Site icon Vistara News

ಚಾಮರಾಜಪೇಟೆ ಮೈದಾನದಲ್ಲಿ ಸರಕಾರದ ಉಸ್ತುವಾರಿಯಲ್ಲಿ ಗಣೇಶೋತ್ಸವ?: ಆ. 30ರಂದು ತೀರ್ಮಾನ

ashok cricket

ಬೆಂಗಳೂರು: ನಗರದ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ಸರಕಾರ ದೃಢವಾದ ತೀರ್ಮಾನ ಮಾಡಿದೆ. ಆದರೆ, ಹೇಗೆ ಆಚರಣೆ ಮಾಡಬೇಕು, ಯಾರು ಆಚರಣೆ ಮಾಡಬೇಕು, ಯಾರಿಗೆ ಅನುಮತಿ ಎನ್ನುವ ವಿಚಾರದಲ್ಲಿ ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಗುರುವಾರ ಚಾಮರಾಜಪೇಟೆ ನಾಗರಿಕ ವೇದಿಕೆಗಳ ಒಕ್ಕೂಟದ ಸಭೆ ನಡೆದಿದ್ದು, ಇದರಲ್ಲಿ ಯಾವುದೇ ಸಂಘಟನೆಗೆ ಅನುಮತಿ ನೀಡಿದರೂ ಪರವಾಗಿಲ್ಲ, ಒಂದೊಮ್ಮೆ ಸರಕಾರವೇ ಮುಂದೆ ನಿಂತು ಆಚರಿಸಿದರೂ ಓಕೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇಷ್ಟಾದರೂ ಸರಕಾರ ಮಾತ್ರ ತನ್ನ ಅಂತಿಮ ತೀರ್ಮಾನವನ್ನು ತಿಳಿಸಿಲ್ಲ. ಆಗಸ್ಟ್‌ ೩೦ರಂದು ಅಂದರೆ ಗಣೇಶ ಚತುರ್ಥಿಯ ಮುನ್ನಾದಿನ ತನ್ನ ತೀರ್ಮಾನವನ್ನು ಹೇಳುವುದಾಗಿ ತಿಳಿಸಿದೆ. ಇದನ್ನು ಗಮನಿಸಿದರೆ ಸರಕಾರ ಕಂದಾಯ ಇಲಾಖೆಯ ಉಸ್ತುವಾರಿಯಲ್ಲಿ ತಾನೇ ಉತ್ಸವವನ್ನು ನಡೆಸಲು ಮುಂದಾಗಿದೆಯೇ ಎಂಬ ಪ್ರಶ್ನೆಯೂ ಮೂಡಿದೆ.

ಗಣೇಶೋತ್ಸವ ಆಚರಣೆಗೆ ಐದು ಅರ್ಜಿಗಳು ಬಂದಿದ್ದು, ಅದರಲ್ಲಿ ಎರಡು ಚಾಮರಾಜಪೇಟೆಯದ್ದು. ಉಳಿದದ್ದು ಹೊರಗಿನದ್ದು. ಚಾಮರಾಜಪೇಟೆಯ ಅರ್ಜಿಗಳಲ್ಲಿ ಎರಡೂ ಚಾಮರಾಜಪೇಟೆಯ ನಾಗರಿಕ ವೇದಿಕೆಯ ಒಕ್ಕೂಟದ ಎರಡು ಗುಂಪುಗಳದ್ದು. ಅಧ್ಯಕ್ಷ ರಾಮೇಗೌಡ ಅವರ ನೇತೃತ್ವದ ತಂಡ ಆಗಸ್ಟ್‌ ೩೧ರಿಂದ ಮೂರು ದಿನ ಗಣೇಶೋತ್ಸವ ಆಚರಿಸಬೇಕು ಎಂಬ ಅಭಿಪ್ರಾಯ ಹೊಂದಿದೆ. ಇನ್ನೊಂದು ತಂಡ ಆಗಸ್ಟ್‌ ೩೧ರಿಂದ ೧೧ ದಿನಗಳ ಕಾಲ ಉತ್ಸವ ಆಚರಣೆಗೆ ಅವಕಾಶ ಕೋರಿದೆ.

ಗುರುವಾರ ಇವೂ ಸೇರಿದಂತೆ ಎಲ್ಲರ ಜತೆಗೆ ಸಚಿವ ಆರ್‌. ಅಶೋಕ್‌ ಅವರು ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಅವರು, ʻʻಸಾರ್ವಜನಿಕ ಜಾಗ ಆಗಿರುವುದರಿಂದ ಗಣೇಶ ಮೂರ್ತಿ ಕೂರಿಸೋದೇ ಉದ್ದೆಶ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂದಿದೆ. ಯಾರೇ ಗಣೇಶ ಕೂರಿಸಿದರೂ ನಮ್ಮ ಒಪ್ಪಿಗೆ ಇದೆ ಎಂದೂ ಹೇಳಿದ್ದಾರೆ. ಸದ್ಯ ಕಂದಾಯ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇನ್ನೆರಡು ದಿನದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆʼʼ ಎಂದು ಹೇಳಿದರು.

ಸುಪ್ರೀಂಕೋರ್ಟ್‌ಗೆ ಕೇವಿಯೆಟ್‌
ರಾಜ್ಯ ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಯಾವುದೇ ಆಚರಣೆ ನಡೆಸಲು ಸರಕಾರಕ್ಕೆ ಅವಕಾಶ ನೀಡಿದ ತೀರ್ಪು ಸೇರಿದಂತೆ ಎಲ್ಲ ವಿಚಾರಗಳನ್ನು ಆಧರಿಸಿ ಸೋಮವಾರ ವಕ್ಫ್ ಬೋರ್ಡ್ ಮೇಲ್ಮನವಿ ಸಲ್ಲಿಸೋ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದನ್ನು ತಿಳಿದುಕೊಂಡ ಕಂದಾಯ ಇಲಾಖೆ ಸುಪ್ರೀಂಕೋರ್ಟ್‌ಗೆ ಈಗಾಗಲೇ ಕೇವಿಯೆಟ್‌ ಹಾಕಿದೆ ಎಂದು ಸಚಿವ ಆರ್‌. ಅಶೋಕ್‌ ಹೇಳಿದರು.

ಕಂದಾಯ ಇಲಾಖೆ ಬ್ಲ್ಯೂಪ್ರಿಂಟ್‌ ರೆಡಿ
ಈ ನಡುವೆ, ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ಒಂದು ಈಗಾಗಲೇ ರೂಪರೇಷೆ ಸಿದ್ಧಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ. ಪೆಂಡಾಲ್‌ ಎಷ್ಟು ದೊಡ್ಡದಿರಬೇಕು. ಡೆಕೋರೇಷನ್ ಹೀಗೇ ಇರಬೇಕು, ಸುಗಮ ಸಂಗೀತ, ದೇವರ ಹಾಡು ಇರಬೇಕು ಎಂಬೆಲ್ಲ ಷರತ್ತುಗಳು ಇರುತ್ತವೆ ಎಂದು ಸಚಿವ ಆರ್‌ ಅಶೋಕ್‌ ತಿಳಿಸಿದರು.

ಇದನ್ನೂ ಓದಿ| ಚಾಮರಾಜಪೇಟೆ ಗಣೇಶೋತ್ಸವ ಪಕ್ಕಾ: ಯಾವ ಸಮಿತಿಗೆ ಅನುಮತಿ ಎನ್ನುವುದೇ ಈಗ ಉಳಿದಿರುವ ಲೆಕ್ಕ

Exit mobile version