೆ ಯೋಜನೆ ಚಾಲನೆ ನೀಡಲು ನಗರಕ್ಕೆ ಭೇಟಿ ನೀಡಿದ್ದರು. ಬಳಿಕ ಕಾಕತಾಳೀಯ ಎಂಬಂತೆ ಅಧಿಕಾರದಿಂದ ಕೆಳಗಿಳಿ­ದರು. ಚಾಮ­ರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬ ಕಳಂಕ ಜಿಲ್ಲೆಗೆ ಅಂದಿನಿಂದ ಅಂಟಿಕೊಂಡಿತು.
ಈ ಕಳಂಕವೇ ನಿಜವೆಂದು ತಿಳಿದ ಅನೇಕ ನಾಯಕರು ಈ ಕಡೆ ಬರುವುದನ್ನೇ ಬಿಟ್ಟರು. ಇದಕ್ಕೆ ಸಾಕ್ಷಿ ಎಂಬಂತೆ 1997ರಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ.ಎಚ್‌. ­ಪಟೇಲ್‌ ಅವರು ಚಾಮರಾಜನಗರವನ್ನು ಹೊಸ ಜಿಲ್ಲೆಯಾಗಿ ಘೋಷಣೆ ಮಾಡಲು ಕೂಡ ನಗರದ ಜಿಲ್ಲಾ ಕೇಂದ್ರಕ್ಕೆ ಬಾರದೆ, ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ಚಾಮರಾಜನಗರವನ್ನು ಹೊಸ ಜಿಲ್ಲೆ­ಯನ್ನಾಗಿ ಉದ್ಘಾಟಿಸಿದ್ದರು. ಅದಾದ ನಂತರವೂ ಅವರು ಅಪ್ಪಿತಪ್ಪಿಯೂ ಜಿಲ್ಲಾ ಕೇಂದ್ರಕ್ಕೆ ಬಂದಿರಲಿಲ್ಲ.
ಇದೇ ರೀತಿ ಯಾವ ಸಿಎಂ ಕೂಡ ಇತ್ತ ಬಾರದೆ ಇಲ್ಲದ ಸಂದರ್ಭದಲ್ಲಿ ಧೈರ್ಯ ಮಾಡಿ ಸಮ್ಮಿಶ್ರ ಸರ್ಕಾರವಿದ್ದ ವೇಳೆ ಮುಖ್ಯಮಂತ್ರಿ­ಯಾ­ಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿದ್ದರು. ಆದರೆ ದುರದೃಷ್ಟವಷಾತ್ ಅವರು ಕೂಡ ನಾನಾ ಕಾರಣಗಳಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು.

ಇನ್ನು ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ವೇಳೆ ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಗೆ ಭೇಟಿ ನೀಡಿದ್ದರು. ಆದರೆ, ಜಿಲ್ಲಾ ಕೇಂದ್ರಕ್ಕೆ ಅವರು ಕೂಡ ಬರಲಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ಜಗದೀಶ ಶೆಟ್ಟರ್‌ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅವರು ಭೇಟಿ ನೀಡಿ ಹೋದ ಮೇಲೆ ಅವರ ಅಧಿಕಾರಾವಧಿ ಕೆಲ ದಿನಗಳು ಮಾತ್ರ ಇದ್ದಕಾರಣ ಅವಧಿಯನ್ನು ಪೂರ್ಣಗೊಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಾರೆಯೇ ಎಂಬ ಪ್ರಶ್ನೆ ಜಿಲ್ಲೆಯ ಜನರಿಗೆ ಕಾಡಿತ್ತು. 2013ರ ಅಕ್ಟೋಬರ್‌ 7ರಂದು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ ಸಿದ್ದ­ರಾಮಯ್ಯ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ಬಳಿಕ, ಅವರ ಅಧಿಕಾರ ಅವಧಿ ಪೂರ್ಣಗೊಳ್ಳುವವರೆಗೂ ಸತತ 20ಕ್ಕೂ ಹೆಚ್ಚು ಬಾರಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಚಾಮರಾಜನಗರ ಶಾಪಗ್ರಸ್ತ ಜಿಲ್ಲೆ ಎನ್ನುವ ಕಳಂಕಕ್ಕೆ ವಿಮೋಚನೆ ನೀಡಿದರು.

ಹೊರವಲಯಕ್ಕೆ ಮಾತ್ರ ಸೀಮಿತವಾದ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಎರಡೇ ತಿಂಗಳಲ್ಲಿ ಚಾಮರಾಜನಗರಕ್ಕೆ ಭೇಟಿ ಕೊಡುತ್ತಾರೆ,ಇವರು ಮೂಡನಂಬಿಕೆಗಳಿಗೆ ಬೆಲೆ ಕೊಡುವುದಿಲ್ಲ ಎಂದು ಎಲ್ಲರೂ ನಂಬಿದ್ದರು. 2021ರ ಅಕ್ಟೋಬರ್ 7ರಂದು ಚಾಮರಾಜನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಕಾಲೇಜು ಉದ್ಘಾಟನೆ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಜತೆ ಬಂದಿದ್ದರು. ಆದರೆ ಅದು ಚಾಮರಾಜನಗರ ಜಿಲ್ಲಾ ಕೇಂದ್ರದ ಹೊರ ವಲಯದಲ್ಲಿರುವ ಯಡಬೆಟ್ಟಕ್ಕೆ ಮಾತ್ರ ಸೀಮಿತವಾಗಿಯೇ ಉಳಿಯಿತು. ಬೊಮ್ಮಾಯಿ ಅವರು ಕೇಂದ್ರ ಸ್ಥಾನಕ್ಕೆ ಬರುತ್ತಾರೆ, ನಮ್ಮ ಜಿಲ್ಲೆಗೆ ಏನಾದರೂ ವಿಶೇಷ ಅನುದಾನ ನೀಡುತ್ತಾರೆ ಎನ್ನುವ ಜಿಲ್ಲೆಯ ಜನರ ನಿರೀಕ್ಷೆಗೆ ಅವರು ಸಹ ತಣ್ಣೀರೆರಚಿದರು.

ಹೀಗೆ ಚಾಮರಾಜನಗರಕ್ಕೆ ಸಿಎಂಗಳು ಬರಲು ಹೆದರುತ್ತಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತ್ರ ಅನೇಕ ಬಾರಿ ಚಾಮರಾಜನಗರಕ್ಕೆ ಬಂದು ತಮ್ಮ ಐದು ವರ್ಷದ ಅಧಿಕಾರಾವಧಿಯನ್ನು ಪೂರ್ಣಗೊಳಿಸಿ ಇದು ಶಾಪಗ್ರಸ್ತ ಜಿಲ್ಲೆ ಎಂಬ ಕಳಂಕವನ್ನು ತೊಡೆದುಹಾಕಿದರು. ಆದರೂ ಅವರನ್ನು ಹೊರತುಪಡಿಸಿ ಬೇರೆ ಯಾವ ಸಿಎಂ ಕೂಡ ಬರಲು ಹಿಂದೇಟು ಹಾಕುತ್ತಿರುವುದು ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದುಕೊಳ್ಳುವುದಕ್ಕೆ ಕಾರಣ ಎನ್ನಬಹುದು. ಮುಂದಿನ ದಿನಗಳಲ್ಲಾದರೂ ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಆಗಮಿಸಿ, ಶಾಪಗ್ರಸ್ತ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಮುಕ್ತಿ ನೀಡಲಿ ಎಂದು ನಾಗರಿಕರ ಆಶಯ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಜಿಲ್ಲೆಗಳಿಗೂ ಬರುತ್ತಾರೆ. ಅವರಲ್ಲಿ ಭೇದ ಭಾವ ಇಲ್ಲ. ಮುಂದಿನ ದಿನಗಳಲ್ಲಿ ಚಾಮರಾಜನಗರಕ್ಕೂ ಬರುತ್ತಾರೆ. ಖುದ್ದಾಗಿ ನಾನೇ ಅವರನ್ನು ಕರೆದುಕೊಂಡು ಬರುತ್ತೇನೆ. ಇದರಲ್ಲಿ ಯಾವುದೇ ಸಂಶಯ ಬೇಡ.
-ವಿ.ಸೋಮಣ್ಣ, ವಸತಿ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ

ಬೊಮ್ಮಾಯಿ ಅವರು ಕಳೆದ ಬಾರಿ ಚಾಮರಾಜನಗರಕ್ಕೆ ಬಂದಿದ್ದರೂ, ಚಾಮರಾಜನಗರದ ಕೇಂದ್ರ ಭಾಗಕ್ಕೆ ಬಂದಿಲ್ಲ. ನಗರದ ಹೊರವಲಯದಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿ ಬೈಪಾಸ್ ರೋಡ್‌ನಿಂದಲೇ ವಾಪಸಾದರು. ಆದರೆ ಮುಂದಿನ ದಿನಗಳಲ್ಲಿ ಬರುತ್ತಾರೆ ಎನ್ನುವ ನಂಬಿಕೆ ಇದೆ. ಅವರು ಜಿಲ್ಲಾ ಕೇಂದ್ರಕ್ಕೆ ಬರಲಿ. ಅವರಿಗೆ ಚಾಮರಾಜೇಶ್ವರ ಒಳ್ಳೆಯದನ್ನು ಮಾಡುತ್ತಾನೆ.
-ಗೀತಾ ಮಹದೇವಪ್ರಸಾದ್, ಮಾಜಿ ಶಾಸಕರು.

ಇದನ್ನೂ ಓದಿ | International Tiger Day | 10 ವರ್ಷದಲ್ಲಿ ಹೆಚ್ಚಿದ 100 ಹುಲಿಗಳು; ಚಾಮರಾಜನಗರವೀಗ ಹುಲಿಗಳ ಬೀಡು!

Exit mobile version